ಈಶಾನ್ಯ ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಭಾರತ ಮತ್ತು ಚೀನಾ ನಡುವಿನ ಸಂಘರ್ಷದ ನಂತರ, ಭಾರತದ ಸೇನೆಯ ಇಬ್ಬರು ಮೇಜರ್ ಸೇರಿದಂತೆ ಹತ್ತು ಮಂದಿ ಯೋಧರನ್ನು ಚೀನಾ ಬಿಡುಗಡೆಗೊಳಿಸಿದೆ ಎಂದು ವರದಿಯಾಗಿದೆ. ಘರ್ಷಣೆಯ ನಂತರ ಎರಡೂ ದೇಶಗಳ ನಡುವೆ ಮಾತುಕತೆ ನಡೆದ ನಂತರ ನಿನ್ನೆ ರಾತ್ರಿಯ ವೇಳೆ ಈ ಬೆಳವಣಿಗೆ ಕಂಡಿರುವುದಾಗಿ ಹೇಳಲಾಗಿದೆ.
ಸಂಘರ್ಷದ ವೇಳೆ ಯಾವುದೇ ಭಾರತೀಯ ಯೋಧರು ನಾಪತ್ತೆಯಾಗಿಲ್ಲ ಎಂದು ಸೇನೆ ನಿನ್ನೆ ಹೇಳಿಕೆ ನೀಡಿತ್ತು. ಆದರೆ ಈ ಬಗ್ಗೆ ಹೆಚ್ಚಿನ ವಿವರಗಳನ್ನು ಸೇನೆ ನೀಡಿರಲಿಲ್ಲ. ಈ ನಡುವೆಯೇ ಯೋಧರ ಬಿಡುಗಡೆಯ ಕುರಿತು ವರದಿಯಾಗಿದೆ. ಆದರೆ ಅಧಿಕಾರಿಗಳ ಅಧಿಕೃತ ಹೇಳಿಕೆ ಇನ್ನೂ ಹೊರಬಂದಿಲ್ಲ.
ಸೋಮವಾರ ಗಾಲ್ವನ್ ಪ್ರದೇಶದಲ್ಲಿ ಎರಡು ರಾಷ್ಟ್ರಗಳ ಸೈನಿಕರ ನಡುವೆ ಭೀಕರ ಘರ್ಷಣೆ ನಡೆದು ಭಾರತದ 20 ಮಂದಿ ಸೈನಿಕರು ಸಾವನ್ನಪ್ಪಿ ಹಲವು ಮಂದಿ ಗಾಯಗೊಂಡಿದ್ದರು. ಇದೇ ವೇಳೆ ಚೀನಾದ 43 ಮಂದಿ ಸೈನಿಕರು ಮೃತಪಟ್ಟು ಅನೇಕ ಸೈನಿಕರಿಗೆ ಗಾಯಗಳಾಗಿವೆ ಎಂದು ವರದಿಯಾಗಿತ್ತು. ಘರ್ಷಣೆ ಸಂದರ್ಭದಲ್ಲಿ ಭಾರತದ 10 ಯೋಧರನ್ನು ಚೀನಾ ತನ್ನ ವಶಕ್ಕೆ ಪಡೆದಿತ್ತು ಎಂದು ಹೇಳಲಾಗಿದೆ.
ಆದರೆ ನಿನ್ನೆಯಷ್ಟೇ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್‍ಅವರು ಭಾರತದ ಯಾವುದೇ ಸೈನಿಕರು ಚೀನಾದ ವಶದಲ್ಲಿಲ್ಲ. ಅಲ್ಲದೆ ಯಾರೊಬ್ಬರೂ ಕಣ್ಮರೆಯೂ ಆಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದರು. ಇದರ ನಡುವೆ ಸುದ್ದಿಸಂಸ್ಥೆಯೊಂದು 10 ಮಂದಿ ಭಾರತೀಯ ಸೈನಿಕರನ್ನು ಬಿಡುಗಡೆ ಮಾಡಿದೆ ಎಂದು ಹೇಳಿರುವುದು ಮಹತ್ವ ಪಡೆದುಕೊಂಡಿದೆ.
ಲಡಾಖ್ನ ಗಾಲ್ವನ್ ವ್ಯಾಲಿ ಪ್ರದೇಶದಲ್ಲಿ ನಡೆದ ಉಭಯ ಸೇನೆಗಳ ನಡುವೆ ನಡೆದ ಹೋರಾಟದ ನಂತರ ಭಾರತ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಆದರೆ ಸೇನೆಯು ಹೇಳಿಕೆಯನ್ನು ಬಿಡುಗಡೆ ಮಾಡಿ, ಘರ್ಷಣೆಯಲ್ಲಿ ಯಾವುದೇ ಭಾರತೀಯ ಯೋಧರು ಕಾಣೆಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ. 18 ಯೋಧರು ಪ್ರಾಣಾಪಾಯದಿಂದ ಪಾರಾಗಿದ್ದು ಲೇಹ್‍ನಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ 58 ಯೋಧರು ಒಂದು ವಾರದೊಳಗೆ ಕೆಲಸಕ್ಕೆ ಹಾಜರಾಗಬೇಕು ಎಂದು ಭಾರತೀಯ ಸೇನೆ ತಿಳಿಸಿದೆ. ಭಾರತ- ಚೀನಾ ನಡುವೆ ನಡೆದ ದಾಳಿಯಿಂದ ಭಾರತದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ನಮ್ಮ ದೇಶದ ಸುಮಾರು 20 ಯೋಧರು ಹುತಾತ್ಮರಾಗಿದ್ದಾರೆ. ಲಡಾಖ್‍ನ ಗಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರ ಮೇಲೆ ಚೀನಾ ಭೀಕರವಾಗಿ ಹಲ್ಲೆ ನಡೆಸಿದ್ದು, ಈ ವೇಳೆ ಚೀನಾ ಯೋಧರು ಮೊಳೆಗಳುಳ್ಳ ರಾಡ್ ಬಳಸಿ ಭೀಕರವಾಗಿ ದಾಳಿ ನಡೆಸಿದ್ದಾರೆಂದು ಹೇಳಲಾಗುತ್ತಿದೆ.
ಈ ಕುರಿತು ರಕ್ಷಣಾ ವಿಶ್ಲೇಷಕರೊಬ್ಬರು ಹಂಚಿಕೊಂಡಿರುವ ಪೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಕ್ಷಣಾ ವಿಶ್ಲೇಷಕ ಅಜಯ್ ಶುಕ್ಲಾ ಎಂಬುವವರು ಈ ಪೋಟೋವನ್ನು ಹಂಚಿಕೊಂಡಿದ್ದು, ಚೀನಾ ಯೋಧರ ವರ್ತನೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.