ಇಡೀ ವಿಶ್ವವನ್ನು ವ್ಯಾಪಿಸಿ ಸಾಕಷ್ಟು ಲಕ್ಷಾಂತರ ಮಂದಿಯನ್ನು ಬಲಿತೆಗೆದುಕೊಂಡು ಸಾಕಷ್ಟು ಜನರು ನಿರ್ಗತಿಕರಾಗಲು ಕಾರಣವಾದ ಕೊರೋನಾ ವೈರಸ್ ಹುಟ್ಟಿನ ಬಗ್ಗೆ ವಿಶ್ವದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ, ಒಂದು ವಾದ ಈ ಕೊರೋನಾ ವೈರಸ್ ಹುಟ್ಟಿದ್ದು ಚೀನಾದ ಲ್ಯಾಬ್ ನಲ್ಲಿ ಎಂದು ಹೇಳುತ್ತಿದ್ದರೆ ಮತ್ತೊಂದು ವಾದ ಈಕೊರೋನಾ ವೈರಸ್ ಹುಟ್ಟಿದ್ದು ಚೀನಾದ ವುವಾಂಗ್ ಮಾರುಕಟ್ಟೆಯಲ್ಲಿ ಎಂದು ಹೇಳಲಾಗುತ್ತಿದೆ. ಆದರೆ ಇವೆಲ್ಲವೂ ಕೂಡ ಗೊಂದಲದಲ್ಲೇ ಇರುವುದರಿಂದ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಕೊರೋನಾ ವೈರಸ್ ಮೂಲವನ್ನು ಗುರುತಿಸಲು ತನಿಖೆಯನ್ನು ನಡೆಸಬೇಕು ಎಂದು ಎಲ್ಲಾ ದೇಶಗಳು ಒತ್ತಾಯಿಸಿವೆ.
ಕಳೆದ ಆರು ತಿಂಗಳಿನಿಂದ ಇಡೀ ವಿಶ್ವವನ್ನೇ ಇನ್ನಿಲ್ಲದಂತೆ ಕಾಡುತ್ತಿರುವ ಕರೊನಾ ವೈರಸ್ಗೆ ಸದ್ಯ ಲಸಿಕೆ ಸಂಶೋಧನೆ ಕಾರ್ಯ ವೇಗವಾಗಿ ನಡೆಯುತ್ತಿದೆ. ಇದರ ನಡುವೆ, ಕರೊನಾ ವೈರಸ್ ಮೂಲ ಯಾವುದು ಎಂಬುದನ್ನು ಪತ್ತೆ ಹಚ್ಚಲು ವಿಶ್ವಸಂಸ್ಥೆ ಮುಂದಾಗಿದೆ.
ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆಯ ಮಹಾಧಿವೇಶನದಲ್ಲಿ ಅಮೆರಿಕ ಸೇರಿ 123ಕ್ಕೂ ಅಧಿಕ ದೇಶಗಳು ಕರೊನಾ ಮೂಲ ಕಂಡು ಹಿಡಿಯಲು ತನಿಖೆ ನಡೆಸಬೇಕೆಂದು ಹೇಳಿದ್ದವು. ಇದಕ್ಕೆ ಚೀನಾ ವಿರೋಧ ವ್ಯಕ್ತಪಡಿಸಿತ್ತು.
ಚೀನಾದಲ್ಲಿ ಸಾಂಕ್ರಾಮಿಕ ರೋಗವೊಂದು ಹರಡಿದೆ ಎಂದು 2020ರ ಜನವರಿ 9ರಂದು ವಿಶ್ವ ಆರೋಗ್ಯ ಸಂಸ್ಥೆಯ ಸ್ಥಳೀಯ ಘಟಕವು ಕೇಂದ್ರ ಕಚೇರಿಗೆ ಮಾಹಿತಿ ನೀಡಿತ್ತು. ಇದಾದ ಬಳಿಕ ಫೆ.11ರಂದು ವಿಶ್ವ ಆರೋಗ್ಯ ಸಂಸ್ಥೆ ಇದಕ್ಕೆ ಕೋವಿಡ್19 ಎಂದು ಹೆಸರಿಟ್ಟಿತ್ತು.
ಚೀನಾದಲ್ಲಿ ಕರೊನಾ ಕಾಣಿಸಿಕೊಂಡಿದೆ ಎಂದು ಗೊತ್ತಾದ ಆರು ತಿಂಗಳ ಬಳಿಕ ಅದರ ಮೂಲದ ತನಿಖೆಗೆ ವಿಶ್ವ ಆರೋಗ್ಯ ಸಂಸ್ಥೆ ಮುಂದಾಗಿದೆ. ಮುಂದಿನ ವಾರ ಚೀನಾಗೆ ತಜ್ಞರ ತಂಡವೊಂದು ಭೇಟಿ ನೀಡಲಿದೆ.
ಕರೊನಾ ವೈರಸ್ ಮೂಲ ಯಾವುದೆಂದು ಪತ್ತೆ ಹಚ್ಚಲು ಸಮಗ್ರ ತನಿಖೆ ನಡೆಸಬೇಕಾದ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ತಜ್ಞರಾದ ಡಾ. ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ. ಇದಕ್ಕಾಗಿ ಚೀನಾ ಸರ್ಕಾರದೊಂದಿಗೆ ಯೋಜನೆ ರೂಪಿಸಲಾಗಿದೆ.
ಪ್ರಾಣಿಯಿಂದ ಮನುಷ್ಯನಿಗೆ ಇದು ಹೇಗೆ ಹಬ್ಬಿತು? ಇವೆರಡರ ನಡುವೆ ಇನ್ನೊಂದು ಪ್ರಾಣಿ ಇದೆಯೇ? ಅಥವಾ ಕರೊನಾ ವೈರಸ್ ಬಾವಲಿಗಳಿಂದ ಮನುಷ್ಯನ ಸಂಪರ್ಕಕಕ್ಕೆ ಬಂತಾ? ಅಥವಾ ನೇರವಾಗಿ ಮನುಷ್ಯ ಇದರ ಸೋಂಕಿಗೆ ಒಳಗಾಗಿದ್ದಾನಾ? ಅದರ ಮೂಲ ಯಾವುದು ಎಂಬುದನ್ನೆಲ್ಲ ಕಂಡುಕೊಳ್ಳಬೇಕಿದೆ ಎಂದು ಅವರು ಹೇಳಿದ್ದಾರೆ.
ಚೀನಾದ ವುಹಾನ್ನಲ್ಲಿ ಸಾಂಕ್ರಾಮಿಕ ರೋಗ ಡಿಸೆಂಬರ್ 31ಕ್ರಂಕೂ ಮುಂಚೆಯೇ ಹರಡಿರುವುದು ಖಚಿತವಾಗಿತ್ತು. ಆದರೆ, ಬೇರೆ ದೇಶಗಳಿಗೆ ಈ ಮಾಹಿತಿಯನ್ನು ನೀಡಲು ವಿಳಂಬ ಮಾಡಿದೆ ಎಂಬುದು ಆರೋಪವಾಗಿದೆ.