4.0 ಲಾಕ್ ಡೌನ್ ಅವಧಿ ವಿಸ್ತರಣೆ ಮಾಡಿ ಕೇಂದ್ರ ಸರ್ಕಾರ ಗೈಡ್ ಲೈನ್ಸ್ ನೀಡಿತ್ತು. ಜೊತೆಗೆ ಕೆಲ ನಿರ್ಧಾರಗಳನ್ನು ತೆಗೆದುಕೊಳ್ಳಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇಂದು 11 ಗಂಟೆಗೆ ಹಿರಿಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಿಎಂ ಯಡಿಯೂರಪ್ಪ, ರಾಜ್ಯದ ಜನರಿಗೆ ಸ್ವಲ್ಪಮಟ್ಟಿನ ರೀಲಿಫ್ ನೀಡಿದ್ದಾರೆ
ಕೊರೊನಾ ಲಾಕ್ ಡೌನ್ ಗೆ ಕರ್ನಾಟಕದಲ್ಲಿ ಸಾಕಷ್ಟು ವಿನಾಯಿತಿಗಳನ್ನು ಘೋಷಿಸಲಾಗಿದೆ. ಸರ್ಕಾರದಿಂದ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್ ಕಾರ್ಯ ನಿರ್ವಹಣೆಗೆ ಅನುಮತಿ ನೀಡಲಾಗಿದೆ. ಆದರೆ ರೆಡ್ ಹಾಗೂ ಕಂಟೇನ್ ಮೆಂಟ್ ಝೋನ್ ಗಳಲ್ಲಿ ಬಸ್ ಸಂಚಾರಕ್ಕೆ ಅವಕಾಶ ನೀಡಿಲ್ಲ.
ಕಂಟೇನ್ ಮೆಂಟ್ ಝೋನ್ ಗಳಲ್ಲಿ ಕಠಿಣ ನಿರ್ಬಂಧಗಳು ಮುಂದುವರಿಯಲಿವೆ. ಉಳಿದೆಡೆಗಳಲ್ಲಿ ಆರ್ಥಿಕ ಚಟುವಟಿಕೆಗಳು ಪುನರಾರಂಭ ಆಗಲಿವೆ. ಆದರೆ ಭಾನುವಾರಗಳಂದು ಸಂಪೂರ್ಣ ಲಾಕ್ ಡೌನ್ ಗೆ ಆದೇಶಿಸಲಾಗಿದೆ. ಕೇಂದ್ರ ಸರ್ಕಾರದ ಮಾರ್ಗದರ್ಶಿ ಸೂತ್ರಗಳು ಬಂದ ನಂತರ, ಸಚಿವರ ಜತೆಗೆ ಚರ್ಚಿಸಿದ ಮೇಲೆ ಮುಖ್ಯಮಂತ್ರಿ ಯಡಿಯೂರಪ್ಪ ಈ ನಿರ್ಧಾರ ಕೈಗೊಂಡಿದ್ದಾರೆ.
ರಾಜ್ಯ ಸರ್ಕಾರ ಘೋಷಣೆ ಮಾಡಿದ ಪ್ರಕಾರ, ಎಲ್ಲ ಮಳಿಗೆಗಳನ್ನು ತೆರೆಯಲು ಅವಕಾಶ ನೀಡಲಾಗುತ್ತದೆ. ರಾಜ್ಯದೊಳಗೆ ಎಲ್ಲ ರೈಲುಗಳು ಸಂಚಾರ ಮಾಡಲಿವೆ. ಬಸ್ ಗಳಲ್ಲಿ 30 ಮಂದಿ ಪ್ರಯಾಣಿಸಬಹುದು. ಆದರೆ ಮುಖಕ್ಕೆ ಮಾಸ್ಕ್ ಧರಿಸಿರಬೇಕು. ಸಾಮಾಜಿಕ ಅಂತರ ಕಡ್ಡಾಯ ಮಾಡಲಾಗಿದೆ.
ಟ್ಯಾಕ್ಸಿ, ಆಟೋಗಳಲ್ಲಿ ಚಾಲಕರೂ ಸೇರಿದಂತೆ ಇಬ್ಬರು ಪ್ರಯಾಣಿಕರಿಗೆ ಮಾತ್ರ ಅವಕಾಶ. ಸಲೂನ್, ಸ್ಪಾ ತೆರೆಯಬಹುದು. ಮಾಲ್ ಗಳು ಹಾಗೂ ಶಾಪಿಂಗ್ ಕಾಂಪ್ಲೆಕ್ಸ್ ಗಳನ್ನು ತೆರೆಯುವಂತಿಲ್ಲ. ಇನ್ನು ಉದ್ಯಾನವನಗಳನ್ನು ಬೆಳಗ್ಗೆ 7ರಿಂದ 9ರ ತನಕ ಹಾಗೂ ಸಂಜೆ 5ರಿಂದ ರಾತ್ರಿ 7ರ ತನಕ ತೆರೆಯಲು ಅನುಮತಿ ನೀಡಲಾಗಿದೆ. ಉಳಿದಂತೆ ರಾತ್ರಿ 7ರಿಂದ ಬೆಳಗ್ಗೆ 7ರ ತನಕ ಕರ್ಫ್ಯೂ ಮುಂದುವರಿಯಲಿದೆ.
ಮೇ 31 ಲಾಕ್ ಡೌನ್ ಮುಂದುವರೆಯುತ್ತದೆ. ಕಂಟೇನ್ ಮೆಂಟ್ ಪ್ರದೇಶದಲ್ಲಿ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು. ಯಾರಾದರೂ ನಿಯಮ ಉಲ್ಲಂಘನೆ ಮಾಡಿದ್ರೆ ಕ್ರಿಮಿನಲ್ ಕೇಸ್ ದಾಖಲು ಮಾಡುತ್ತೇವೆ.