ನವದೆಹಲಿ: ಭಾರತ ಮತ್ತು ಅಮೆರಿಕ ದೊಡ್ಡ ಮೊತ್ತದ ರಕ್ಷಣಾ ಒಪ್ಪಂದಕ್ಕೆ ಮಂಗಳವಾರ ಸಹಿ ಹಾಕಿವೆ ಎಂದು ಜಂಟಿ ಸುದ್ದಿಗೋಷ್ಠಿ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಜೊತೆಗೆ ಎರಡೂ ದೇಶಗಳು ಜಾಗತಿಕ ಮಟ್ಟದಲ್ಲಿ ತಮ್ಮ ಪಾಲುದಾರಿಕೆಯನ್ನು ಅಭಿವೃದ್ಧಿಗೊಳಿಸಲು ನಿರ್ಧರಿಸಿದ್ದಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಅಷ್ಟಕ್ಕೂ ಅಮೆರಿಕ ಮತ್ತು ಭಾರತ ಮಾಡಿಕೊಂಡಿರುವ ರಕ್ಷಣಾ ಒಪ್ಪಂದದ ಮೊತ್ತವೆಷ್ಟು ಗೊತ್ತಾ! ಬರೋಬ್ಬರಿ 3 ಬಿಲಿಯನ್ ಯುಎಸ್ ಡಾಲರ್ ಗಳ ಒಪ್ಪಂದ. ಹೌದು, ಅಮೆರಿಕ ಮತ್ತು ಭಾರತದ ನಡುವೆ ಹೆಚ್ಚುತ್ತಿರುವ ಕಾರ್ಯತಂತ್ರ ಪಾಲುದಾರಿಕೆಯನ್ನು ಈ ರಕ್ಷಣಾ ಒಪ್ಪಂದ ಪ್ರತಿಬಿಂಬಿಸುತ್ತದೆ. 3 ಬಿಲಿಯನ್ ಯುಎಸ್ ಡಾಲರ್ ಗಳ ರಕ್ಷಣಾ ಒಪ್ಪಂದದ ಅನ್ವಯ ಭಾರತ ಯುಎಸ್ ನಿಂದ 2.6 ಬಿಲಿಯನ್ ಡಾಲರ್ ಗಳ 24 ಎಂಎಚ್-60 ರೋಮಿಯೋ ಹೆಲಿಕಾಪ್ಟರ್ ಗಳನ್ನು ಖರೀದಿಸಲಿದೆ. ಅದರ ಜೊತೆಗೆ 800 ಮಿಲಿಯನ್ ಡಾಲರ್ ಮೌಲ್ಯದ ಆರು ಎಚ್-64ಇ ಅಪಾಚೆ ಹೆಲಿಕಾಪ್ಟರ್ ಗಳನ್ನು ಪಡೆಯುವ ಒಪ್ಪಂದಕ್ಕೂ ಸಹ ಮಂಗಳವಾರ ಸಹಿ ಹಾಕಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾರತ ಹಾಗೂ ಅಮೆರಿಕ ಸಮಗ್ರ ಮುಕ್ತ ವ್ಯಾಪಾರದ ಒಪ್ಪಂದ ಮಾಡಿಕೊಳ್ಳುವತ್ತ ಚಿಂತನೆ ನಡೆಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು. ಎರಡೂ ದೇಶಗಳ ನಡುವಿನ ಸಂಬಂಧ ಈಗಿನಷ್ಟು ಉತ್ತಮವಾಗಿ ಯಾವತ್ತೂ ಇರಲಿಲ್ಲ. ಎರಡೂ ದೇಶಕ್ಕೆ ಲಾಭವಾಗುವಂತಹ ಒಪ್ಪಂದಗಳನ್ನು ಮಾಡಿಕೊಳ್ಳುವ ಆಶಯವನ್ನು ಹೊಂದಿದ್ದೇನೆ ಎಂದು ಟ್ರಂಪ್ ತಿಳಿಸಿದರು.
ಈ ಹಿಂದಿನಿಂದಲೂ ಭಾರತ ಭಯೋತ್ಪಾದನೆ ವಿರುದ್ಧ ಸಿಡಿದೆದ್ದು ಭಯೋತ್ಪಾದನೆ ಹೋಗಲಾಡಿಸಲು ಪಣ ತೊಟ್ಟಿರುವ ರಾಷ್ಟ್ರವಾಗಿದ್ದು ಅದನ್ನು ಹೋಗಲಾಡಿಸಲು ಅಮೆರಿಕ ಸಹ ಕೈ ಜೋಡಿಸುವುದಾಗಿ ಟ್ರಂಪ್ ಹೇಳಿದ್ದಾರೆ. ಅಷ್ಟೇ ಅಲ್ಲದೇ ಈ ಹಿಂದಿಗಿಂತಲೂ ಭಾರತ ಮತ್ತು ಅಮೆರಿಕದ ಸಂಬಂಧ ಈಗ ಉತ್ತಮವಾಗಿದೆ ಎಂದು ಸಹ ಹೇಳಿದರು. ಇದೀಗ ಭಾರೀ ಮೊತ್ತದ ರಕ್ಷಣಾ ಒಪ್ಪಂದವಾಗಿದ್ದು ಭಾರತ ಇನ್ನು ರಕ್ಷಣಾ ಕ್ಷೇತ್ರದಲ್ಲಿ ತನ್ನ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳಬಹುದು.