ವಿಶ್ವದ ದೊಡ್ಡ ದೊಡ್ಡ ರಾಷ್ಟ್ರಗಳೇ ಈ ಕೊರೋನಾ ಸಂಕಟಕ್ಕೆ ಸಿಲುಕಿಕೊಂಡು ನಲುಗುತ್ತಿರುವ ನಡುವೆಯೇ ಅಂತರಾಷ್ಟೀಯ ಮಟ್ಟದಲ್ಲಿ ಕೆಸರೆರಚಾಟ ನಡೆಯುತ್ತಿರುವುದು ಆಶ್ಚರ್ಯವನ್ನು ತಂದಿದೆ. ಕೊರೊನಾ ವೈರಸ್ ವಿಚಾರವಾಗಿ ಅಮೇರಿಕಾ ಚೀನಾವನ್ನು ದೂರುತ್ತಿದೆ ಇದಕ್ಕೆ ತಿರುಗೇಟನ್ನು ನೀಡಲು ಚೀನಾ ಭಾರತವನ್ನು ಮಧ್ಯಕ್ಕೆ ಎಳೆಯುತ್ತಿರುವುದೂ ಮತ್ತಷ್ಟು ಆತಂಕವನ್ನು ಸೃಷ್ಟಿ ಮಾಡಿದೆ ಅಷ್ಟಕ್ಕೂ ಭಾರತ ಮಧ್ಯಕ್ಕೆ ಹೋಗಿದ್ಯಾ ಎಂಬುದರ ಬಗ್ಗೆ ವಿವರ ಇಲ್ಲಿದೆ
ನವದೆಹಲಿ: ಕೊರೊನಾ ವೈರಸ್ (ಕೋವಿಡ್-19) ಅನ್ನು ’ಚೈನೀಸ್ ವೈರಸ್’ ಎಂದು ಬ್ರ್ಯಾಂಡ್ ಮಾಡುವುದು ಮತ್ತು ಆರಂಭದಲ್ಲೇ ಈ ವೈರಸ್ನ ಬಗ್ಗೆ ವಿಶ್ವ ಸಮುದಾಯಕ್ಕೆ ಎಚ್ಚರಿಕೆ ನೀಡುವಲ್ಲಿ ಚೀನಾ ವಿಫಲವಾಗಿದೆ ಎಂದು ಅಮೆರಿಕ ದೂರುತ್ತಿರುವುದರ ವಿರುದ್ಧ ತಿರುಗೇಟು ನೀಡಲು ಚೀನಾವು ಭಾರತದ ಸಹಾಯ ಕೋರಿದೆ.
ಜಿ೨೦ ಶೃಂಗಸಭೆ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಕಳೆದ ಮಂಗಳವಾರ ಕೋವಿಡ್-19 ಬಗ್ಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. ಈ ಸಂಭಾಷಣೆ ವೇಳೆ ಅಮೆರಿಕದ ವಿಚಾರ ಪ್ರಸ್ತಾಪವಾಗಿತ್ತು.
ಅಮೆರಿಕವು ಚೀನಾದ ಮೇಲೆ ಕೊರೊನಾ ಕಳಂಕ ಹೊರಿಸಲು ಯತ್ನಿಸುತ್ತಿರುವುದು ಸ್ವೀಕಾರಾರ್ಹವಲ್ಲ ಮತ್ತು ಅಂತರರಾಷ್ಟ್ರೀಯ ಸಹಕಾರಕ್ಕೆ ಪೂರಕವಲ್ಲ ಎಂದು ಮಾತುಕತೆ ವೇಳೆ ವಾಂಗ್ ಹೇಳಿದ್ದರು. ಜತೆಗೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ’ಚೈನೀಸ್ ವೈರಸ್’ ಎಂದಿರುವುದನ್ನು ಭಾರತ ವಿರೋಧಿಸುತ್ತದೆ ಎಂದು ಭಾವಿಸುತ್ತೇನೆ ಎಂದೂ ಹೇಳಿದ್ದರು ಎಂಬುದಾಗಿ ಭಾರತದಲ್ಲಿರುವ ಚೀನಾ ರಾಯಭಾರಿ ಸನ್ ವೀಡಾಂಗ್ ಹೇಳಿದ್ದಾರೆ.
ವಾಂಗ್ ಯಿ ಜತೆಗಿನ ಮಾತುಕತೆ ಬಗ್ಗೆ ಜೈಶಂಕರ್ ಕೂಡ ಟ್ವೀಟ್ ಮಾಡಿದ್ದರು. ಆದರೆ, ಚೀನಾ-ಅಮೆರಿಕದ ನಡುವಣ ವಾಕ್ಸಮರದ ಬಗ್ಗೆ ನೇರ ಪ್ರಸ್ತಾಪ ಮಾಡಿಲ್ಲ. ಕೋವಿಡ್-19 ನಿರ್ಮೂಲನೆಗೆ ಜತೆಯಾಗಿ ಹೋರಾಡುವ ಬಗ್ಗೆ ವಾಂಗ್ ಯಿ ಅವರ ಜತೆ ಮಾತುಕತೆ ನಡೆಸಿದೆ. ದ್ವಿಪಕ್ಷೀಯ ಬಾಂಧವ್ಯ ವೃದ್ಧಿಸುವ ಕುರಿತು ಚರ್ಚೆ ನಡೆಸಿದ್ದೇವೆ. ಜಿ೨೦ ಶೃಂಗಸಭೆ ಬಗ್ಗೆಯೂ ಮಾತುಕತೆ ನಡೆಸಿದ್ದೇವೆ’ ಎಂದಷ್ಟೇ ಅವರ ಟ್ವೀಟ್ನಲ್ಲಿ ಉಲ್ಲೇಖವಾಗಿತ್ತು.
ಚೀನಾದ ವುಹಾನ್ ನಗರದಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ವೈರಸ್ ಈಗ ಅಮೆರಿಕವನ್ನೂ ಸಂಕಷ್ಟಕ್ಕೆ ಈಡುಮಾಡಿದೆ. ಅಮೆರಿಕದಲ್ಲಿ ಈಗಾಗಲೇ 1ಲಕ್ಷಕ್ಕೂ ಹೆಚ್ಚು ಜನ ಕೊರೊನಾ ಪೀಡಿತರಾಗಿದ್ದಾರೆ.