ವಿಜಯಪುರ: ಡಿಸೆಂಬರ್ 5ರಂದು ನಡೆದ ಉಪಚುನಾವಣೆಯ ಫಲಿತಾಂಶದ ಬಗ್ಗೆ ಭವಿಷ್ಯ ನುಡಿದಿರುವ ಸಂಸದೆ ಶೋಭಾ ಕರಂದ್ಲಾಜೆ ರಾಜ್ಯದಲ್ಲಿ 15 ಕ್ಷೇತ್ರಗಳಲ್ಲೂ ಬಿಜೆಪಿ ಸರ್ಕಾರ ಗೆಲ್ಲುತ್ತದೆ. ಯಡಿಯೂರಪ್ಪ ನವರು ಇನ್ನು ಮೂರುವರೆ ವರ್ಷಗಳ ಕಾಲ ಸಿಎಂ ಆಗಿ ಮುಂದುವರೆಯುತ್ತದೆ ಎಂದು ಹೇಳಿದ್ದಾರೆ.
ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶೋಭಾ,
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಸಂಪೂರ್ಣ ಸ್ಥಿರವಾಗಿದ್ದು, ಉಪ ಚುನಾವಣೆ ಫಲಿತಾಂಶ ಹೊರ ಬಿದ್ದ ಬಳಿಕ ಪೂರ್ಣ ಬಹುಮತದೊಂದಿಗೆ ಮುಂದಿನ ಮೂರೂವರೆ ವರ್ಷ ಆಡಳಿತ ನೀಡಲಿದೆ ಎಂದಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ. ಇದರ ಹೊರತಾಗಿಯೂ ಕೆಲವರು ಸೋತರೆ ಯಾರನ್ನು ಹೊಣೆ ಮಾಡಬೇಕೆಂಬುದನ್ನು ಹೈಕಮಾಂಡ್ ನಿರ್ಧರಿಸಲಿದೆ ಎಂದರು.
ಸಂಸದ ಬಿ.ಎನ್.ಬಚ್ಚೇಗೌಡ ಕುಟುಂಬಕ್ಕೆ ಬಿಜೆಪಿ ಹೆಚ್ಚು ಅವಕಾಶ ನೀಡಿದರೂ ಅವರ ಪುತ್ರ ಪಕ್ಷ ವಿರೋಧಿ ಚಟುವಟಿಕೆ ಮೂಲಕ ಸ್ಪರ್ಧೆಗಿಳಿದಿದ್ದಾರೆ. ಇವರ ವರ್ತನೆಗೆ ಅಲ್ಲಿನ ಜನ ತಕ್ಕ ಪಾಠ ಕಲಿಸಲು ಮುಂದಾಗಿದ್ದರಿಂದ ಎಂ.ಟಿ.ಬಿ. ನಾಗರಾಜ ಅವರ ಗೆಲುವು ಖಚಿತ ಎಂದರು. ರಾಜ್ಯ ಹಾಗೂ ಕೇಂದ್ರದಲ್ಲಿ ಒಂದೇ ಪಕ್ಷದ ಸರ್ಕಾರ ಇದ್ದಲ್ಲಿ ಕೇಂದ್ರದಿಂದ ಹೆಚ್ಚಿನ ಅನುದಾನ ಪಡೆಯಲು ಸಹಕಾರಿ ಆಗುತ್ತದೆ.
ಪರಸ್ಪರ ಸರ್ಕಾರಗಳಲ್ಲಿ ಸಮನ್ವಯವೂ ಇರುತ್ತದೆ ಎಂದರು. ನೆರೆ ಸಂತ್ರಸ್ತರಿಗೆ ಪುನರ್ವಸತಿ ಹಾಗೂ ಪರಿಹಾರ ವಿತರಣೆಯಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಸಮರ್ಥವಾಗಿ ಹೊಣೆಗಾರಿಕೆ ನಿಭಾಯಿಸಿದೆ. ಯಾವ ಸಮೀಕ್ಷೆ ನಡೆಸದೇ ಬಾಧಿತರಿಗೆ ತುರ್ತು ಪರಿಹಾರ ನೀಡಿದ್ದೇವೆ. ಆದರೆ ಕೆಲ ತಾಂತ್ರಿಕ ಕಾರಣದಿಂದ ಬೆಳೆ ಪರಿಹಾರ ವಿತರಣೆಯಲ್ಲಿ ವಿಳಂಬವಾಗಿದೆಯೇ ಹೊರತು ಬೇರೆ ಕಾರಣವಿಲ್ಲ. ರಾಜ್ಯಕ್ಕೆ ನೆರೆ ಪರಿಹಾರ ವಿತರಣೆ ಸೇರಿದಂತೆ ಯಾವುದೇ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಕ್ಷಪಾತ ಧೋರಣೆ ಅನುಸರಿಸಿಲ್ಲ.
ಕೇಂದ್ರ ಸರ್ಕಾರವು ರಾಜ್ಯಕ್ಕೆ ಮಧ್ಯಂತರ ನೆರೆ ಪರಿಹಾರವಾಗಿ ಈಗಾಗಲೇ 3200 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಸಮೀಕ್ಷೆ ಮತ್ತೊಮ್ಮೆ ಮಾಡಲು ಸೂಚಿಸಿದ್ದಾರೆ. ಅದೇ ರೀತಿಯಲ್ಲಿ ಸಮೀಕ್ಷೆ ನಡೆದಿದ್ದು ಬಾಕಿ ಹಣವನ್ನು ಸಹ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ ನೀಡುತ್ತದೆ ಎಂಬ ಭರವಸೆ ನೀಡಿದರು.