ತುಮಕೂರು: ಕಲ್ಪತರು ನಾಡು, ಶೈಕ್ಷಣಿಕ ನಾಡು ಎಂದೇ ಖ್ಯಾತಿ ಪಡೆದಿರುವ ತುಮಕೂರಿಗೆ ಜನವರಿ 2 ರಂದು ಪ್ರಧಾನಿ ಮೋದಿ ಭೇಟಿ ನೀಡುತ್ತಿದ್ದಾರೆ. ಹೌದು, ನಗರದ ಸರಕಾರಿ ಜೂನಿಯರ್ ಕಾಲೇಜ್ ಮೈದಾನದಲ್ಲಿ ಕಿಸಾನ್ ಸಮ್ಮಾನ್ ಯೋಜನೆಯ 2 ನೇ ಹಂತ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂಬುದು ನಿಜ, ಆದರೆ ಕರ್ನಾಟಕ ಪ್ರವಾಸದ ಹಿಂದೆ ಇರುವ ಗುಟ್ಟೇ ಬೇರೆ. ಹೌದು, ಆ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.
ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆಯಲ್ಲಿ ಈಗಾಗಲೇ ಸಕಲ ಸಿದ್ಧತೆ ಆರಂಭವಾಗಿದ್ದು, ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಸಚಿವ ವಿ ಸೋಮಣ್ಣ ಅವರು ಕಾರ್ಯಕ್ರಮ ನಡೆಯಲಿರುವ ಸ್ಥಳವನ್ನು ಶುಕ್ರವಾರ ಪರಿಶೀಲನೆ ನಡೆಸಿದ್ದಾರೆ. ಕಾರ್ಯಕ್ರಮದ ಸ್ಥಳ ಪರಿಶೀಲನೆ ನಂತರ ಉಭಯ ನಾಯಕರು ಮಾಧ್ಯಮದವರೊಂದಿಗೆ ಮಾತನಾಡಿದರು. ಜನವರಿ2 ರಂದು ಕಿಸಾನ್ ಸಮ್ಮಾನ್ ಯೋಜನೆಯ 2 ನೇ ಹಂತ ಲೋಕಾರ್ಪಣೆ ಮಾಡುವ ಉದ್ದೇಶದಿಂದ ನರೇಂದ್ರ ಮೋದಿ ಅವರು ತುಮಕೂರಿಗೆ ಆಗಮಿಸುತ್ತಿದ್ದಾರೆ . ಸುಮಾರು ಒಂದು ಲಕ್ಷ ರೈತರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಜನವರಿ 2ರಂದು ಸಂಜೆ ನಾಲ್ಕು ಗಂಟೆಗೆ ಪ್ರಧಾನಿ ಮೋದಿ ತುಮಕೂರಿಗೆ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಮೋದಿ ಶೈಕ್ಷಣಿಕ ನಗರಕ್ಕೆ ಭೇಟಿ ನೀಡಿದ ತಕ್ಷಣವೇ, ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆ ದರ್ಶನ ಮಾಡಲಿದ್ದಾರೆ. ಹಾಗೂ ಸಿದ್ದಲಿಂಗಸ್ವಾಮಿಗಳ ಆಶಿರ್ವಾದ ಪಡೆಯಲಿದ್ದಾರೆ. ನಂತರ ಮಠದ ಮಕ್ಕಳ ಜೊತೆ. ಹತ್ತು ನಿಮಿಷಗಳ ಕಾಲ ಸಂವಾದ ನಡೆಸಲಿದ್ದಾರೆ. ಸುಮಾರು 40 ನಿಮಿಷಗಳ ಕಾಲ ಸಿದ್ದಗಂಗಾ ಮಠದಲ್ಲಿ ಇರಲಿದ್ದಾರೆ. ಇದಾದ ಬಳಿಕ ಕಿಸಾನ್ ಸಮ್ಮಾನ್ ಯೋಜನೆ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಮೋದಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಒಂದು ಸಾವಿರ ಕೆಎಸ್ಆರ್ಟಿಸಿ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ರಾಷ್ಟ್ರದ ಒಟ್ಟು 40 ಪ್ರಗತಿಪರ ರೈತರಿಗೆ ಸನ್ಮಾನ ಮಾಡಲಾಗುತ್ತದೆ. ನಂತರ ಸಂಜೆ 5.30 ಕ್ಕೆ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ತುಮಕೂರಿಗೆ ಹೆಲಿಕಾಪ್ಟರ್ ಮೂಲಕ ಆಗಮಿಸಲಿರುವ ಪ್ರಧಾನಿ ಮೋದಿ ತುಮಕೂರು ವಿವಿ ಹೆಲಿಪ್ಯಾಡ್ ಗೆ ಬಂದಿಳಿಯಲಿದ್ದಾರೆ.