ಬೆಂಗಳೂರು: ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ಕುರಿತಾಗಿ ಹಲವು ದಿನಗಳಿಂದ ಕಾಡುತ್ತಿತ್ತು. ಪಬ್ಲಿಕ್ ಪರೀಕ್ಷೆ ನಡೆಸಲಾಗುತ್ತದೆ, ವಿದ್ಯಾರ್ಥಿಗಳಿಗೆ ಇಲ್ಲಿಂದಲೇ ಫಾಸು ಫೇಲು ಇರುತ್ತೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಎಲ್ಲಾ ಗೊಂದಲಗಳಿಗೆ ಇದೀಗ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ತೆರೆ ಎಳೆದಿದ್ದಾರೆ.
ಪಬ್ಲಿಕ್ ಪರೀಕ್ಷೆ ನಡೆಸದೇ, ಪ್ರಸಕ್ತ ಸಾಲಿನಲ್ಲೇ ಸಾಮಾನ್ಯ ಮೌಲ್ಯಾಂಕನ ಪರೀಕ್ಷೆ ನಡೆಸಲಿದ್ದೇವೆ. ಆಯಾ ಶಾಲೆಗಳಲ್ಲೇ ಪರೀಕ್ಷೆ ನಡೆಯಲಿದೆ. ಪ್ರಶ್ನೆ ಪತ್ರಿಕೆಯನ್ನು ರಾಜ್ಯಮಟ್ಟದಲ್ಲಿ ಸಿದ್ಧಪಡಿಸಿ ಶಾಲೆಗಳಿಗೆ ನೀಡುತ್ತೇವೆ. ಮೌಲ್ಯಮಾಪನ ಕಾರ್ಯ ಜಿಲ್ಲಾ ಮಟ್ಟದ ಡಯಟ್ ಕೇಂದ್ರದಲ್ಲಿ ನಡೆಯಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಮಂಗಳವಾರ ತಿಳಿಸಿದರು. 7ನೇ ತರಗತಿ ವಿದ್ಯಾರ್ಥಿಗಳಿಗೆ ಈ ರೀತಿಯ ಮೌಲ್ಯಾಂಕನ ಪರೀಕ್ಷೆ ನಡೆಸುವುದರಿಂದ ಎಸ್ಸೆಸ್ಸೆಲ್ಸಿಯಲ್ಲಿ ಪರೀಕ್ಷಾ ಭಯ ಕಡಿಮೆಯಾಗುತ್ತದೆ. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿರುವ ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು ಎಲ್ಲ ಸಿದ್ಧತೆ ಮಾಡಿಕೊಂಡಿದೆ ಎಂದು ಹೇಳಿದರು.
ಈಗಾಗಲೇ ರಾಜ್ಯಾದ್ಯಂತ ವಿದ್ಯಾರ್ಥಿಗಳನ್ನು ಈ ವ್ಯವಸ್ಥೆಗೆ ಸಜ್ಜುಗೊಳಿಸಲು ಶಿಕ್ಷಕರಿಗೆ ತಿಳಿಸಲಾಗಿದೆ. ಈಗಾಗಲೇ ಬೆಳಗಾವಿಯಲ್ಲಿ ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಿದೆ. ಕಲಬುರಗಿ, ವಿಜಯಪುರದಂತಹ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳು ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ತುಂಬಾ ಹಿಂದುಳಿದಿದ್ದಾರೆ.ಅವರನ್ನು ಅಭಿವೃದ್ಧಿ ಗೊಳಿಸಲು ಇದು ಸಹಾಯಕವಾಗಲಿದೆ.
ಸಮಗ್ರ ನಿರಂತರ ಮೌಲ್ಯಮಾಪನ ಮಾದರಿಯಲ್ಲಿ ಈಗಾಗಲೇ ಶಾಲಾ ಹಂತದಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಇದರ ಭಾಗವಾಗಿ 7ನೇ ತರಗತಿ ವಿದ್ಯಾರ್ಥಿಗಳಿಗೆ ಸ್ವಲ್ಪ ವಿಭಿನ್ನವಾಗಿ ಪರೀಕ್ಷೆ ನಡೆಸಲಿದ್ದೇವೆ. ಪರೀಕ್ಷೆಯ ನಂತರ ಮೌಲ್ಯಮಾಪನವನ್ನು ಜಿಲ್ಲಾ ಡಯಟ್ ಕೇಂದ್ರಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಶಾಲಾ ಶಿಕ್ಷಕರಿಂದ ಮೌಲ್ಯಮಾಪನ ಮಾಡಿಸಿ ವಿದ್ಯಾರ್ಥಿಗಳ ರಿಪೋರ್ಟ್ ಕಾರ್ಡ್ ಸಿದ್ಧಮಾಡಿ, 8, 9 ಹಾಗೂ 10ನೇ ತರಗತಿಯಲ್ಲಿ ಇದರ ಆಧಾರದ ಮೇಲೆ ಪ್ರತಿ ವಿದ್ಯಾರ್ಥಿಯ ಮೇಲೂ ವಿಶೇಷ ನಿಗಾ ಇಡಲಾಗುತ್ತದೆ. ಅವರ ಕಲಿಕೆಗೂ ಅನುಕೂಲವಾಗಲಿದೆ ಎಂದು ಹೇಳಿದರು. ಇದೀಗ ಗೊಂದಲ ನಿವಾರಣೆಯಾಗಿದ್ದು, ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.