ಬೆಂಗಳೂರು: ರಾಜ್ಯ ಬಜೆಟ್ ಗೂ ಮುನ್ನವೇ ಮುಖ್ಯಮಂತ್ರಿ ಯಡಿಯೂರಪ್ಪ ರೈತರಿಗೆ ಬಂಪರ್ ಕೊಡುಗೆ ನೀಡಿದ್ದಾರೆ. ಹೌದು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಗಳು, ಲ್ಯಾಂಪ್ಸ್‌ ಸಹಕಾರ ಸಂಘಗಳು ಮತ್ತು ಪ್ರಾಥಮಿಕ ಸಹಕಾರಿ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ ಗಳ ಮೂಲಕ ಪಡೆದ ಸಾಲವು 2020 ನೇ ಜನವರಿ 31ರ ಅಂತ್ಯಕ್ಕೆ ಸುಸ್ತಿಯಾಗಿರುವ ಸಾಲದ ಬಡ್ಡಿ ಮನ್ನಾ ಮಾಡಲಾಗುತ್ತದೆ ಎಂದಿದ್ದಾರೆ. 
 
ಸಹಕಾರ ಸಂಸ್ಥೆಗಳ ಮೂಲಕ ರೈತರು ಪಡೆದ ಮಧ್ಯಮ ಹಾಗೂ ದೀರ್ಘಾವಧಿ ಕೃಷಿ ಹಾಗೂ ಕೃಷಿ ಸಂಬಂಧಿ ಸಾಲದ ಮೇಲಿನ ಸುಸ್ತಿ ಬಡ್ಡಿ ಮನ್ನಾ ಮಾಡುವ ಮಹತ್ವದ ನಿರ್ಧಾರವನ್ನು ರಾಜ್ಯ ಸರಕಾರ ತೆಗೆದುಕೊಂಡಿದೆ.ಲಜನವರಿ 31ರ ಅಂತ್ಯಕ್ಕೆ ಸುಮಾರು 92,525 ರೈತರಿಂದ 560 ಕೋಟಿ ರೂ. ಮಧ್ಯಮ ಹಾಗೂ ದೀರ್ಘಾವಧಿ ಸಾಲ ಸುಸ್ತಿಯಾಗಿದೆ. ಇದರ ಬಡ್ಡಿ ಸುಮಾರು 466 ಕೋಟಿ ರೂ.ಗಳಷ್ಟಾಗಲಿದೆ. ರಾಜ್ಯದ 103ಕ್ಕೂ ಹೆಚ್ಚು ತಾಲೂಕುಗಳು ನೆರೆ ಪೀಡಿತವಾಗಿದೆ. ಅದೆ ರೀತಿ 40ಕ್ಕೂ ಹೆಚ್ಚು ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ. ರಾಜ್ಯದ ರೈತ ಸಮೂಹ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಸಾಲದ ಸುಸ್ತಿ ಬಡ್ಡಿ ಮನ್ನಾ ಮಾಡಿ ಸರಕಾರ ಆದೇಶ ಹೊರಡಿಸಿದೆ.
 
ಯಾರಿಗೆ ಅನ್ವಯವಾಗುತ್ತೆ ಗೊತ್ತಾ?
 
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಗಳು, ಲ್ಯಾಂಪ್ಸ್‌ ಸಹಕಾರ ಸಂಘಗಳು ಮತ್ತು ಪ್ರಾಥಮಿಕ ಸಹಕಾರಿ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ ಗಳ ಮೂಲಕ ಪಡೆದ ಸಾಲವು 2020 ನೇ ಜನವರಿ 31ರ ಅಂತ್ಯಕ್ಕೆ ಸುಸ್ತಿಯಾಗಿರುವ ಸಾಲದ ಬಡ್ಡಿ ಮನ್ನಾ ಮಾಡಲಾಗುತ್ತದೆ. ಈ ಸಾಲದ ಬಡ್ಡಿಯನ್ನು ಮಾರ್ಚ್ 31ರೊಳಗೆ ಸಂಬಂಧಪಟ್ಟ ಸಂಸ್ಥೆಗಳಿಗೆ ರೈತರು ಪಾವತಿಸಿದ್ದರೂ ಹಣವನ್ನು ಸರಕಾರ ಭರಿಸಲಿದೆ ಎಂಬುದು ತಿಳಿಸಿದೆ. ಒಟ್ಟಾರೆ ರೈತರಿಗೆ ಬಂಪರ್ ಕೊಡುಗೆ ನೀಡಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
 
 

Find out more: