ಭಾರತ ಈ ಒಂದು ಹೆಸರಿಗೆ ಐತಿಹಾಸಿಕ ಮಹತ್ವವಿದೆ, ಇದು ಸಾವಿರಾರು ವರ್ಷಗಳಿಂದ ಭಾರತೀಯ ಪರಂಪರೆಯ್ಲಿ ಹಾಸುಹೊಕ್ಕಾಗಿ ನಿಂತಿದೆ, ಭಾರತ ಎಂದಾಕ್ಷಣ ನಮ್ಮಲ್ಲಿರುವ ದೇಶ ಭಕ್ತನೊಬ್ಬ ಎಚ್ಚೆತ್ತುಕೊಳ್ಳುತ್ತಾನೆ, ನಮ್ಮ ಸಾಂಸ್ಕೃತಿಕ ಪರಂಪರೆಯಲ್ಲಿ ಭಾರತವನ್ನು ಭಾರತ ಮಾತೆ ಎಂದು ಸಂಭೋಧಿಸಿ ಭಕ್ತಿಯಿಂದ ಕರೆಯಲಾಗುತ್ತಿದೆ. ಆದರೆ ಬ್ರೀಟೀಷರ ಆಳ್ವಿಕೆಯಲ್ಲಿ ಭಾರತದವನ್ನು ಇಂಟಿಯಾ ಎಂಬುದಾಗಿ ಕರೆಯಲು ಆರಂಭಿಸಿದರು. ಇದು ಹಾಗೇ ಮುಂದುವರೆದು ಇಂದಿಗೂ ಆಂಗ್ಲ ಭಾಷೆಯಲ್ಲಿ ಇಂಡಿಯಾ ಎಂದೂ, ಉಳಿದ ಭಾಷೆಗಳಲ್ಲಿ ಭಾರತ ಎಂತಲೂ ಕರೆಯಲಾಗುತ್ತಿದೆ. ಆದರೆ ಈ ಇಂಡಿಯಾ ಎಂಬ ಹೆಸರನ್ನು ಭಾರತ ಅಥವಾ ಹಿಂದೂಸ್ಥಾನ್ ಎಂದು ಕರೆಯಬೇಕು ಎಂದು ಸುಪ್ರಿಂಕೋರ್ಟ್ ಗೆ ಅರ್ಜಿಯನ್ನು ಹಾಕಲಾಗಿತ್ತು. ಇದರ ವಿಚಾರಣೆ ನಡೆದಉ ಇಂದು ತೀರ್ಪನ್ನು ನೀಡಲಾಗಿದೆ. ಅಷ್ಟಕ್ಕೂ ಈ ತೀರ್ಪು ಏನಾಗಿತ್ತು ಗೊತ್ತಾ..?
ಭಾರತೀಯ ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ 'ಇಂಡಿಯಾ' ಎಂಬ ಹೆಸರನ್ನು 'ಭಾರತ' ಅಥವಾ 'ಹಿಂದೂಸ್ಥಾನ' ಎಂದು ಬದಲಾಯಿಸುವಂತೆ ಕೋರಿ ದೆಹಲಿಯ ನಮಃ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ಇತ್ಯರ್ಥಗೊಳಿಸಿದೆ. ಈ ವಿವಾದವನ್ನು ನ್ಯಾಯಾಲಯದ ಮುಂದೆ ತರುವ ಬದಲು, ಈ ಅರ್ಜಿಯನ್ನು ಸಂಬಂಧಿಸಿದ ಸಚಿವಾಲಯದ ಮುಂದೆ ಇಟ್ಟು, ಸೂಕ್ತ ಕ್ರಮ ತೆಗೆದುಕೊಳ್ಳಲು ಮನವಿ ಮಾಡಿಕೊಳ್ಳುವಂತೆ ಮುಖ್ಯ ನ್ಯಾಯಮೂರ್ತಿಗಳಾದ ಎಸ್.ಎ. ಬೊಬ್ಡೆ, ಹಾಗೂ ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ, ಹೃಷಿಕೇಶ ರಾಯ್ ಅವರನ್ನೊಳಗೊಂಡ ಪೀಠ ಹೇಳಿದೆ.
'ಇಂಡಿಯಾ' ಎನ್ನುವುದು ಇಂಗ್ಲಿಷ್ ಪದ. ಇದನ್ನು ತೆಗೆದು ಹಾಕಿ ಹಿಂದೂಸ್ಥಾನ ಅಥವಾ ಭಾರತ ಎಂದು ಮಾಡಿದರೆ ಎಲ್ಲರಲ್ಲಿಯೂ ರಾಷ್ಟ್ರೀಯತೆ ಭಾವ ಮೂಡುತ್ತದೆ. ಹೆಸರು ತೆಗೆಯುವುದು ಸಾಂಕೇತಿಕ ಎಂದು ಎನಿಸಿದರೂ ಹೆಸರು ಬದಲಾವಣೆಯಿಂದ ನಮ್ಮತನದ ಭಾವನೆ ಮೂಡುವ ಕಾರಣ ಇಂಗ್ಲಿಷರ ಶಬ್ದ ನಮಗೆ ಬೇಡ. ನಮ್ಮ ಪೂರ್ವಜರು ಸ್ವಾತಂತ್ರ್ಯ ತರಿಸಿಕೊಡಲು ಸಾಕಷ್ಟು ಹೋರಾಟ ನಡೆಸಿದ್ದಾರೆ. ಆದ್ದರಿಂದ ಇಂಗ್ಲಿಷರು ಆಳ್ವಿಕೆಯ ಹೆಸರನ್ನು ತೆಗೆದುಹಾಕಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.
ಮುಘಲ್ ದೊರೆಗಳ ಆಡಳಿತದಲ್ಲಿ ಹಿಂದೂಸ್ಥಾನವಾಗಿದ್ದ ನಮ್ಮ ದೇಶವು, ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ 'ಇಂಡಿಯಾ' ಆಗಿ ಬದಲಾಗಿದೆ. ಆದರೆ ಬ್ರಿಟಿಷರ ಹೆಸರು ನಮಗೆ ಬೇಡ. ನಮ್ಮ ದೇಶ ಒಂದೋ ಭಾರತವಾಗಲೀ ಇಲ್ಲವೇ ಹಿಂದೂಸ್ಥಾನವಾಗಲಿ ಎಂದು ಅರ್ಜಿದಾರರು ಹೇಳಿದ್ದರು.
ಸಂವಿಧಾನದ 1 ನೇ ಪರಿಚ್ಛೇದವು 'ಒಕ್ಕೂಟದ ಹೆಸರು ಮತ್ತು ಭೂಪ್ರದೇಶದೊಂದಿಗೆ ವ್ಯವಹಾರ' ಇದರ ಬಗ್ಗೆ ಉಲ್ಲೇಖಿಸಿದೆ. ಇದರಲ್ಲಿಯೇ ತಿದ್ದುಪಡಿ ತರುವ ಮೂಲಕ ನಮ್ಮ ದೇಶವನ್ನು 'ಇಂಡಿಯಾ'ಮುಕ್ತ ಗೊಳಿಸುವಂತೆ ಅರ್ಜಿದಾರರ ಪರ ವಕೀಲರು ವಾದಿಸಿದರು. ಸಂವಿಧಾನಕ್ಕೆ ತಿದ್ದುಪಡಿ ತರಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶಿಸುವಂತೆ ಅವರು ಮನವಿ ಮಾಡಿಕೊಂಡರು.
ಅದಕ್ಕೆ ಪೀಠವು, ಇಂಡಿಯಾವನ್ನು ಭಾರತ ಎಂದೂ ಕರೆಯಲಾಗುತ್ತದೆ ಎಂಬ ಬಗ್ಗೆ ಸಂವಿಧಾನದಲ್ಲಿಯೇ ಉಲ್ಲೇಖವಾಗಿರುವ ಹಿನ್ನೆಲೆಯಲ್ಲಿ ಮತ್ತೆ ಈ ವಿಚಾರವನ್ನು ನ್ಯಾಯಾಲಯದ ಮುಂದೆ ತರುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿತು. ಇಂಥ ಅರ್ಜಿಗಳನ್ನು ಕೋರ್ಟ್ ಮುಂದೆ ತರುವ ಅಗತ್ಯ ಇರಲಿಲ್ಲ. ಸಂಬಂಧಿತ ಸಚಿವಾಲಯದ ಮುಂದೆ ಮನವಿ ಸಲ್ಲಿಸಿ, ಅಲ್ಲಿಯೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ ಎಂದು ನಿರ್ದೇಶಿಸುವ ಮೂಲಕ ಅರ್ಜಿಯನ್ನು ವಿಲೇವಾರಿ ಮಾಡಿತು.