ಕೊಪ್ಪಳ: ಜೆಡಿಎಸ್ ಕಾರ್ಯಕರ್ತರನ್ನು ಕೆಣಕಿದ್ರೆ ಸುಮ್ಮನಿರಲ್ಲ ಎಂಬ ಹೆಚ್.ಡಿ.ದೇವೇಗೌಡರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಪ್ರತಿಕ್ರಿಯೆ ನೀಡಿದ್ದಾರೆ.ಹೌದು, ಹೆಚ್. ಡಿ ದೇವೆಗೌಡರು ಸೋತಿದ್ದಾರೆ. ಅವರ ಮೊಮ್ಮಗನು ಸೋತಿದ್ದಾರೆ. ಇನ್ನು ರಾಜ್ಯದಲ್ಲಿ ಜೆಡಿಎಸ್ ನಾಪತ್ತೆ ಎಂದು ಈಶ್ವರಪ್ಪ ಗುಡುಗಿದ್ದಾರೆ.
ನಗರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ನಾವು ಯಾಕಪ್ಪ ಜೆಡಿಎಸ್ ಕಾರ್ಯಕರ್ತರನ್ನು ಮುಟ್ಟೊಕೋಗೋಣ, ಎಲ್ಲಿದ್ದಾರೆ ಜೆಡಿಎಸ್ ಕಾರ್ಯಕರ್ತರು ಅಂತಾ ಹುಡುಕಿ ತೋರಿಸಲಿ, ಆ ನಂತರ ಮುಟ್ಟೋದು ಬಿಡೋದು ಎಂದು ಹೇಳಿದ್ದಾರೆ. ಇನ್ನು ನಾನೂ ಜೆಡಿಎಸ್ ಕಾರ್ಯಕರ್ತರು ಎಲ್ಲಿದ್ದಾರೆ ಅಂತಾ ಭೂತಗನ್ನಡಿ ಹಾಕಿಕೊಂಡು ಹುಡುಕುತ್ತಿದ್ದೇನೆ. ಎಲ್ಲಾದ್ರೂ ಮುಟ್ಟೋದಕ್ಕೆ ಅವಕಾಶ ಇದೆಯಾ, ತಾವು ಸೋತ್ರು, ಮೊಮ್ಮಗ ಸೋತಿದ್ದಾನೆ, ಎಲ್ಲಿದೆ ರಾಜ್ಯದಲ್ಲಿ ಜೆಡಿಎಸ್. ಜೆಡಿಎಸ್ ಕಾರ್ಯಕರ್ತರು ಎಲ್ಲಿದ್ದಾರೆ ಅಂತಾ ಮುಟ್ಟಬೇಕು, ರಾಜ್ಯದಲ್ಲಿ ಇನ್ನೇನಿದ್ದರೂ ಬಿ ಜೆ ಪಿ ಯದ್ದೇ ಹವಾ. ಜೆಡಿಎಸ್ ಕಾಣೆಯಾಗಿದೆ ಎಂದು ಜೆಡಿಎಸ್ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದಾರೆ.
ಅಷ್ಟೇ ಅಲ್ಲದೇ, ಇವರು ಪ್ರಚಾರ ತಗೊಳೊಕ್ಕೆ ಬಿಜೆಪಿ ಕಾರ್ಯಕರ್ತರು ಹೊಡೆದ್ರು ಅಂತಾರೆ, ಬಿಜೆಪಿ ಹೊಡೆಯುವ ಪಕ್ಷ ಅಲ್ಲ, ಅಪ್ಪಿಕೊಳ್ಳುವ ಪಕ್ಷ ಎಂದು ತಮ್ಮ ಪಕ್ಷದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು. ಬಿಜೆಪಿ ರಾಜ್ಯದಲ್ಲಿ ಇನ್ನು ಪೂರ್ಣ ಅಧಿಕಾರ ಹೊಂದಿದೆ. ಇನ್ನು ಮೂರು ವರ್ಷಗಳ ಕಾಲ ಮತ್ತು ಆನಂತರ ಕೂಡ ಬಿಜೆಪಿ ಯದ್ದೇ ಅಧಿಕಾರ ಎಂದು ತಿಳಿಸಿದ್ದಾರೆ.
ಪ್ರಸ್ತುತ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಸ್ವತಂತ್ರ್ಯವಾಗಿ ಸರ್ಕಾರ ಮಾಡುತ್ತೆ ಎಂಬ ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಮಾತನಾಡಿದ ಅವರು, ಸಿದ್ದರಾಮಯ್ಯ, ಕುಮಾರಸ್ವಾಮಿಗೆ ದಿನಾಲೂ ಕನಸು ಬೀಳುತ್ತೆ, ಮುಖ್ಯಮಂತ್ರಿ ಕುರ್ಚಿಯ ಕನಸೇ ಬೀಳುತ್ತೆ, ಬೇರೆ ಕನಸೇ ಬೀಳಲ್ಲ ಅವರಿಗೆ, ಸಿಎಂ ಕುರ್ಚಿ ಅವರ ಭ್ರಮೆ, ಬೇರೆ ಕೆಲಸ ಇಲ್ಲ ಅವರಿಗೆ ಅದಕ್ಕೆ ಬಾಯಿಗೆ ಬಂದಂತೆ ಮಾತಾಡ್ತಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಅವರು ಕುಮಾರಸ್ವಾಮಿ ಬಗ್ಗೆ ಗುಡುಗಿದ್ದಾರೆ.