ಶಿವಮೊಗ್ಗ: ನಾಡಿನೆಲ್ಲೆಡೆ ಬುಧವಾರ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ ಸಡಗರ ಮನೆ ಮಾಡಿದೆ. ಅದರಂತೆ, ಹತ್ತಾರು ಕೆಲಸಗಳಲ್ಲಿ ಬ್ಯೂಸಿಯಾಗಿದ್ದರು ಕೂಡ ಬಿಡುವು ಮಾಡಿಕೊಂಡು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೂಡ ತಮ್ಮ ತವರು ಕ್ಷೇತ್ರದಲ್ಲಿ ಸಂಕ್ರಾಂತಿ ಹಬ್ಬವನ್ನ ತಮ್ಮ ಕುಟುಂಬದವರೊಂದಿಗೆ ಆಚರಿಸಿ, ಸಿಹಿ ಹಂಚಿದ್ದು  ವಿಶೇಷವಾಗಿತ್ತು. 
 
ಶಿಕಾರಿಪುರದ ತಮ್ಮ ನಿವಾಸದಲ್ಲಿ ಬುಧವಾರ ವಿಶೇಷ ಪೂಜೆ ನೆರವೇರಿಸಿದ ಬಿ.ಎಸ್. ಯಡಿಯೂರಪ್ಪ, ತಮ್ಮ ಸ್ವಗೃಹದಲ್ಲಿ ಸ್ವತಃ ತಾವೇ ದೇವರಿಗೆ ಆರತಿ ಬೆಳಗಿ, ನಮಸ್ಕರಿಸಿದರು. ಜೊತೆಗೆ ತಮ್ಮ ಮೊಮ್ಮಗಳಿಂದ ಎಳ್ಳು ಬೆಲ್ಲವನ್ನ ಸ್ವೀಕರಿಸಿ, ಹಬ್ಬದ ಶುಭಾಶಯ ಕೋರಿದರು. ಇನ್ನು ಸಿಎಂ ಯಡಿಯೂರಪ್ಪ ಅವರ ಮಕ್ಕಳಾದ ಅರುಣಾದೇವಿ, ಸಂಸದ ರಾಘವೇಂದ್ರ ಹಾಗೂ ಮೊಮ್ಮಕ್ಕಳು, ಯಡಿಯೂರಪ್ಪ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.
 
ಸಿಎಂ ಬಿ.ಎಸ್.​ವೈ ಹಾಗೂ ಸಂಸದ ರಾಘವೇಂದ್ರ, ತಮ್ಮ ನಿವಾಸದಲ್ಲಿ ಸೇರಿದ್ದ ತಮ್ಮ ಆಪ್ತರಿಗೆ, ಅಧಿಕಾರಿಗಳಿಗೆ, ಎಳ್ಳು-ಬೆಲ್ಲ ನೀಡಿ ಶುಭ ಹಾರೈಸಿದರು. ಇದಕ್ಕೂ ಮುನ್ನ ಮಾದ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನಾಡಿನ ಜನತೆಗೆ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದರು. ಪ್ರತಿವರ್ಷ ಹಬ್ಬದ ಸಮಯದಲ್ಲಿ ಬೇರೆ ಕಡೆ ಇರುತ್ತಿದೆ. ಆದರೆ ಈ ಬಾರಿ ವಿಶೇಷವಾಗಿ ಶಿಕಾರಿಪುರದಲ್ಲಿಯೇ ಇದ್ದು ಹಬ್ಬ ಆಚರಿಸುತ್ತಿದ್ದೇನೆ ಎಂದು ತಿಳಿಸಿದರು. 
 
ಅದಾದ ಬಳಿಕ ಬಿ.ಎಸ್.​ವೈ ತಮ್ಮ ಆರಾಧ್ಯ ದೈವ ಶಿಕಾರಿಪುರದ ಹುಚ್ಚುರಾಯ ಸ್ವಾಮಿ ದೇವಾಲಯಕ್ಕೆ ತೆರಳಿ, ಸಂಕ್ರಾಂತಿ ಹಬ್ಬದ ಪ್ರಯುಕ್ತವಾಗಿ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೇ, ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಸ್ವತಃ ಅವರೇ ಆರತಿ ಮಾಡಿ ಪೂಜೆ ಸಲ್ಲಿಸಿದರು. ಬಳಿಕ ಇದೇ ವೇಳೆ, ಸಾರ್ವಜನಿಕ ರಿಂದ ಅಹವಾಲು ಆಲಿಸಿದ ಸಿಎಂ ಯಡಿಯೂರಪ್ಪ, ಪ್ರತಿಯೊಬ್ಬರಿಗೂ ಹಬ್ಬದ ಶುಭಾಶಯ ಕೋರಿದರು. ಇಂದು ಸಿಎಂ ತವರು ಕ್ಷೇತ್ರ ಭೇಟಿ ಕೇವಲ ಹಬ್ಬಕ್ಕೆ ಮಾತ್ರ ಸೀಮಿತ ವಾದಂತಾಯ್ತು. ಸಂಪುಟದ ಸಂಕಟ ಅನುಭವಿಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ನವರಿಗೆ ಈ ಸಂಕ್ರಾಂತಿ ನೆಮ್ಮದಿ ತರಲಿದೆಯಾ ಎಂಬುದು ಕಾದು ನೋಡ ಬೇಕಾಗಿದೆ.
 
 

Find out more: