ಚನ್ನಪಟ್ಟಣ: ದಕ್ಷಿಣ ಕರಾವಳಿ ಹಾಳು ಮಾಡಿ, ಈಗ ರಾಮನಗರ ಜಿಲ್ಲೆಯನ್ನು ಹಾಳು ಮಾಡಲು ಬಂದಿದ್ದಾರೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್.ಎಸ್.ಎಸ್) ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಗುಡುಗಿದ್ದಾರೆ.
ಪಟ್ಟಣದ ಪೆಟ್ಟಾ ಶಾಲಾ ಮೈದಾನದಲ್ಲಿ ಸಿಎಎ, ಎನ್.ಆರ್.ಸಿ ವಿರೋಧಿಸಿ ವಿವಿಧ ಮುಸ್ಲಿಂ ಸಂಘಟನೆಗಳಿಂದ ಕೇಂದ್ರ ಸರಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಜಾರಿಗೆ ತಂದಿರುವ ಸಿಎಎ, ಎನ್.ಆರ್.ಸಿ ಕಾಯ್ದೆ ಮೂಲಕ ಒಂದು ಸಮುದಾಯವನ್ನು ಬಿಜೆಪಿ ಟಾರ್ಗೆಟ್ ಮಾಡುತ್ತಿದೆ. ಇದರಿಂದ ಮುಸ್ಲಿಂ ಸಮಾಜ ಒಡೆಯುವುದಷ್ಟೇ ಅಲ್ಲ, ಇದು ಎಲ್ಲಾ ಸಮಾಜ ಮತ್ತು ಸಮುದಾಯಕ್ಕೂ ಆಗುವ ತೊಂದರೆಯಾಗಿದೆ. ಹಿಂದೂ ರಾಷ್ಟ್ರ ನಿರ್ಮಾಣದ ಹೆಸರಿನಲ್ಲಿ ದೇಶದ ಒಡೆಯವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಈಗ ರಾಮನಗರ ಹಾಳು ಮಾಡಲು ಹೊರಟಿದ್ದಾರೆ ಎಂದು ಗರಂ ವಾಗ್ದಾಳಿ ನಡೆಸಿದ್ದಾರೆ.
ಮುಸ್ಲಿಂರಿಗೆ ಮಾತ್ರ ತೊಂದರೆಯಾಗುತ್ತೆ ಅನ್ನೋ ಭಾವನೆ ಇದೆ. ಈ ಭಾವನೆಯನ್ನು ಮೊದಲು ಎಲ್ಲರೂ ಬದಲಿಸಿಕೊಳ್ಳಬೇಕು. ಬಿಜೆಪಿಯವರು ಕೇಸರಿ ಧ್ವಜ ಹಿಡಿದುಕೊಂಡು ಓಡಾಡ್ತಾರೆ. ದೇಶ ಯಾರಪ್ಪನ ಆಸ್ತಿಯೂ ಅಲ್ಲ. ವಿ.ಎಚ್.ಪಿ, ಆರ್.ಎಸ್.ಎಸ್ ಯಾರ ಆಸ್ತಿಯೂ ಅಲ್ಲ. ಸ್ವಾತಂತ್ರ್ಯ ಬಂದಾಗ ನೆಹರು ಕಾಲದಲ್ಲಿ ಅಮಿತ್ ಶಾ ಹುಟ್ಟೇ ಇರಲಿಲ್ಲ. ಆದರೆ ನೆಹರು ಬಗ್ಗೆ ಅವರು ಮಾತನಾಡ್ತಾರೆ. ದೇಶಕ್ಕೆ ಹಲವಾರು ರೀತಿಯ ಸಂಪತ್ತನ್ನು ಮುಸ್ಲಿಮರು ನೀಡಿದ್ದಾರೆ. ಬಿಜೆಪಿ ನಾಯಕರು ಅದನ್ನು ತಿಳಿದುಕೊಳ್ಳಬೇಕು ಎಂದರು.
ಮೆಗಾಸಿಟಿ ಮೋಸಗಾರ ಮಾಜಿ ಶಾಸಕ ಸಿ.ಪಿ.ಯೋಗೀಶ್ವರ್ ಆರ್. ಎಸ್.ಎಸ್ ನ ಹೊಸ ವೇಷ ಹಾಕಿದ್ದಾರೆ. ಮೆರವಣಿಗೆಗೆ ಹೊರಗಡೆಯಿಂದ ಜನರನ್ನ ಕರೆದುಕೊಂಡು ಬಂದಿದ್ದರು. ಸಂಸದ ಅನಂತಕುಮಾರ್ ಸಮಾಜ ಘಾತುಕ ಶಕ್ತಿ ಇದ್ದಂಗೆ. ಸಮಾಜ ಒಡೆಯುವ ಕೆಲಸ ಮಾಡಲು ಹೊರಟಿದ್ದಾರೆ. ನಮ್ಮ ಸಂವಿಧಾನವನ್ನು ಯಾರೂ ಕೂಡ ಬದಲಿಸುವ ಅಥವಾ ತೆಗೆದು ಹಾಕಲು ಸಾಧ್ಯವಿಲ್ಲ. ಇದು ವಿಶ್ವವೇ ಮೆಚ್ಚುವಂತ ಸಂವಿಧಾನವಾಗಿದೆ ಯಾರು ಏನೂ ಮಾಡಲು ಸಾಧ್ಯವಿಲ್ಲವೆಂದು ಹೆಚ್.ಡಿ.ಕೆ ಹೇಳಿದರು.