ಶಿವಮೊಗ್ಗ : ಮಂಗಳೂರು ಬಾಂಬ್ ಪ್ರಕರಣದಲ್ಲಿ ಆರೋಪಿ ಆದಿತ್ಯ ರಾವ್ ನನ್ನು ಸಮರ್ಥಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಯಾರೇ ಆಗಲಿ ಎಲ್ಲರಿಗೂ ಒಂದೇ ಕಾನೂನು. ಕಾನೂನಿಗೆ ಎಲ್ಲರೂ ತಲೆ ಬಾಗಲೇ ಬೇಕು. ತಪ್ಪು ಮಾಡಿದವನನ್ನು ನಾವೇನು ಸಮರ್ಥಿಸಿಕೊಳ್ಳುತ್ತಿಲ್ಲ. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಅನಗತ್ಯವಾಗಿ ಪೊಲೀಸರ ಮೇಲೆ ಅನುಮಾನ ವ್ಯಕ್ತ ಪಡಿಸುತ್ತಿದ್ದಾರೆ. ಈ ಮೂಲಕ ಪೊಲೀಸರ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಗುಡುಗಿದ್ದಾರೆ.
ನಗರದಲ್ಲಿ ಮಾತಾನಾಡಿದ ಅವರು ಘಟನೆ ಬಗ್ಗೆ ಮಾಹಿತಿ ತನಿಖೆ ಪ್ರಗತಿಯಲ್ಲಿದ್ದು ವರದಿ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಯಾರು ತಪ್ಪು ಮಾಡಿರುತ್ತಾರೋ ಅವರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ. ಕಾನೂನಿನ ಎದುರು ಎಲ್ಲರು ಸಮಾನರೆ. ಸಚಿವ ಸಂಪುಟ ರಚನೆ ಕೆಲ ರಾಜ್ಯದಲ್ಲಿನ ಚುನಾವಣೆ, ಪೌರತ್ವ ಮಸೂದೆ ಜಾರಿ ಮತ್ತಿತರ ಕಾರಣಗಳಿಂದ ವಿಳಂಬವಾಗಿದೆ. ಪಕ್ಷೇತರ ಶಾಸಕ ಶಂಕರ್, ಮಸ್ಕಿ ಶಾಸಕ ಪಾಟೀಲ್ ಹಾಗೂ ಆರ್.ಆರ್.ಕ್ಷೇತ್ರದ ಶಾಸಕ ಮುನಿರತ್ನ ಅವರಿಗೆ ಸಚಿವ ಸ್ಥಾನ ನೀಡಲೇಬೇಕಿದೆ. ಇನ್ನುಳಿದವರ ಕುರಿತು ಪಕ್ಷದ ವರಿಷ್ಠರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದರು.
ಹೈ ಕಮಾಂಡ್ ಹೇಳಿದರೆ ಹಾಲಿ ಸಚಿವರು ತಮ್ಮ ಸ್ಥಾನವನ್ನು ತ್ಯಾಗ ಮಾಡಬೇಕಾಗುತ್ತದೆ. ಬಿಜೆಪಿಯಲ್ಲಿ ಮೂಲ ಹಾಗೂ ವಲಸಿಗರು ಎಂಬ ವ್ಯತ್ಯಾಸವಿಲ್ಲ. ನಾವು ಹಾಲು ಸಕ್ಕರೆಯಂತೆ ಬೆರೆತು ಹೋಗಿದ್ದೇವೆ. ಆದರೆ ಕಾಂಗ್ರೆಸ್ ನಲ್ಲಿ ಮೂಲ ಹಾಗೂ ವಲಸಿಗ ಎಂಬ ವ್ಯತ್ಯಾಸವಿದೆ.ಕಾಂಗ್ರೆಸ್ ನವರು ಹಾಲು ಸಕ್ಕರೆಯಂತೆ ಬೆರೆಯದೆ ಹಾಲು ವಿಷದಂತಾಗಿದ್ದಾರೆ. ಸಿದ್ದರಾಮಯ್ಯ ಅವರನ್ನು ಹೊರಹಾಕಲು ಡಿಕೆಶಿ ಸೇರಿದಂತೆ ಮೂಲ ಕಾಂಗ್ರೆಸಿಗರು ಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು.
ಸಚಿವ ಕೆ. ಎಸ್ ಈಶ್ವರಪ್ಪ ಈ ಮಾತು ಗಳನ್ನು ಆಡುವುದರ ಹಿಂದಿರುವ ಒಳ ಅರ್ಥಗಳೇ ಬೇರೆ ಇವೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಆದರೆ ತನಿಖೆ ನಡೆಸಲಾಗುತ್ತಿದೆ ತನಿಖೆ ನಡೆದ ಮೇಲೆ ಕಾನೂನಿನ ಪ್ರಕಾರ ಏನು ಮಾಡಬೇಕೊ ಅದನ್ನೇ ಮಾಡಲಾಗುವುದು ಎಂದು ಈಶ್ವರಪ್ಪ ಎಂದಿದ್ದಾರೆ.