ಆಸ್ಟ್ರೇಲಿಯಾದಲ್ಲಿ ಉಲ್ಬಣಗೊಂಡಿದ್ದ ಅರಣ್ಯ ನಾಶ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಜನವರಿ ತಿಂಗಳ ಭಾರತ ಪ್ರವಾಸವನ್ನು ರದ್ದುಗೊಳಿಸಿದ್ದರು. ಇದಾದ ನಂತರ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಇಂದು ವಿಡಿಯೋ ಸಂವಾದ ನಡೆಸಿದ್ದಾರೆ ಇದರಲ್ಲಿ ಕೆಲವು ಒಪ್ಪಂದಗಳಿಗೆ ಸಹಿಹಾಕಿದ್ದಾರೆ.  ಅಷ್ಟಕ್ಕೂ ಭಾರತ ಮತ್ತು ಆಸ್ಟ್ರೇಲಿಯಾ ದೇಶಗಳ ನಡುವೆ ಆದ ಒಪ್ಪಂದಗಳು ಯಾವುವು ಗೊತ್ತಾ..?

 

ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರು ವರ್ಚುವಲ್‌ ಶೃಂಗಸಭೆಯಲ್ಲಿ ಭಾಗವಹಿಸಿ ಮಾತುಕತೆ ನಡೆಸಿದರು. ಆ ನಂತರ ಮ್ಯೂಚುಯಲ್ ಲಾಜಿಸ್ಟಿಕ್ಸ್ ಸಪೋರ್ಟ್ ಅರೇಂಜ್‌ಮೆಂಟ್‌ (ಎಂಎಲ್‌ಎಸ್‌ಎ) ಒಪ್ಪಂದಕ್ಕೆ ಸಹಿ ಹಾಕಲಾಯಿತು. ಭಾರತ ಮತ್ತು ಆಸ್ಟ್ರೇಲಿಯಾದ ಸಶಸ್ತ್ರ ಪಡೆಗಳಿಗೆ ಆಹಾರ, ನೀರು, ಸಾರಿಗೆ, ತೈಲ, ಬಟ್ಟೆ, ಸಂವಹನ ಮತ್ತು ವೈದ್ಯಕೀಯ ಸೇವೆಗಳನ್ನು ಒದಗಿಸುವ ಮೂಲಕ ಪರಸ್ಪರ ಸಹಾಯ ಮಾಡಲು ಎಂಎಲ್‌ಎಸ್‌ಎ ಸಹಕಾರಿಯಾಗಲಿದೆ.

 

ಮಿಲಿಟರಿ ನೆಲೆಗಳ ಹಂಚಿಕೆ, ಸಂಗ್ರಹಣೆ, ಸೌಲಭ್ಯಗಳ ಬಳಕೆ, ತರಬೇತಿ ಸೇವೆಗಳು, ಬಿಡಿಭಾಗಗಳು, ದುರಸ್ತಿ, ನಿರ್ವಹಣೆ, ವಿಮಾನ ನಿಲ್ದಾಣ ಮತ್ತು ಬಂದರು ಸೇವೆಗಳನ್ನು ಪರಸ್ಪರ ಒದಗಿಸಲು ಇದು ಅನುಮತಿ ನೀಡುತ್ತದೆ. ಭಾರತ ಈಗಾಗಲೇ ಯುಎಸ್, ಫ್ರಾನ್ಸ್ ಮತ್ತು ಸಿಂಗಾಪುರದೊಂದಿಗೆ ಇದೇ ರೀತಿಯ ಒಪ್ಪಂದಗಳಿಗೆ ಸಹಿ ಹಾಕಿದೆ.

 

ಇಬ್ಬರು ನಾಯಕರು ಇಂದು ನಡೆದ ವರ್ಚುವಲ್‌ ಶೃಂಗಸಭೆಯಲ್ಲಿ ವ್ಯಾಪಾರ, ರಕ್ಷಣಾ, ಶಿಕ್ಷಣ ಮತ್ತು ಕೋವಿಡ್‌-19 ಬಿಕ್ಕಟ್ಟು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಮಾರಿಸನ್‌ ಅವರು ಮೋದಿ ಅವರ ನಾಯಕತ್ವಕ್ಕೆ ಧನ್ಯವಾದ ಅರ್ಪಿಸಿದರು. ಜಿ-20, ಇಂಡೋ-ಪೆಸಿಫಿಕ್‌ ಪ್ರದೇಶದ ವಿಚಾರಗಳಲ್ಲಿ ಮೋದಿ ಅವರು ವಹಿಸಿದ ಪಾತ್ರದ ಬಗ್ಗೆ ಮಾರಿಸನ್‌ ಶ್ಲಾಘಿಸಿದರು.

 

ಈ ಸಂದರ್ಭದಲ್ಲಿ ಗುಜರಾತಿ ಕಿಚಡಿಯ ಬಗ್ಗೆ ಪ್ರಸ್ತಾಪಿಸಿದ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್, ಮೋದಿ ಜೊತೆಗಿನ ಮುಂದಿನ ಸಭೆಗೂ ಮುನ್ನ ವೈಯಕ್ತಿಕವಾಗಿ ಗುಜರಾತಿ ಕಿಚಡಿಯನ್ನು ತಮ್ಮ ಅಡುಗೆ ಮನೆಯಲ್ಲಿ ಸಿದ್ಧಪಡಿಸುವುದಾಗಿ ಹೇಳಿದರು.

 

ಕೋವಿಡ್‌-19 ಜಾಗತಿಕ ಪಿಡುಗಿನ ಸಂದರ್ಭದಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ವರ್ಚುವಲ್ ಶೃಂಗಸಭೆಯಲ್ಲಿ ಉಭಯ ನಾಯಕರು ಕೆಲ ಹಗುರ ಕ್ಷಣಗಳನ್ನೂ ಹಂಚಿಕೊಂಡರು.

 

Find out more: