ಕೊರೋನಾ ವೈರಸ್ ಇದಾಗಿ ಏಪ್ರಿಲ್ ತಿಂಗಳಲ್ಲಿ ನಡೆಯ ಬೇಕಿದ್ದ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಇದರಿಂದ ಆತಂಕ ಗೊಂಡಿದ್ದ ವಿದ್ಯಾರ್ಥಿಗಳು ಲಾಕ್ ಡೌನ್ ತೆರವು ಗೊಳಿಸಿದ ನಂತರ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳನ್ನು ಭವಿಷ್ಯದ ದೃಷ್ಠಿಯಿಂದ ಎಸ್ಎಸ್ ಎಲ್ಸಿ ಪರೀಕ್ಷೆಯ ದಿನಾಂಕವನ್ನು ನಿಗದಿಪಡಿಸಲಾಗಿತ್ತು. ಆದರೆ ಇದಕ್ಕೆ ಪರ ವಿರೋಧಗಳು ಹೆಚ್ಚಾಗಿ ಕಂಡುಬಂದರೂ ಕೂಡ ಶಿಕ್ಷಣ ಸಚಿವರು ಇಟ್ಟ ಹೆಜ್ಜೆಯನ್ನು ಹಿಂದಿಡದೆ ಪರೀಕ್ಷೆಯ ದಿನಾಂಕವನ್ನು ನಿಗದಿ ಪಡಿಸಿದ್ದರು ಅದರಂತೆ ಇಂದಿನಿಂದ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳ ಪರೀಕ್ಷೆ ಆರಂಭವಾಗಿದೆ.
ಹೌದು ರಾಜ್ಯಾದ್ಯಂತ ಇಂದು ಎಸ್‌ಎಸ್ ಎಲ್ ಸಿ ಪರೀಕ್ಷೆ ಆರಂಭವಾಗಿದೆ. ಕೊರೊನಾ ಆತಂಕದ ನಡುವೆಯೇ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಆತ್ಮವಿಶ್ವಾಸದಿಂದ ಎಸ್‌ಎಸ್ ಎಲ್ ಸಿ ಮಕ್ಕಳು ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿದ್ದು ಕಂಡುಬಂತು. ಪರೀಕ್ಷಾ ಕೇಂದ್ರಕ್ಕೆ ತಮ್ಮ ಮಕ್ಕಳನ್ನು ಕರೆದುಕೊಂಡು ಬಂದ ಕೂಡಲೇ ಪೋಷಕರು ಹಿಂತಿರುಗಿ ಮನೆಗೆ ತೆರಳಬೇಕು. ಪರೀಕ್ಷಾ ಕೇಂದ್ರದ ಬಳಿ ಗುಂಪುಗಟ್ಟಿ ಮಾತನಾಡುವಂತಿಲ್ಲ, ಚರ್ಚೆ ಮಾಡುವಂತಿಲ್ಲ, ಪರೀಕ್ಷಾ ಕೇಂದ್ರಗಳಲ್ಲಿ ಪೋಷಕರನ್ನು ಗುಂಪುಗಟ್ಟಿ ನಿಲ್ಲದಂತೆ ಪೊಲೀಸರು ಎಚ್ಚರಿಕೆ ನೀಡಿದ್ದು ಕಂಡುಬಂತು.
ಕಲಬುರಗಿಯಲ್ಲಿ ಪರೀಕ್ಷಾ ಕೇಂದ್ರಕ್ಕೆ ತಮ್ಮ ಮಕ್ಕಳನ್ನು ಕರೆದುಕೊಂಡು ಬಂದ ಪೋಷಕರನ್ನು ಪೊಲೀಸ್ ಸಿಬ್ಬಂದಿ ತಳ್ಳಿರುವ ಬಗ್ಗೆ ವರದಿಯಾಗಿದೆ. ಮಕ್ಕಳು ಮಾಸ್ಕ್ ಧರಿಸಿ ಕೈಯಲ್ಲಿ ಪ್ಯಾಡ್, ಪರೀಕ್ಷಾ ಸಾಮಗ್ರಿಗಳು, ನೀರಿನ ಬಾಟಲ್ ಗಳನ್ನು ಹಿಡಿದು ಪರೀಕ್ಷಾ ಕೊಠಡಿಯೊಳಗೆ ಹೋಗುವುದು ಕಂಡುಬಂತು. ಮಕ್ಕಳು ಪರೀಕ್ಷಾ ಕೊಠಡಿಯೊಳಗೆ ಪ್ರವೇಶಿಸುವ ಮುನ್ನ ಆರೋಗ್ಯ ಇಲಾಖೆ ಸಿಬ್ಬಂದಿ ಮಕ್ಕಳನ್ನು ಥರ್ಮಲ್ ತಪಾಸಣೆಗೆ ಒಳಪಡಿಸಿ ಸ್ಯಾನಿಟೈಸರ್ ನಿಂದ ಕೈತೊಳೆದುಕೊಳ್ಳಲು ಹೇಳಿ ಒಳಗೆ ಬಿಟ್ಟರು.
ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಮಕ್ಕಳು ಯಾವ ರೀತಿ ಪರೀಕ್ಷಾ ಕೇಂದ್ರಕ್ಕೆ ಬಂದರು, ಅಲ್ಲಿ ಸಿಬ್ಬಂದಿ ಮಕ್ಕಳನ್ನು ಯಾವ ರೀತಿ ಒಳಗೆ ತಪಾಸಣೆ ಮಾಡಿ ಕಳುಹಿಸಿದರು ಎಂಬ ಬಗ್ಗೆ ವರದಿಗಳು ಬರುತ್ತಿವೆ. ಗಂಗಾವತಿಯಲ್ಲಿ ಪರೀಕ್ಷಾ ಕೇಂದ್ರವೊಂದರಲ್ಲಿ ಪರೀಕ್ಷೆ ಬರೆಯಲು ಬಂದ ಮಕ್ಕಳನ್ನು ಸಿಬ್ಬಂದಿ ಮತ್ತು ಶಿಕ್ಷಕರು ವಿಶೇಷವಾಗಿ ಸ್ವಾಗತಿಸಿದರು.
ಬೆಂಗಳೂರಿನ ಕೆಲವು ಪರೀಕ್ಷಾ ಕೇಂದ್ರಗಳಿಗೆ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಇಂದು ಬೆಳಗ್ಗೆ ಭೇಟಿ ನೀಡಿ ಅಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳು, ಮಕ್ಕಳು ಯಾವ ರೀತಿ ಪರೀಕ್ಷೆಗೆ ತಯಾರಾಗಿದ್ದಾರೆ ಎಂದು ಪರಿಶೀಲಿಸಿದರು. ಮಕ್ಕಳನ್ನು ಮಾತನಾಡಿಸಿ ಅವರಲ್ಲಿ ಸ್ಥೈರ್ಯ ತುಂಬಿದರು.
ಕರ್ನಾಟಕದಲ್ಲಿ ಓದುತ್ತಿರುವ ಕೇರಳ ರಾಜ್ಯದ ಗಡಿ ಗ್ರಾಮಗಳಿಂದ 367 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಕುಳಿತಿದ್ದಾರೆ. ಎಲ್ಲಾ 367 ಮಕ್ಕಳೂ ಇಂದು ಪರೀಕ್ಷೆಗೆ ಹಾಜರಾಗಿದ್ದಾರೆ. ಅವರನ್ನು ತಲಪಾಡಿ ಚೆಕ್ ಪೋಸ್ಟ್ ನಿಂದ ಬಸ್ ನಲ್ಲಿ ಕರೆತರಲಾಯಿತು ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.