ಹೂವಿನ ಬೆಳೆಗಾರರೊಬ್ಬರು ಕರೆ ಮಾಡಿದ್ದರು. ಯುಗಾದಿ ಹಬ್ಬದ ಈ ಸಮಯದಲ್ಲಿ ದಿನಕ್ಕೆ 40/50 ಕೆಜಿಯಷ್ಟು ಹೂ ಮಾರುವ ಆಸೆಯಿಂದ ಗಿಡ ಬೆಳೆಸಿ ಉತ್ತಮ ಫಸಲು ನಿರೀಕ್ಷಿಸಿದ್ದರು. ಅದೃಷ್ಟವಶಾತ್ ನಿರೀಕ್ಷೆಗಿಂತ ಉತ್ತಮ ಬೆಳೆ ಬಂದಿದೆ. ಆದರೆ ಈಗ ಕೊರೋನಾ ವೈರಸ್ ಕಾರಣದಿಂದಾಗಿ ಸರ್ಕಾರ ಸಂಪೂರ್ಣ ಬಂದ್ ಮಾಡಿರುವ ಕಾರಣಕ್ಕೆ ತಮ್ಮ ಫಸಲಿಗೆ ಒಳ್ಳೆಯ ಮಾರುಕಟ್ಟೆಯಾಗಿದ್ದ ಬೆಂಗಳೂರಿನಲ್ಲಿ ಹೂವು ಮಾರಾಟವಾಗುತ್ತಿಲ್ಲ. ಈಗಾಗಲೇ ದಿನಕ್ಕೆ 25/30 ಕೆಜಿ ನಷ್ಟವಾಗುತ್ತಿದೆ. ಹೀಗೆ ಆದರೆ ನಾವು ಬದುಕುಳಿಯುವುದೇ ಕಷ್ಟ. ತುಂಬಾ ನಷ್ಟವಾಗುತ್ತದೆ. ಅದನ್ನು ತಡೆಯುವ ಶಕ್ತಿ ಇಲ್ಲ ಎಂದರು.....

 

ಬಹುಶಃ ಬಹಳಷ್ಟು ಸಣ್ಣ ರೈತರು, ಬೀದಿ ಬದಿಯ ಚಿಲ್ಲರೆ ವ್ಯಾಪಾರಿಗಳು, ಹೋಟೆಲ್‌ಗಳು, ಕೋಳಿ ಮೀನು ವ್ಯಾಪಾರಿಗಳು, ಕೂಲಿ ಕಾರ್ಮಿಕರು ಟ್ರಾವೆಲ್ಸ್ ನವರು ಇನ್ನೂ ಇನ್ನೂ ಸಾಕಷ್ಟು ಜನ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ ಮತ್ತು ಇದು ಇನ್ನೂ ಸ್ವಲ್ಪ ಕಾಲ ಮುಂದುವರಿಯುತ್ತದೆ.

 

ಇದೊಂದು ಚೈನ್ ಲಿಂಕ್. ಹಾಲು ವಿದ್ಯುತ್ ನೀರು ಮನೆ ಬಾಡಿಗೆ ಬಡ್ಡಿ ಸಾಲದ ಕಂತು ಔಷಧಿ ಹೀಗೆ ನಾನಾ ಸಮಸ್ಯೆಗಳು ಒಂದೊದಾಗಿ ಭುಗಿಲೇಳುತ್ತದೆ. ಕಷ್ಟಗಳು ಬಂದರೆ ಒಟ್ಟೊಟ್ಟಿಗೆ ಬರುತ್ತವೆ ಎಂಬಂತೆ ಈಗಾಗಲೇ ಆರ್ಥಿಕ ಕುಸಿತದಿಂದ ಬಸವಳಿದಿದ್ದ ಕೆಳ ಮಧ್ಯಮ ವರ್ಗ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತದೆ.

 

ಯಾರೋ ಸ್ವಂತ ಮನೆ ಇದ್ದು ಒಂದಷ್ಟು ಬಾಡಿಗೆ ಪಡೆಯುವವರು, ಎಲ್ಲಾ ರೀತಿಯ ಸರ್ಕಾರಿ ಅಧಿಕಾರಿಗಳು, ಸ್ವಲ್ಪ ಉಳಿತಾಯ ಮಾಡಿರುವವರು ಮಾತ್ರ ಹೇಗೋ ಈ ಒತ್ತಡ ನಿಭಾಯಿಸಬಲ್ಲರು.

 

ಈಗ ಇರುವ ಧ್ವಂದ್ವ....

 

ಸರ್ಕಾರದ ನಿರ್ಧಾರಗಳು ತುಂಬಾ ಕಠಿಣವಾದವು, ಕೊರೋನಾಗಿಂತ ಈ ನಿರ್ಧಾರಗಳೇ ಹೆಚ್ಚು ತ್ರಾಸದಾಯಕ  ಎಂದರೆ,  ಕೊರೋನಾ ಸಮಸ್ಯೆ ತುಂಬಾ ಗಂಭೀರವಾದರೆ ಸರ್ಕಾರವನ್ನೇ ಹೊಣೆ ಮಾಡಬೇಕಾಗುತ್ತದೆ ಅಥವಾ ಸಾಮಾನ್ಯ ಹಂತದಲ್ಲೇ ಇದು ನಿವಾರಣೆಯಾದರೆ ಸರ್ಕಾರದ ಆತುರದ ಕ್ರಮ ಎಂದು ಟೀಕಿಸಲಾಗುತ್ತದೆ. ಎಲ್ಲರ ಒಳಿತಿಗಾಗಿಯೇ ಈ ಕ್ರಮ ಎಂದು ಸರ್ಕಾರ ಹೇಳುತ್ತಿದೆ.

 

ಯಾವಾಗಲೂ ಫಲಿತಾಂಶ ನೋಡಿ ಅಭಿಪ್ರಾಯ ವ್ಯಕ್ತಪಡಿಸುವುದರಲ್ಲಿ ನಾವೆಲ್ಲ ನಿಸ್ಸೀಮರು.....

 

ಕ್ರಿಕೆಟ್ ಇರಲಿ, ಚುನಾವಣೆ ಇರಲಿ, ವಿದ್ಯಾರ್ಥಿಗಳ ಅಂಕಗಳಿರಲಿ ಎಲ್ಲವನ್ನೂ ಫಲಿತಾಂಶ ಆಧರಿಸಿ ನಮ್ಮ ಅಭಿಪ್ರಾಯ ರೂಪಿಸಿಕೊಳ್ಳುತ್ತೇವೆ. ಆದರೆ ಕೊರೋನಾ ಮಾರಿಯ ಜೊತೆ ಬಡತನ ಜೊತೆಯಾಗಿರುವ ವಾಸ್ತವ ಪರಿಸ್ಥಿತಿಯಲ್ಲಿ........

 

ಬಡವರಿಗಾಗಿ ಸಹಾಯ ಮಾಡಲು ಈಗಲೂ ಅನೇಕ ಜನ ಸಿದ್ದರಿದ್ದಾರೆ. ಪ್ರವಾಹ ಪರಿಸ್ಥಿತಿಯಲ್ಲಿ ಮಾಡಿದಂತೆ. ಆದರೆ ಸಮಸ್ಯೆ ಇರುವುದು ನಿಜವಾದ ಬಡವರನ್ನು ಗುರುತಿಸುವುದು. 

 

ಬಡವರು ಎಚ್ಚರವಾಗಿರುವುದಿಲ್ಲ, ಎಚ್ಚರವಾಗಿರುವವರು ಬಡವರಾಗಿರುವುದಿಲ್ಲ ಮತ್ತು ಎಚ್ಚರವಾಗಿರುವವರೇ ಎಲ್ಲಾ ಸೌಲಭ್ಯ ಬಾಚುತ್ತಾರೆ. ಬಿಪಿಎಲ್ ಕಾರ್ಡ್ ಹೊಂದಿರುವವರೆಲ್ಲಾ ಬಡವರಲ್ಲ, ಇಲ್ಲದಿರುವವರು ಶ್ರೀಮಂತರಲ್ಲ. 

 

ಈ ನಿರ್ಬಂಧದ ಸಂದರ್ಭದಲ್ಲಿ ನಿಜವಾದ ಬಡವರಿಗೆ ವಾರಕ್ಕೆ 2000 ಕೊಟ್ಟರೆ ತುಂಬಾ ಸಹಾಯವಾಗುತ್ತದೆ. ಕೊಡುವವರು ಇದ್ದಾರೆ‌. ತಲುಪಿಸುವವರ ಪ್ರಾಮಾಣಿಕತೆಯೇ ಪ್ರಶ್ನಾರ್ಹವಾಗಿದೆ.

 

ನಾಗರಿಕ ಸಮಾಜ ಅನಾಗರಿಕತೆಯತ್ತಾ ಸಾಗುತ್ತಿರುವ ಅನೇಕ ಗುಣಲಕ್ಷಣಗಳು ಕಾಣುತ್ತಿವೆ. ಕರೋನ ವೈರಸ್ ಬದುಕಿನ ಕ್ಷಣಿಕತೆ ಬಗ್ಗೆ ನಮ್ಮ ಗಮನ ಸೆಳೆದು ಆತ್ಮಾವಲೋಕನಕ್ಕೆ ಕಾರಣವಾಗಲಿ ಎಂದು ಆಶಿಸುತ್ತಾ.....

-ವಿವೇಕಾನಂದ. ಹೆಚ್.ಕೆ

Find out more: