ಕೊರೋನಾ ಸೋಂಕು ತಡೆಗಟ್ಟುವ ಸಲುವಾಗಿ ಸರ್ಕಾರ ದೇಶದಾದ್ಯಂತ ಲಾಕ್ ಡೌನ್ ಮಾಡಲಾಗಿದೆ ಇದರ ಹೊರತಾಗಿ ತಾವುಗಳು ಕೊರೋನಾ ವೈರಸ್ ವಿರುದ್ಧ ಹೋರಾಡಲು ನಿಮ್ಮ ಸಹಕಾರ ಅಗತ್ಯವಾಗಿ ಬೇಕೇ ಬೇಕು. ಕೋವಿಡ್-19 ಸೋಂಕು ತಡೆಗಟ್ಟಲು ನಾವು ಸದಾ ನಿಮ್ಮ ಜೊತೆಯಿದ್ದೇವೆ. ನೀವು ಮನೆಯಲ್ಲಿದ್ದುಕೊಂಡೇ ನಮಗೆ ಸಹಕಾರ ನೀಡಿ ಒಂದು ವೇಳೆ ನೀವು ನಮಗೆ ಸಹಕಾರ ನೀಡದಿದ್ದಲ್ಲಿ ಲಾಕ್ಡೌನ್ ಮತ್ತಷ್ಟು ದಿನ ಮುಂದೂಡ ಲಾಗುವುದು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದರು.
ಜನರು ನಮಗೆ ಬೆಂಬಲವನ್ನು ನೀಡಿದ್ದೇ ಆದಲ್ಲಿ ಏಪ್ರಿಲ್ 14 ಕ್ಕೆ ಲಾಕ್‌ಡೌನ್ ಅನ್ನು ಕೊನೆಗೊಳಿಸುತ್ತೇವೆ ಇಲ್ಲದಿದ್ದರೆ ಲಾಕ್‌ಡೌನ್ ಗೆ ಮತ್ತಷ್ಟು ದಿನ ಆದೇಶವನ್ನು ನೀಡಲಾಗುತ್ತದೆ ಎಂದು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಪರಿಸ್ಥಿತಿ ಅವಲೋಕಿಸಿ ಲಾಕ್ ಡೌನ್ ಮುಂದುವರಿಸುವ ಬಗ್ಗೆ ನಿರ್ಣಯಿಸಲಾಗುವುದು ಎಂದರು.
ಎಲ್ಲಾ ಸಚಿವರುಗಳಿಗೆ ಸೂಚನೆ ನೀಡಿದ್ದು, ಯಾರೂ ಮನೆಯಲ್ಲಿ ಕುಳಿತುಕೊಳ್ಳಬಾರದು. ತಮ್ಮ ಉಸ್ತುವಾರಿ ಇರುವ ಜಿಲ್ಲೆಗಳಿಗೆ ತೆರಳಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
ಎಲ್ಲಾ ಸಚಿವರುಗಳಿಗೆ ಜಿಲ್ಲಾ ಉಸ್ತುವಾರಿ ನೀಡದ ಕುರಿತಾಗಿ ಮಾತನಾಡಿ ಇಂದು ಅಥವಾ ನಾಳೆ ಇದರ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳುತ್ತೇವೆ ಎಂದರು.
ಮರ್ಯಾದೆ ಉಳಿಸಿದ್ದು ಜಿಲ್ಲಾಧಿಕಾರಿಗಳು
ಈ ಸಂಕಷ್ಟದ ಸಂದರ್ಭದಲ್ಲಿ ಸರಕಾರದ ಮರ್ಯಾದೆ ಉಳಸಿದ್ದು ಸಚಿವರುಗಳಲ್ಲ, ಬದಲಾಗಿ ಜಿಲ್ಲಾಧಿಕಾರಿಗಳು. ಎಲ್ಲಾ ಜಿಲ್ಲಾಧಿಕಾರಿಗಳು ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ಅವರಿಗೆ ನನ್ನ ಧನ್ಯವಾದಗಳು ಎಂದರು.
ಯಾವ ರೈತರೂ ತಮ್ಮ ಬೆಳೆಗಳನ್ನು ಹಾಳು ಮಾಡಬಾರದು. ತರಕಾರಿ ಹಣ್ಣುಗಳನ್ನು ಕೊಳ್ಳಲು ಸೂಚನೆ ನೀಡಲಾಗಿದೆ. ಹಾಪ್ ಕಾಮ್ಸ್ ಗಳನ್ನು 24 ಗಂಟೆಯೂ ತೆರೆಯಲು ಆದೇಶಿಸಲಾಗಿದೆ ಎಂದರು.
ಸಚಿವರ ನಡುವಿನ ಭಿನ್ನಾಭಿಪ್ರಾಯದ ಬಗ್ಗೆ ಮಾತನಾಡಿದ ಬಿಎಸ್ ವೈ, ರಾಮುಲು ಮತ್ತು ಸುಧಾಕರ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಇಬ್ಬರ ಕೆಲಸದ ಬಗ್ಗೆಯೂ ನಮಗೆ ತೃಪ್ತಿಯಿದೆ. ಸಚಿವ ಸುರೇಶ್ ಕುಮಾರ್ ಅವರು ಬೆಂಗಳೂರಿನಲ್ಲಿ ಇರುತ್ತಾರೆ ಎನ್ನುವ ಕಾರಣ ಅವರಿಗೆ ಕೋವಿಡ್-19 ವಕ್ತಾರ ಜವಾಬ್ದಾರಿ ನೀಡಲಾಗಿದೆ ಎಂದರು.
ಎಲ್ಲರ ಪ್ರಾಣ ಒಂದೇ. ಅದಕ್ಕೆ ಧರ್ಮದ ಬೇಧವಿಲ್ಲ. ಕೆಲವರು ಮಾಡಿದ ತಪ್ಪಿಗೆ ಒಂದು ಸಮುದಾಯವನ್ನು ಸಂಪೂರ್ಣ ದೂಷಣೆ ಮಾಡುವುದು ಸರಿಯಲ್ಲ ಎಂದು ಬಿ ಎಸ್ ವೈ ಅಭಿಪ್ರಾಯಪಟ್ಟರು.
ಕೋವಿಡ್-19 ಸೋಂಕು ಹತೋಟಿಗೆ ಬಂದ ನಂತರ ರಾಜ್ಯದ ಗಡಿಗಳನ್ನು ತೆರೆಯಲಾಗುತ್ತದೆ. ಅಲ್ಲಿಯರೆಗೆ ಯಾವುದೇ ಕಾರಣಕ್ಕೂ ಗಡಿಗಳನ್ನು ತೆರೆಯಲು ಅವಕಾಶವಿಲ್ಲ. ಮುಂದಿನ ದಿನಗಳಲ್ಲಿ ಆರ್ಥಿಕ ಸ್ಥಿತಿಗತಿಯ ಬಲವರ್ಧನೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.