ಒಂದು ಉಪಚುನಾವಣೆ ಹಲವಾರು ಬದಲಾವಣೆಗಳನ್ನು ತಂದಿದೆ. 12 ಕ್ಷೇತ್ರಗಳಲ್ಲಿ ಗೆದ್ದ ಅರ್ಹ ಶಾಸಕರಿಗೆ ಸಚಿವ ಸ್ಥಾನದ ಭಾಗ್ಯ ಒಲಿದರೆ ಇತ್ತ ಕಾಂಗ್ರೆಸ್ ನಲ್ಲಿ ರಾಜೀನಾಮೆ ಪರ್ವ ಶುರುವಾಗಿದೆ. ಸಿ.ಎಲ್.ಪಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ ಗುಂಡೂರಾವ್‌ ರಾಜೀನಾಮೆ ನೀಡಿದ ಬೆನ್ನಲ್ಲೇ ಕೆಪಿಸಿಸಿ ಜವಾಬ್ದಾರಿ ಹೊರಲು ರಾಜ್ಯ ನಾಯಕರ ಮಧ್ಯೆಯೇ ಫೈಟ್ ಆರಂಭವಾಗಿದ್ದು ಡಿಕೆಶಿ, ಎಂಬಿ ಪಾಟೀಲ್, ಎಚ್‌.ಕೆ ಪಾಟೀಲ್ ಜತೆ ಈಗ ಮುನಿಯಪ್ಪ ಸರದಿ ಶುರುವಾಗಿದೆ. 
 
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಡಿಕೆಶಿ, ಎಂಬಿ ಪಾಟೀಲ್, ಎಚ್‌.ಕೆ.ಪಾಟೀಲ್ ಜೊತೆಗೆ ಕೆ.ಎಚ್‌.ಮುನಿಯಪ್ಪ ಅವರ ಹೆಸರು ಕೂಡ ಈಗ ಸೇರಿಕೊಂಡಿದ್ದು ಈ ಸಂಬಂಧ ದಿಲ್ಲಿಗೆ ತೆರಳಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಉಪ ಚುನಾವಣೆ ಸೋಲಿನ ಹೊಣೆಹೊತ್ತು ಮಾಜಿ ಸಿಎಂ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌ ನೀಡಿರುವ ರಾಜೀನಾಮೆಯನ್ನು ಮರುಪರಿಶೀಲಿಸಬೇಕೆಂಬ ಮಾತು ಕೇಳಿಬರುತ್ತಿದೆ. ಮತ್ತೊಂದೆಡೆ ಗುಂಡೂರಾವ್ ನೀಡಿರುವ ರಾಜೀನಾಮೆ ಅಂಗೀಕಾರವಾದರೆ ಪಕ್ಷವನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆ ಕಾಂಗ್ರೆಸ್ ಅನ್ನು ಕಾಡುತ್ತಿದೆ. 
 
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಡಿಕೆ ಶಿವಕುಮಾರ್ ಹಾಗೂ ಎಂಬಿ ಪಾಟೀಲ್ ಹೆಸರು ಕೇಳಿಬರುತ್ತಿದ್ದು ಇವರ ಜೊತೆಗೆ ಎಚ್‌.ಕೆ ಪಾಟೀಲ್ ಹೆಸರು ಚಾಲ್ತಿಯಲ್ಲಿದೆ. ಈಗ ಕೆ.ಎಚ್‌. ಮುನಿಯಪ್ಪ ಅವರು ಕೂಡ ಈ ಸಾಲಿಗೆ ಸೇರಿಕೊಂಡಿದ್ದಾರೆ. ನನಗೂ ಅನುಭವ ಇದೆ. ಅವಕಾಶ ದೊರೆತರೆ ಸೇವೆ ಸಲ್ಲಿಸಲು ಸಿದ್ಧ ಎಂದು ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ಹೇಳಿದ್ದು, ಕೆಪಿಸಿಸಿ ಅಧ್ಯಕ್ಷರಾಗಲು ಬಯಸಿರುವ ಅವರು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರೊಂದಿಗೆ ಈ ಸಂಬಂಧ ಮಾತನಾಡಲುದಿಲ್ಲಿಗೆ ತೆರಳಿದ್ದರು ಎಂದು ತಿಳಿದುಬಂದಿದೆ. 
 
ರಾಜಕೀಯ ನೈತಿಕತೆ ಕುರಿತುಮಾತನಾಡುವ ಮೋದಿ ಅವರಿಗೆ ಕಾಂಗ್ರೆಸ್‌ ಜೆಡಿಎಸ್‌ ಶಾಸಕರನ್ನು ರಾಜೀನಾಮೆ ಕೊಡಿಸಿ ಅಧಿಕಾರಕ್ಕೆ ಬರುವುದು ನೈತಿಕತೆಯೇ ಎಂದು ಪ್ರಶ್ನೆ ಮಾಡಬೇಕು.ಉಪ ಚುನಾವಣೆ ಫಲಿತಾಂಶವನ್ನು ಮೋದಿ ನೈತಿಕ ಗೆಲುವು ಎಂದರೆ ಅದಕ್ಕಿಂತ ಮೂರ್ಖತನ ಬೇರೊಂದಿಲ್ಲ ಎಂದು ಖರ್ಗೆ ಗುಡುಗಿದ್ದಾರೆ.

Find out more: