ಭಾರತದ ಗಡಿ ಭಾಗದಲ್ಲಿ ಪದೇ ಪದೇ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಿರುವ ಚೀನಾ ದೇಶದ ಆರ್ಥಿಕತೆಗೆ ಪೆಟ್ಟು ನೀಡಲು ಕೇಂದ್ರ ಸರ್ಕಾರ ಪ್ರಸ್ತುತ 59 ಚೀನೀ ಆಪ್ ಗಳನ್ನು ಬ್ಯಾನ್ ಮಾಡಿದೆ ಇದಾದ ನಂತರ ಈಗ ಮತ್ತೊಂದು ನಿರ್ಧಾರವನ್ನು ಕೈಗೊಂಡಿದೆ ಈ ನಿರ್ಧಾರದ ಮೂಲಕ ಚೀನಾ ಆರ್ಥಿಕತೆಗೆ ಭಾರಿ ಹಿಂಜರಿತವನ್ನು ಉಂಟು ಮಾಡಲಿವೆ. ಅಷ್ಟಕ್ಕೂ ಆ ನಿರ್ಧಾರ ಏನು ಗೊತ್ತಾ..?
ಜಂಟಿ ಹೂಡಿಕೆ ಯೋಜನೆ ಸೇರಿದಂತೆ ದೇಶದಲ್ಲಿ ಯಾವುದೇ ಹೆದ್ದಾರಿ ಯೋಜನೆಗಳಲ್ಲಿ ಚೀನೀ ಕಂಪೆನಿಗಳು ಪಾಲ್ಗೊಳ್ಳಲು ಅನುಮತಿ ನೀಡುವುದಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಬುಧವಾರ ಹೇಳಿದ್ದಾರೆ. ಒಂದು ವೇಳೆ ತಂತ್ರಜ್ಞಾನ, ಸಲಹೆ ಅಥವಾ ವಿನ್ಯಾಸದ ವಿಷಯದಲ್ಲಿ ವಿದೇಶಿ ಜಂಟಿ ಹೂಡಿಕೆಗೆ ಮುಂದಾದರೂ ಚೀನೀ ಸಂಸ್ಥೆಗಳಿಗೆ ಮಾತ್ರ ಅವಕಾಶವೇ ಇಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ ವಿವಿಧ ಎಂಎಸ್‌ಎಂಇ(ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಸಂಸ್ಥೆಗಳು)ಗಳಲ್ಲಿ ಚೀನಾದ ಹೂಡಿಕೆದಾರರಿಗೆ ಅವಕಾಶ ನೀಡದಿರಲೂ ಸರಕಾರ ನಿರ್ಧರಿಸಿದೆ. ರಸ್ತೆ ನಿರ್ಮಾಣ ಯೋಜನೆಯಲ್ಲಿ ಜಂಟಿ ಹೂಡಿಕೆಗೂ ಚೀನೀಯರಿಗೆ ಅವಕಾಶ ನೀಡಬಾರದು ಎಂದು ದೃಢ ನಿಲುವು ತಳೆಯಲಾಗಿದೆ. ಹೆದ್ದಾರಿ ಯೋಜನೆಗಳಲ್ಲಿ ಪಾಲ್ಗೊಳ್ಳಬಯಸುವ ಭಾರತೀಯ ಸಂಸ್ಥೆಗಳ ಅರ್ಹತಾ ಮಾನದಂಡದ ಕುರಿತ ನಿಯಮಾವಳಿಯನ್ನು ಸಡಿಲಿಸಲು ಮತ್ತು ಚೀನಾದ ಸಂಸ್ಥೆಗಳನ್ನು ನಿಷೇಧಿಸುವ ಕಾರ್ಯಸೂಚಿಯನ್ನು ಶೀಘ್ರ ಜಾರಿಗೊಳಿಸಲಾಗುವುದು ಎಂದು ಭೂಸಾರಿಗೆ, ಹೆದ್ದಾರಿ ಮತ್ತು ಎಂಎಸ್‌ಎಂಇ ಇಲಾಖೆಯ ಸಚಿವ ಗಡ್ಕರಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಈ ಹಿಂದೆ ಅಂತಿಮಗೊಳಿಸಿರುವ ಕೆಲವು ಯೋಜನೆಗಳಲ್ಲಿ ಚೀನಾದ ಸಹಭಾಗಿತ್ವದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಗಡ್ಕರಿ, ಪ್ರಸ್ತುತ (ಈಗಿನ) ಮತ್ತು ಭವಿಷ್ಯದ ಟೆಂಡರ್‌ಗಳ ಬಗ್ಗೆ ಹೊಸ ನಿರ್ಧಾರವನ್ನು ಜಾರಿಗೊಳಿಸಲಾಗುವುದು . ಚೀನಾದ ಜಂಟಿ ಹೂಡಿಕೆ ಇರುವ ಪ್ರಕರಣಗಳಲ್ಲಿ ಮರು ಬಿಡ್ ನಡೆಸಲಾಗುವುದು ಎಂದರು. ದೇಶದ ಸಂಸ್ಥೆಗಳು ಬೃಹತ್ ಯೋಜನೆಗಳಲ್ಲಿ ಬಿಡ್ ಪಡೆಯಲು ಅನುಕೂಲವಾಗುವಂತೆ ಅರ್ಹತಾ ಮಾನದಂಡ ಸಡಿಲಿಸಲಾಗುವುದು. ಈ ಬಗ್ಗೆ ಚರ್ಚಿಸಿ ಕಾರ್ಯಸೂಚಿ ಸಿದ್ಧಪಡಿಸುವಂತೆ ಇಲಾಖೆಯ ಕಾರ್ಯದರ್ಶಿ ಗಿರಿಧರ್ ಅರಮನೆ ಹಾಗೂ ಎನ್‌ಎಚ್‌ಎಐ ಅಧ್ಯಕ್ಷ ಎಸ್‌ಎಸ್ ಸಂಧುಗೆ ಸೂಚಿಸಲಾಗಿದೆ ಎಂದ ಅವರು, ದೇಶದ ಸಂಸ್ಥೆಗಳಿಗೆ ವಿದೇಶಿ ಸಹಭಾಗಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಅವಕಾಶ ಬಾರದಂತೆ ಯೋಜನೆಗಳಿಗೆ ಅರ್ಹತಾ ಮಾನದಂಡವನ್ನು ತರ್ಕಬದ್ಧಗೊಳಿಸಬೇಕು ಎಂದು ಹೇಳಿದರು.
ಚೀನಾದ ಉತ್ಪನ್ನಗಳನ್ನು ಭಾರತದ ಬಂದರುಗಳಲ್ಲಿ ತಡೆಹಿಡಿಯುವ ಬಗ್ಗೆ ಪ್ರತಿಕ್ರಿಯಿಸಿದ ಗಡ್ಕರಿ, ಭಾರತದ ಬಂದರುಗಳಲ್ಲಿ ಚೀನಾದ ಸರಕುಗಳನ್ನು ಏಕಪಕ್ಷೀಯವಾಗಿ ತಡೆಹಿಡಿದಿಲ್ಲ. ದೇಶವನ್ನು ಸ್ವಾವಲಂಬಿ ರಾಷ್ಟ್ರವಾಗಿಸುವ ಸಂಕಲ್ಪಕ್ಕೆ ಪೂರಕವಾಗಿ ಎಂಎಸ್‌ಎಂಇ ಮತ್ತು ಉದ್ಯಮಿಗಳಿಗೆ ನೆರವಾಗಲು ಕ್ರಾಂತಿಕಾರದ ಕ್ರಮಗಳನ್ನು ಸರಕಾರ ಕೈಗೊಂಡಿದೆ ಎಂದು ಹೇಳಿದ್ದಾರೆ.