ಕೊಪ್ಪಳ: ಕೇಂದ್ರ ಸರ್ಕಾರ ಭಾವನಾತ್ಮಕ ವಿಷಯಗಳನ್ನು ತಮಗೆ ಬೇಕಾಗುವ ರೀತಿಯಲ್ಲಿ ಜನರನ್ನು ಮರುಳು ಮಾಡುತ್ತಾ ಅದನ್ನು ಸಾಧಿಸುತ್ತಿದ್ದಾರೆ. ಅದು ತಪ್ಪು, ಜನರು ಅವರ ಮಾತುಗಳನ್ನು ನಂಬಬಾರದು, ಸತ್ಯಾಸತ್ಯತೆ ಯನ್ನು ಪರಿಶೀಲಿಸಿ ನಿರ್ಣಯ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ನ ಪ್ರಭಾವಿ ಮಾಜಿ ಸಚಿವರು ಬಿಜೆಪಿ ವಿರುದ್ಧ ಗುಡುಗಿದ್ದಾರೆ. ಹೌದು, ಅವರು ಏನ್ ಹೇಳಿದ್ದಾರೆ ನೀವೆ ನೋಡಿ.
ಕೇಂದ್ರ ಸರಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಭಾವನಾತ್ಮಕ ವಿಷಯಗಳನ್ನು ಹರಿಬಿಟ್ಟು ಜನರನ್ನು ದಿಕ್ಕು ತಪ್ಪಿಸುತ್ತಿದೆ ಎಂದು ಮಾಜಿ ಸಚಿವ ಯು ಟಿ ಖಾದರ್ ಹೇಳಿದರು. ಕುಷ್ಟಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವೇಳೆ ಬಿಜೆಪಿ ವಿರುದ್ಧ ಖಾದರ್ ವಾಗ್ದಾಳಿ ನಡೆಸಿದರು. ಪೌರತ್ವ ತಿದ್ದುಪಡಿ ಬಿಲ್ ಇನ್ನೂ ಕಾಯ್ದೆಯಾಗಿ ಜಾರಿಯಾಗುವ ಮೊದಲೇ ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸುವುದಾಗಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ದಕ್ಷಿಣ ಭಾರತದ ಯಾವ ರಾಜ್ಯವೂ ಈ ಬಗ್ಗೆ ಚಕಾರ ಎತ್ತಿಲ್ಲ.
ಯಡಿಯೂರಪ್ಪ ಹೇಳಿಕೆಯೇ ವಿವಾದಾತ್ಮಕವಾಗಿದೆ. ಬೇರೆ ಕಡೆಗಳಲ್ಲಿ ಪ್ರತಿಭಟನೆ ನಡೆದರೆ ರಾಜ್ಯದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇದರಿಂದಾಗಿ ಜನರಲ್ಲಿ ಭಯ ಮೂಡಿದೆ ಎಂದು ಖಾದರ್ ಹೇಳಿದ್ದಾರೆ. ಅಂಬೇಡ್ಕರ್, ಮಹಾತ್ಮ ಗಾಂಧಿಯವರ ಆಶಯದ ಭಾರತದಲ್ಲಿ ನಾವೆಲ್ಲ ಬದುಕಬೇಕಿದೆ. ಆದರೆ ಬಿಜೆಪಿ ಆಶಯದ ದೇಶದಲ್ಲಲ್ಲ. ಬೇರೆ ರಾಜ್ಯಗಳಲ್ಲಿ ಚುನಾವಣೆ ಬಂದಾಗ ಬಿಜೆಪಿ ಇಂತಹ ಭಾವನಾತ್ಮಕ ವಿಷಯಗಳನ್ನು ಹರಿಬಿಡುತ್ತದೆ. ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ವಿಧೇಯಕವನ್ನು ವಿರೋಧಿಸಿ ನಡೆದಿರುವ ಹೋರಾಟದ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎನ್ನುವುದರಲ್ಲಿ ಅರ್ಥವಿಲ್ಲ.
ಬುಧವಾರ ನಾನು ನೀಡಿರುವ ಹೇಳಿಕೆಯನ್ನು ತಿರುಚಿ ಮಾಧ್ಯಮಗಳು ವರದಿ ಮಾಡಿವೆ. ಪೌರತ್ವ ತಿದ್ದುಪಡಿ ವಿಧೇಯಕ ವಿರೋಧಿಸಿ ದೇಶದ ಬೇರೆ ರಾಜ್ಯಗಳು ಹೊತ್ತಿ ಉರಿದಂತೆ ರಾಜ್ಯದಲ್ಲೂ ಕಿಚ್ಚು ಹೊತ್ತಲಿದೆ ಎಂದು ಹೇಳಿದ್ದೆ. ಇದಕ್ಕೆ ನನ್ನನ್ನು ಬಂಧಿಸುವಂತೆ ಪ್ರಮೋದ್ ಮುತಾಲಿಕ್ ಹೇಳಿಕೆ ಕೊಟ್ಟಿದ್ದಾರೆ. ದೇಶಕ್ಕಾಗಿ ನಾನು ಜೈಲಿಗೆ ಹೋಗಲು ಅಷ್ಟೇ ಏಕೆ ನೇಣಿಗೇರಲೂ ಸಿದ್ಧ ಎಂದು ಕೊಪ್ಪಳ ಜಿಲ್ಲೆ ಕುಷ್ಟಗಿಯಲ್ಲಿ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.