ವಾಷಿಂಗ್ಟನ್: ಕೊರೋನಾ ಸೋಂಕು ಇಡೀ ಜಗತ್ತನ್ನು ನರಳುವಂತೆ ಮಾಡಿದೆ. ಈ ಸಮಯದಲ್ಲಿ ಪ್ರಪಂಚದ ಜನರ ಆರೋಗ್ಯವನ್ನು ಕಾಪಾಡಿಕೊಳ್ಳಲು ವೈದ್ಯಕೀಯ ಕ್ಷೇತ್ರ ಸತತ ಪ್ರಯತ್ನವನ್ನು ಮಾಡುತ್ತಿದೆ. ಇದಕ್ಕೆ ಪೂರಕವಾಗಿ ವಿಶ್ವ ಆರೋಗ್ಯ ಸಂಸ್ಥೆ ಇಡೀ ಪ್ರಪಂಚದ ಆರೋಗ್ಯವನ್ನು ಕಾಪಾಡಿಕೊಳ್ಳಲು ಬೇಕಾದ ನೆರವನ್ನು ಮಾಡುತ್ತಿದೆ. ಆದರೆ ಇಂದು ಅಮೇರಿಕಾ ವಿಶ್ವ ಆರೋಗ್ಯ ಸಂಸ್ಥೆಗೆ ನೀಡುತ್ತಿದ್ದ ಆರ್ಥಿಕ ನೆರವನ್ನು ನಿಲ್ಲಿಸಿದೆ ಇದರಿಂದ ವಿಶ್ವ ಆರೋಗಯ ಸಂಸ್ಥೆ ಆರ್ಥಿಕವಾಗಿ ಸಂಕಷ್ಟವನ್ನು ಎದುರಿಸಲಿದೆ. ಅಷ್ಟಕ್ಕೂ ಅಮೇರಿಕಾ ವಿಶ್ವ ಆರೋಗ್ಯ ಸಂಸ್ಥೆಗೆ ಆರ್ಥಿಕ ನೆರವನ್ನು ನಿಲ್ಲಿಸಿದ್ದು ಯಾಕೆ ಗೊತ್ತಾ..?
ಪ್ರಪಂಚದ ಆರೋಗ್ಯವನ್ನು ಕಾಪಾಡಲು ಬಹು ಮುಖ್ಯ ಪಾತ್ರವನ್ನು ವಹಿಸುತ್ತಿದ್ದ ವಿಶ್ವ ಆರೋಗ್ಯ ಸಂಸ್ಥೆಗೆ ಹೆಚ್ಚಿನದ್ದಾಗಿ ಆರ್ಥಿಕ ನೆರವನ್ನು ನೀಡುತ್ತಿದ್ದ ದೇಶ ಅಮೇರಿಕಾ.. ಆದರೆ ಇಂದು ವಿಶ್ವ ಆರೋಗ್ಯ ಸಂಸ್ಥೆಗೆ ನೆರವನ್ನು ನೀಡಲು ಅಮೇರಿಕಾ ತಡೆಯಿಡಿದಿದೆ. ಇದಕ್ಕೆ ಕಾರಣ ಚೀನಾ ದೇಶದಲ್ಲಿ ಕೊರೋನಾ ಸೋಂಕು ಮೊದಲ ಬಾರಿಗೆ ಕಾಣಿಸಿಕೊಂಡ ನಂತರ ಅದು ವೇಗವಾಗಿ ಹಬ್ಬುತ್ತಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಮೊದಲೇ ಎಚ್ಚರಿಕೆ ನೀಡದೆ ಪ್ರಕರಣವನ್ನು ಮುಚ್ಚಿಹಾಕುವಲ್ಲಿ ಮತ್ತು ತೀವ್ರವಾಗಿ ನಿಗಾವಹಿಸುವಲ್ಲಿ ವಿಫಲವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ.
ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದ್ದು ವಿಶ್ವ ಆರೋಗ್ಯ ಸಂಸ್ಥೆಗೆ ನೀಡಲಾಗುತ್ತಿದ್ದ ಧನಸಹಾಯವನ್ನು ನಿಲ್ಲಿಸಲು ತಮ್ಮ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಕೂಡ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಇಂದು ನಮ್ಮ ಅಧಿಕಾರಿಗಳಿಗೆ ವಿಶ್ವ ಆರೋಗ್ಯ ಸಂಸ್ಥೆಗೆ ನೀಡುವ ಹಣವನ್ನು ನಿಲ್ಲಿಸುವಂತೆ ಸೂಚಿಸಿದ್ದೇನೆ. ಜಾಗತಿಕ ಮಟ್ಟದಲ್ಲಿ ಆರೋಗ್ಯವನ್ನು ಮರು ನಿರ್ದೇಶನ ಮಾಡಿ ಬೇರೆ ಸಂಸ್ಥೆಗಳ ಜೊತೆ ನೇರವಾಗಿ ಕೆಲಸ ಮಾಡಲು ಇಚ್ಛಿಸಿದ್ದೇವೆ. ನಾವು ಕಳುಹಿಸುವ ಎಲ್ಲಾ ನೆರವುಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸುವಂತೆ ಚರ್ಚೆ ನಡೆಸುತ್ತೇವೆ ಎಂದು ಡೊನಾಲ್ಡ್ ಟ್ರಂಪ್ ನಿನ್ನೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಮೆರಿಕಾದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಬಾರದ ರೀತಿಯಲ್ಲಿ ಪಸರಿಸಿದ್ದರೂ ಕೂಡ ಅದರ ಅಪಾಯದ ಬಗ್ಗೆ ಅರಿವಿದ್ದರೂ ಕೂಡ ವಿಶ್ವ ಆರೋಗ್ಯ ಸಂಸ್ಥೆ ತಮ್ಮ ದೇಶಕ್ಕೆ ಮುನ್ನೆಚ್ಚರಿಕೆ ನೀಡಿರಲಿಲ್ಲ, ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರಲಿಲ್ಲ ಎಂದು ಡೊನಾಲ್ಡ್ ಟ್ರಂಪ್ ನೇರವಾಗಿಯೇ ತಮ್ಮ ಅಸಮಾಧಾನವನ್ನು ಈ ಹಿಂದೆ ತೋಡಿಕೊಂಡಿದ್ದರು.
ಸದ್ಯ ಜಾಗತಿಕ ಮಟ್ಟದಲ್ಲಿ ಕೊರೋನಾ ವೈರಸ್ ಗೆ ಅತಿ ಹೆಚ್ಚು ಬಲಿಯಾದವರು ಅಮೆರಿಕನ್ನರೇ ಆಗಿದ್ದಾರೆ. ಇಲ್ಲಿ 25 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 5 ಲಕ್ಷದ 94 ಸಾವಿರದ 207 ಮಂದಿಗೆ ಸೋಂಕು ತಗುಲಿದೆ.