ಅನೇಕ ವರ್ಷಗಳಿಂದ ವಿವಾದದ ಗೂಡಾಗಿದ್ದ ಅಯೋಧ್ಯೆ ತನ್ನ ವಿವಾಧಗಳನ್ನೆಲ್ಲಾ ನಿವಾರಿಸಿಕೊಂಡು ಇಂದು ರಾಮ ಮಂದಿರ ನಿರ್ಮಾಣಕ್ಕೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ, , ಈಗಾಗಲೇ ರಾಮ ಮಂದಿರ ನಿರ್ಮಾಣಕ್ಕೆ ಚಾಲನೆ ದೊರೆತಿದ್ದು, ಶೀಲಾನ್ಯಾಸ ನೆರವೇರಿಸಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ, ಈ ಶಿಲಾನ್ಯಾಸ ನಿರ್ಮಾಣವನ್ನು ಮಾಡಲು ಮೋದಿಜಿಯವರಿಗೆ ಆಹ್ವಾನವನ್ನು ನೀಡಲು ಚಿಂತಿಸಲಾಗಿದೆ ಅಷ್ಟಕ್ಕೂ ಎಂದಿಗೆ ನಡೆಯಲಿದೆ ಗೊತ್ತಾ ಶಿಲಾನ್ಯಾಸ..?
ಅಯೋಧ್ಯೆಯಲ್ಲಿ ಪ್ರಸ್ತಾವಿತ ರಾಮ ಮಂದಿರ ನಿರ್ಮಾಣದ ಶಿಲಾನ್ಯಾಸವನ್ನು ಆಗಸ್ಟ್ 3 ಅಥವಾ 5ರಂದು ನೆರವೇರಿಸಲಾಗುವುದು ಎಂದು ಮಂದಿರದ ನಿರ್ಮಾಣ ಕಾರ್ಯಗಳ ಮೇಲ್ವಿಚಾರಣೆ ನೋಡಿಕೊಳ್ಳಲಿರುವ ರಾಮ ಜನ್ಮಭೂಮಿ ತೀರ್ಥ ಟ್ರಸ್ಟ್ ಮಾಹಿತಿ ನೀಡಿದೆ. ಅಯೋಧ್ಯೆಯಲ್ಲಿ ಶನಿವಾರ ನಡೆಸಿದ ಮೊದಲ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ದೇವಾಲಯದ ಶಿಲಾನ್ಯಾಸ ನೆರವೇರಿಸಲು ಆಹ್ವಾನ ಕಳುಹಿಸಲು ನಿರ್ಧರಿಸಲಾಯಿತು.
ಪ್ರಧಾನಿ ನರೇಂದ್ರ ಮೋದಿಯವರಿಗೆ ನಾವು ಆಹ್ವಾನವನ್ನು ಕಳುಹಿಸುತ್ತೇವೆ. ಈ ಕುರಿತಾದ ಅಂತಿಮ ತೀರ್ಮಾನವನ್ನು ಪ್ರಧಾನಿ ತೆಗೆದುಕೊಳ್ಳಲಿದ್ದಾರೆ ಎಂದು ಟ್ರಸ್ಟ್ ಕಾರ್ಯದರ್ಶಿ ಚಂಪತ್ ರೈ ಸಭೆಯ ನಂತರ ತಿಳಿಸಿದರು.
ಜೊತೆಗೆ ಇದೇ ವೇಳೆ ಈ ಸಭೆಯಲ್ಲಿ ರಾಮ ದೇವಾಲಯದ ನಕ್ಷೆಯನ್ನು ಬದಲಾಯಿಸುವ ಬಗ್ಗೆ, ಮತ್ತು ಮೂರು ಬದಲು ಐದು ಗುಮ್ಮಟಗಳ ನಿರ್ಮಾಣ ಮಾಡಲು ನಿರ್ಧಾರ ಮಾಡಲಾಗಿದೆ. ದೇವಾಲಯದ ಎತ್ತರವು ಉದ್ದೇಶಿತ ನಕ್ಷೆಗಿಂತ ಹೆಚ್ಚಿರುತ್ತದೆ. ಇದಲ್ಲದೆ, ಆಗಸ್ಟ್ 3 ಮತ್ತು 5 ರ ದೇವಾಲಯದ ಅಡಿಪಾಯ (ಭೂಮಿ ಪೂಜೆ) ಗಾಗಿ ಎರಡು ದಿನಾಂಕಗಳನ್ನು ಪ್ರಧಾನಿ ಮೋದಿಯವರಿಗೆ ಕಳುಹಿಸಲಾಗಿದ್ದು, ಪ್ರಧಾನಿ ಮೋದಿಯವರಿಗೆ ಅನುಕೂಲವಾಗಿರುವ ದಿನಾಂಕದಂದು ಭೂಮಿ ಪೂಜೆಗೆ ಬರುವ ಸಾಧ್ಯತೆ ದಟ್ಟವಾಗಿದೆ.
ಅಯೋಧ್ಯೆಯ ಋಷಿಗಳು ಮತ್ತು ಸಂತರು ಪ್ರಧಾನಿ ಮೋದಿಯವರೇ ಅಯೋಧ್ಯೆಗೆ ಬಂದು ಶಿಲಾನ್ಯಾಸ ನೆರವೇರಿಸುವಂತೆ ಬಯಸುತ್ತಿದ್ದಾರೆ. ರಾಮ ದೇವಾಲಯದ ವಿನ್ಯಾಸವನ್ನು ಬದಲಾಯಿಸಲಾಗಿದೆ ಮತ್ತು ಈಗ ಅದು ಮೊದಲೇ ನಿರ್ಧರಿಸಿದಂತೆ ಮೂರರ ಬದಲು ಐದು ಗುಮ್ಮಟಗಳನ್ನು ಹೊಂದಿರುತ್ತದೆ. ರಾಮ ದೇವಾಲಯವು ಮೂರರಿಂದ ಮೂರೂವರೆ ವರ್ಷದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ರೈ ಹೇಳಿದರು.
ಪರಿಸ್ಥಿತಿ ಸಾಮಾನ್ಯವಾದ ನಂತರ ಉದ್ದೇಶಿತ ದೇವಾಲಯಕ್ಕೆ ಹಣ ಸಂಗ್ರಹಣೆ ಪ್ರಾರಂಭವಾಗುತ್ತದೆ ಎಂದು ಅವರು ಹೇಳಿದರು.
ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲು ಅಯೋಧ್ಯೆಗೆ ಪ್ರಯಾಣಿಸುವ ಮೋದಿಯವರ ಯೋಜನೆಯ ಬಗ್ಗೆ ಪ್ರಧಾನಿ ಕಚೇರಿಯಿಂದ ಈವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಒಂದು ವೇಳೆ ಅವರು ಅಯೋಧ್ಯೆಗೆ ಭೇಟಿ ನೀಡಿದರೆ ಇದು ಅವರ ಮೊದಲ ಭೇಟಿಯಾಗಲಿದೆ.
ರಾಮ ದೇವಾಲಯವನ್ನು ನಿರ್ಮಿಸುವ ಭೂಮಿಯನ್ನು ಮಟ್ಟಸಗೊಳಿಸುವ ಕೆಲಸ ಪೂರ್ಣಗೊಂಡಿದೆ. ನಿರ್ಮಾಣ ಕಾರ್ಯಕ್ಕಾಗಿ ನಿಯೋಜಿಸಲಾಗಿದ್ದ ಕಂಪನಿಯು ದೇಗುಲದ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಲು ಸಿದ್ಧವಾಗಿದೆ ಎಂದು ಮಾಹಿತಿ ನೀಡಿತ್ತು.