ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಇದನ್ನು ತಡೆಯುವ ಉದ್ದೇಶದಿಂದ ಸರ್ಕಾರ ಪ್ರತಿನಿತ್ಯ ಒಂದಿಲ್ಲೊಂದು ಕಾನೂನಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ಇದಕ್ಕೆ ಪೂರಕವೆಂಬಂತೆ ಕೊರೋನಾ ವೈರಸ್‌ನ ಲಕ್ಷಣಗಳಾದ ಕೆಮ್ಮು ನೆಗಡಿ, ಜ್ವರ ಕಾಣಿಸಿಕೊಂಡರೆ ಜನರು ಮೆಡಿಕಲ್ ಶಾಪ್‌ಗಳಿಗೆ ಹೋಗಿ ಔಷಧಿಗಳನ್ನು ಕೊಂಡು ತೆಗೆದುಕೊಳ್ಳುತ್ತಾರೆ. ಇದರಿಂದ ಕೊರೋನಾ ಸೊಂಕಿನ ಲಕ್ಷಣಗಳು ಕಡಿಮೆಯಾದರೂ ಕೊರೋನಾ ಕಡಿಮೆಯಾಗದೆ ಹೆಚ್ಚಾಗಿ ಎಲ್ಲರಿಗೆ ಹರಡುತ್ತದೆ. ಇದನ್ನು ತಡೆಯಲು ಸರ್ಕಾರ ಈ ಕ್ರಮವನ್ನು ತೆಗೆದುಕೊಂಡಿದೆ. ಅಷ್ಟಕ್ಕೂ ಆ ಕ್ರಮ ಏನು ಗೊತ್ತಾ..?
ರಾಜ್ಯದಲ್ಲಿನ ಮೆಡಿಕಲ್ ಶಾಪ್ ಗಳಿಂದ ಜ್ವರ, ಶೀತ ಮತ್ತು ಕೆಮ್ಮು ಔಷಧಿ ಖರೀದಿಸುವವರ ಹೆಸರು, ವಿಳಾಸ, ಸ್ಥಳ ಮಾಹಿತಿ ಹಾಗೂ ಮೊಬೈಲ್ ಸಂಖ್ಯೆ ಪಡೆದು ನೀಡುವುದನ್ನು ಕಡ್ಡಾಯಗೊಳಿಸಿ, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.
ಈ ಕುರಿತಂತೆ ಅಧಿಸೂಚನೆ ಹೊರಡಿಸಿರುವ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರು, ಕೋವಿಡ್-19 ರೋಗದ ಪ್ರಸರಣದಿಂದ ರಾಜ್ಯವು ಬಾಧಿತಗೊಂಡಿದೆ ಹಾಗೂ ಈ ಸಾಂಕ್ರಾಮಿಕದ ಅನುಪಾತದ ಏರಿಕೆಯಿಂದಾಗಿ ಸಾರ್ವಜನಿಕರು ಬಳಲುತ್ತಿದ್ದು, ಅಸ್ವಸ್ಥತೆ ಮತ್ತು ಮರಣ ಪ್ರಮಾಣ ಹೆಚ್ಚುವ ಸಾಧ್ಯತೆ ಇರುತ್ತದೆ.
ಜನಸಂಖ್ಯೆಯ ಮೇಲೆ ಈ ಹೊಸ ಕೋವಿಡ್-19 ಖಾಯಿಲೆಯ ಪ್ರಭಾವವನ್ನು ತಗ್ಗಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಸಾಂಕ್ರಾಮಿಕ ರೋಗಗಳ ಕಾಯ್ದೆ-1897ರ ಸೆಕ್ಷನ್ 2, 3 ಮತ್ತು 4ರ ಅನ್ವಯ ಕರ್ನಾಟಕ ಸಾಂಕ್ರಾಮಿಕ ರೋಗಗಳ ನಿಯಮಗಳು 2020ನ್ನು ರೂಪಿಸಿದೆ.
ರಾಜ್ಯ ಮಟ್ಟದ ತಾಂತ್ರಿಕ ತಜ್ಞರ ಸಮಿತಿಯು ಕೋವಿಡ್-19 ಖಾಯಿಲೆಯಂತೆ ಒಂದೇ ಒಂದು ರೋಗ ಲಕ್ಷಣಗಳನ್ನು ಹೊಂದಿರುವ Influenza like Illness(ILI) ಮತ್ತು Severely Acute Respiratory Illness(SARI) ಪ್ರಕರಣಗಳನ್ನು ಆರಂಭಿಕ ಹಂತದಲ್ಲಿಯೇ ತಪಾಸಣೆ ನಡೆಸುವದರಿಂದ ಸಮುದಾಯದಲ್ಲಿ ಕೋವಿಡ್-19 ರಿಂದ ಉಂಟಾಗಬಹುದಾದ ಅಸ್ವಸ್ಥತೆ ಮತ್ತು ಮರಣ ಪ್ರಮಾಣವನ್ನು ನಿರ್ಬಂಧಿಸಬಹುದಾಗಿರುತ್ತದೆ.
ಆದ್ದರಿಂದ ಕೋವಿಡ್-19ರ ನಿಬಂಧನೆಗಳ ಸೆಕ್ಷನ್ 12ರ ಉಪ ವಿಭಾಗ(ix)ನ ನಿಬಂಧನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ರಾಜ್ಯದಲ್ಲಿ ಕೋವಿಡ್-19 ರೋಗ ಮತ್ತಷ್ಟು ಹರಡುವುದನ್ನು ಪರಿಶೀಲಿಸಲು ಈ ಕೆಳಕಂಡ ನಿಯಮಗಳನ್ನು ರೂಪಿಸಲಾಗಿದೆ.
- ರಸಾಯನ ಶಾಸ್ತ್ರಜ್ಞರು / ಔಷಧಿ ಮಾರಾಟಗಾರರು ಹಾಗೂ ಆಸ್ಪತ್ರೆಗಳಲ್ಲಿನ ಔಷಧಿ ವಿತರಕರು ಕೌಂಟರ್ ಗಳಲ್ಲಿ ಈ ಕೆಳಕಂಡ ಔಷಧಿಗಳನ್ನು ಪಡೆಯುವ ಪ್ರತಿಯೊಬ್ಬ ವ್ಯಕ್ತಿಯ ಹೆಸರು, ವಿಳಾಸ, ಸ್ಥಳ ಮಾಹಿತಿ ಹಾಗೂ ಮೊಬೈಲ್ ಸಂಖ್ಯೆಗಳನ್ನು ಪಡೆಯತಕ್ಕದ್ದು.
- ರೋಗದ ಲಕ್ಷಣಗಳ ಚಿಕಿತ್ಸೆಗೆ ಸಂಬಂಧಿಸಿದಂತೆ ವಿಶಾಲವಾಗಿ ವರ್ಗೀಕರಿಸಿರುವ ಜ್ವರ(Antipyretics and Anti-inflammatory), ಶೀತ ( Anti-allergic) ಮತ್ತು ಕೆಮ್ಮು (Anti-tussive) ಔಷಧಿಗಳು.
- ಪ್ಯಾರಾಸಿಟಮಾಲ್, ಪ್ಯಾರಾಸಿಟಮಾಲ್ ನ ಎಲ್ಲಾ ಡೋಸೇಜ್ ಹಾಗೂ ಶಕ್ತತೆ, ಸಿಟ್ರಿಜಿನ್, ಕ್ಲೋರೋಫೆನಾರಮೈನ್ ಮುಂತಾದವು ಮತ್ತು ಎಲ್ಲಾ ರೀತಿಯ ಕೆಮ್ಮು ಸಿರಪ್ ಗಳು, ಈ ಎಲ್ಲಾ ಔಷಧಿಗಳು ಪ್ರತ್ಯೇಕವಾಗಿ ಅಥವಾ ಯಾವುದೇ ಔಷಧಿಗಳ ಸಂಯೋಜನೆಯಿಲ್ಲರುವ ಔಷಧಿಗಳು.
- ಔಷಧಿ ಮಾರಾಟಗಾರರು ಪ್ರತಿ ದಿನ ಈ ಎಲ್ಲಾ ದಾಖಲೆಗಳನ್ನು ಆಯಾ ಜಿಲ್ಲೆಯ ಆರೋಗ್ಯ ಅಧಿಕಾರಿಗಳಿಗೆ ಸಲ್ಲಿಸುವುದು ಹಾಗೂ ಜಿಲ್ಲೆಯ ಆರೋಗ್ಯಾಧಿಕಾರಿಗಳು ಅಥವಾ ಅವರ ಪ್ರತಿನಿಧಿಗಳು ಸದರಿ ದಾಖಲೆಗಳನ್ನು ಪರಿಶೀಲಿಸಬಹುದಾಗಿರುತ್ತದೆ.
ಈ ನಿಯಮಗಳನ್ನು ತಕ್ಷಣದಿಂದ ಜಾರಿಗೆ ಬಂದಿರುತ್ತದೆ ಮತ್ತು ಕೋವಿಡ್-19 ಸಾಂಕ್ರಾಮಿಕವು ಕೊನೆಗೊಳ್ಳುವವರೆಗೆ ಮಾನ್ಯತೆ ಹೊಂದಿರುತ್ತದೆ ಎಂಬುದಾಗಿ ಅಧಿಸೂಚನೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರು ತಿಳಿಸಿದ್ದಾರೆ.