ಬೆಂಗಳೂರು: ಮಠಮಾನ್ಯಗಳಿಗೆ ಸ್ಥಗಿತಗೊಳಿಸಲಾಗಿದ್ದ ಅಕ್ಕಿ, ಗೋಧಿ ಪೂರೈಕೆಯನ್ನು ಬುಧವಾರದಿಂದಲೇ ಮತ್ತೆ ಆರಂಭಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಬಿಎಸ್‌ ಯಡಿಯೂರಪ್ಪ ಭರವಸೆ ನೀಡಿದರು.
 
ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ, ಎಷ್ಟೇ ಆರ್ಥಿಕ ಭಾರ ಆದರೂ ಕೂಡಲೇ ಅಕ್ಕಿ, ಗೋಧಿ ಪೂರೈಕೆಗೆ ಕ್ರಮ ತಗೆದುಕೊಳ್ಳುತ್ತೇನೆ. ಇವತ್ತು ಇದರ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗಿದೆ. ಇನ್ನು ಏನೇ ಅಡೆತಡೆ ಇದ್ದರೆ ಅವುಗಳನ್ನೂ ಬಗೆಹರಿಸಲಾಗುವುದು ಎಂದರು. ಸಿದ್ಧಗಂಗಾ ಮಠ ಸೇರಿದಂತೆ ರಾಜ್ಯದ ಹಲವು ಮಠ ಹಾಗೂ ಸಂಘಸಂಸ್ಥೆಗಳಿಗೆ ನೀಡಲಾಗುತ್ತಿದ್ದ, ಅಕ್ಕಿ ಹಾಗೂ ಗೋಧಿಯನ್ನು ಕಳೆದ ಮೂರು ತಿಂಗಳಿಂದ ಸ್ಥಗಿತಗೊಳಿಸಲಾಗಿದೆ. ಈ ಕುರಿತಾಗಿ ಮಾಜಿ ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವರಾಗಿದ್ದ ಯು.ಟಿ ಖಾದರ್ ಪತ್ರಿಕಾಗೋಷ್ಠಿ ನಡೆಸಿ ಆರೋಪ ಮಾಡಿದ್ದರು.
 
ಸಿದ್ದಗಂಗಾ ಮಠದ ಒಬ್ಬ ವಿದ್ಯಾರ್ಥಿಗೆ ತಲಾ 10 ಕೆಜಿ ಅಕ್ಕಿ, 5 ಕೆಜಿ ಗೋಧಿಯಂತೆ, ಒಟ್ಟು 7359 ವಿದ್ಯಾರ್ಥಿಗಳಿಗೆ 73,590 ಕೆ.ಜಿ ಅಕ್ಕಿ, 36,794 ಕೆ.ಜಿ. ಗೋಧಿಯನ್ನು ಕೊಡಲಾಗುತ್ತಿತ್ತು. ಇದೀಗ ಬಿಜೆಪಿ ಸರ್ಕಾರ ತ್ರಿವಿಧ ದಾಸೋಹ ಮಾಡುತ್ತಿರುವ ಮಠದ ಮಕ್ಕಳ ಅನ್ನವನ್ನೇ ಕಸಿದುಕೊಳ್ಳುತ್ತಿದೆ. ಅನಾಥಾಶ್ರಮ, ವೃದ್ಧಾಶ್ರಮ, ಪುನರ್ವಸತಿ ಕೇಂದ್ರಗಳು ಸೇರಿದಂತೆ 454 ಸರ್ಕಾರೇತರ ಸಂಸ್ಥೆಗಳಿಗೆ ಹಿಂದಿನ ಸರ್ಕಾರಗಳು ನೀಡುತ್ತಿದ್ದ, ದಾಸೋಹ ಕಾರ್ಯಕ್ರಮವನ್ನು ಬಿ.ಎಸ್‌.ವೈ ಸರಕಾರ 3 ತಿಂಗಳಿಂದ ನಿಲ್ಲಿಸಿರುವುದು ಅಮಾನವೀಯ ತೀರ್ಮಾನ. ಯು.ಟಿ ಖಾದರ್ ಈ ಆರೋಪವನ್ನು ಆಹಾರ ಸಚಿವೆ ಶಶಿಕಲಾ ಜೊಲ್ಲೆ ತಳ್ಳಿಹಾಕಿದ್ದರು. ಅಕ್ಕಿ ಗೋಧಿ ಪೂರೈಕೆ ನಮ್ಮ ಸರಕಾರದ ಅವಧಿಯಲ್ಲಿ ಸ್ಥಗಿತಗೊಳಿಸಲಾಗಿಲ್ಲ ಬದಲಾಗಿ ಹಿಂದಿನ ಸರಕಾರದ ಅವಧಿಯಲ್ಲಿ ಸ್ಥಗಿತಗೊಳಿಸಲಾಗಿದೆ ಎಂದು ಆರೋಪಿಸಿದ್ದರು.
 
ಈ ವಿಚಾರ ಗುರುವಾರ ನಡೆದ ರಾಜ್ಯ ಸಂಪುಟ ಸಭೆಯಲ್ಲೂ ಚರ್ಚೆಯಾಗಿದೆ. ಆಹಾರ ಧಾನ್ಯ ಪೂರೈಕೆ ನಿಲ್ಲಿಸಿದ ನಡೆಯನ್ನು ಸಿಎಂ ವಿರೋಧಿಸಿ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ಕೂಡಲೇ ಅಕ್ಕಿ, ಗೋಧಿಯನ್ನು ಮಠ ಮಾನ್ಯಗಳಿಗೆ ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಖಡಕ್ ಆಗಿಯೇ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಮುಂದೆಯಾದರೂ ಸಮಯಕ್ಕೆ ಸರಿಯಾಗಿ ಪೂರೈಕೆ ಆಗುತ್ತಾ ಇಲ್ಲವಾ ಎಂಬುದು ಕಾದುನೋಡಬೇಕಾಗಿದೆ.

Find out more: