ಬಾಗಲಕೋಟೆ: ಉಪ ಚುನಾವಣೆಯಲ್ಲಿ ಸಂಚಲನ ಮೂಡಿಸಿದ್ದ "ಹೌದು ಹುಲಿಯಾ" ಡೈಲಾಗ್ ಇದೀಗ ಮತ್ತೇ ಶುರುವಾಗಿದೆ. ಹೌದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದ ಡೈಲಾಗ್ ಇದು. ರಾಜ್ಯದಲ್ಲಿ ಮಾತ್ರವಲ್ಲದೇ ಕೊನೆಗೆ ಜಪಾನಿಗರಿಗೂ ತಲುಪಿ ಅವರ ಬಾಯಿಂದಲೂ " ಹುಲಿಯಾ" ಡೈಲಾಗ್ ಮಿಂಚು ಹರಿಸಿತ್ತು.ಇದೀಗ ಇದೇ ಹೆಸರಿನಲ್ಲಿ ನಾಟಕವೊಂದು ಪ್ರದರ್ಶನಕ್ಕೆ ಸಿದ್ಧವಾಗಿದೆ! ಹೌದು, ಶಾಕ್ ಆದರೂ ನಂಬಲೇ ಬೇಕಾದ ಸುದ್ದಿಯಿದು. 
 
ಉಪ ಚುನಾವಣೆ ಪ್ರಚಾರದಲ್ಲಿ ಬೆಳಗಾವಿ ಜಿಲ್ಲೆಯ ಕಾಗವಾಡದಲ್ಲಿ ಅಭಿಮಾನಿ ಪೀರಪ್ಪ ಕಟ್ಟೀಮನಿ ಅವರು ಸಿದ್ದರಾಮಯ್ಯ ಅವರನ್ನು `ಹೌದು ಹುಲಿಯಾ' ಎಂದು ಶ್ಲಾಘಿಸಿದ್ದರು. ಈ ಶ್ಲಾಘನೆಯ ವಾಕ್ಯ ಸಾಮಾಜಿಕ ತಾಣಗಳಲ್ಲಿ ಮಿಂಚು ಹರಿಸಿತ್ತು. ನೂರಾರು ಜನರು ಟಿಕ್ ಟಾಕ್ ವಿಡಿಯೋಗಳ ಮೂಲಕ ಈ ಘೋಷವಾಕ್ಯವನ್ನು ಪ್ರಚಾರಗೊಳಿಸಿದ್ದರು. ನಂತರ ಸಿಎಂ ಯಡಿಯೂರಪ್ಪ ಅವರನ್ನು ‘ರಾಜಾ ಹುಲಿ’ ಎಂದೂ ಕರೆದು ಭಾರೀ ಹವಾ ಸೃಷ್ಟಿಸುವಲ್ಲಿ ಯಶಸ್ವಿಯಾಗಿತ್ತು.  ಇದೀಗ ಬಾದಾಮಿಯ ಬನಶಂಕರಿ ದೇವಿ ಜಾತ್ರೆ ಜ. 10 ರಿಂದ 1 ತಿಂಗಳು ನಡೆಯಲಿದ್ದು, ಇಲ್ಲಿ `ಹೌದ್ದ ಹುಲಿಯಾ' ಎಂಬ ಹೆಸರಿನ ನಾಟಕ  ಪ್ರದರ್ಶನಗೊಳ್ಳುತ್ತಿದೆ. ಅಂದ ಹಾಗೆ ಸಿದ್ದರಾಮಯ್ಯನವರ ಸ್ವಕ್ಷೇತ್ರದ ಜಾತ್ರೆಯಲ್ಲಿಯೇ ಈ ಹೆಸರಿನ ನಾಟಕ ಪ್ರದರ್ಶನಗೊಳ್ಳುತ್ತಿರುವುದು ವಿಶೇಷವಾಗಿದೆ. 
 
`ಹೌದೋ ಹುಲಿಯಾ' ವಾಕ್ಯವನ್ನೇ ಕೊಂಚ ಬದಲಾಯಿಸಿ `ಹೌದ್ದ ಹುಲಿಯಾ' ಎಂದು ಮಾಡಲಾಗಿದೆ. ಕಮತಗಿಯ ಹುಚ್ಚೇಶ್ವರ ನಾಟ್ಯ ಸಂಘದಿಂದ ನಾಟಕ ಪ್ರದರ್ಶಿಸಲಾಗುತ್ತಿದೆ. ಪ್ರತಿ ದಿನ ಸಂಜೆ 6.15, ರಾತ್ರಿ 9.30 ಹಾಗೂ ಬೆಳಗಿನ ಜಾವ 1.30  ಕ್ಕೆ ನಾಟಕ ಪ್ರದರ್ಶನವಾಗಲಿದೆ. ಮಹೇಶ ಕಲ್ಲೋಳ ರಚಿಸಿರುವ ನಾಟಕ ಹೊಸ ತಂತ್ರಜ್ಞಾನದೊಂದಿಗೆ ಪ್ರದರ್ಶನವಾಗಲಿದೆ ಎಂದು ಪ್ರಚಾರ ಮಾಡಲಾಗುತ್ತಿದೆ. ಒಂದು ತಿಂಗಳು ನಡೆಯುವ ಜಾತ್ರೆಯಲ್ಲಿ 6 ಕ್ಕೂ ಹೆಚ್ಚು ಕಂಪನಿಗಳು ನಾಟಕ ಪ್ರದರ್ಶಿಸುತ್ತವೆ. ವೃತ್ತಿ ರಂಗಭೂಮಿಗೆ ಬಾದಾಮಿ ಜಾತ್ರೆ ಹೊಸ ವೇದಿಕೆಯನ್ನೇ ಕಲ್ಪಿಸುತ್ತದೆ. ಪ್ರಸ್ತುತ ಹೌದು ಹುಲಿಯಾ ಟೈಟಲ್ ನ ನಾಟಕ ನಡೆಯಲಿದ್ದು, ಇದರಲ್ಲೇನಿರಬಹುದು ಅಂತಹದ್ದು  ಎಂಬುದು ಪ್ರಸ್ತುತ ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ

Find out more: