ಕೊರೋನಾ ವೈರಸ್ ಹೆಚ್ಚಾಗದಂತೆ ತಡೆಯಲು ಮಾಡಲಾಗಿದ್ದ 3 ಹಂತದ ಲಾಕ್ ಡೌನ್ ನನ್ನು ನಿಧಾನವಾಗಿ ಅನ್ ಲಾಕ್ ಮಾಡಲಾಗುತ್ತಿದೆ  ಇಂತಹ ಸಂದರ್ಭದಲ್ಲಿ  ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು  ಸಾವಿರಾರು ಸಂಖ್ಯೆಯಲ್ಲಿ ಸಾವುಗಳು ಸಂಭವಿಸುತ್ತಿದೆ. ಇದನ್ನು ತಡೆಗಟ್ಟಲು ಸರ್ಕಾರ  ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಈ ಕುರಿತು ಮೋದಿಯವರು ಭಾರತೀಯರಿಗೆ ಒಂದು ಕರೆಯನ್ನು ನೀಡಿದ್ದಾರೆ.

ಕೊರೋನಾ ವೈರಸ್ ಆರಂಭಕ್ಕಿಂತಲೂ ಪ್ರಸ್ತುತ ಅತಿಹೆಚ್ಚು ಅಪಾಯಕಾರಿಯಾಗಿದ್ದು, ಈ ವರ್ಷ ಆಗಸ್ಟ್ 15 ರಂದು ದೇಶ ಸ್ವಾತಂತ್ಯ್ರ ದಿನಾಚರಣೆಯನ್ನು ಆಚರಿಸುವ ಸಂದರ್ಭದಲ್ಲಿ ಕೊರೋನಾದಂತಹ ಸಾಂಕ್ರಾಮಿಕ ರೋಗದಿಂದ ನಾವು ಸ್ವಾತಂತ್ಯ್ರದ ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಭಾರತದಲ್ಲಿ ಈಗಾಗಲೇ ಕೊರೋನಾ ಸೋಂಕಿತರ ಸಂಖ್ಯೆ 13 ಲಕ್ಷದ ಗಡಿದಾಟಿದೆ. ಕೊರೋನಾದಿಂದ ಮೃತಪಡುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ದ್ವಿಗುಣವಾಗುತ್ತಲೇ ಇದೆ. ಕೊರೋನಾದಿಂದಾಗಿ ಅತಿಹೆಚ್ಚು ಹಾನಿಗೊಳಗಾದ ದೇಶಗಳ ಪೈಕಿ ಅಮೆರಿಕ, ಬ್ರೆಜಿಲ್ ನಂತರದ ಮೂರನೇ ಸ್ಥಾನದಲ್ಲಿ ಭಾರತ ಸ್ಥಾನ ಪಡೆದಿದೆ. ಈ ಹಿನ್ನೆಲೆಯಲ್ಲಿ ಇಂದಿನ ಮನ್ ಕಿ ಬಾತ್‌ನಲ್ಲಿ ದೇಶದ ಜನರಿಗೆ ಸಂದೇಶ ರವಾನಿಸಿರುವ ಪ್ರಧಾನಿ ನರೇಂದ್ರ ಮೋದಿ, 'ಈ ವರ್ಷದ ಆಗಸ್ಟ್ 15ರ ಸ್ವಾತಂತ್ಯ್ರ ದಿನಾಚರಣೆಯನ್ನು ನಾವು ವಿಭಿನ್ನ ಸನ್ನವೇಶದಲ್ಲಿ ಆಚರಿಸುತ್ತಿದ್ದೇವೆ. ಹೀಗಾಗಿ ಈ ಸ್ವಾತಂತ್ಯ್ರದ ದಿನದಂದು ನಾವು ಸಾಂಕ್ರಾಮಿಕ ರೋಗದಿಂದ ಸ್ವಾತಂತ್ರ್ಯದ ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕೆಂದು ಯುವಕರನ್ನು ಈ ದೇಶದ ಜನರನ್ನು ನಾನು ಕೋರುತ್ತೇನೆ.

ಸ್ವಾವಲಂಬಿ ಭಾರತಕ್ಕಾಗಿ ಇಡೀ ದೇಶದ ಜನ ಒಗ್ಗಟ್ಟಾಗಿ ಒಂದು ಸಂಕಲ್ಪವನ್ನು ತೆಗೆದುಕೊಳ್ಳಿ. ಹೊಸದನ್ನು ಕಲಿಯುವ ಹಾಗೂ ಕಲಿಸುವ ಸಂಕಲ್ಪ ಮತ್ತು ನಮ್ಮದನ್ನು ಶ್ರದ್ಧೆಯಿಂದ ನಿರ್ವಹಿಸುವ ಸಂಕಲ್ಪಗಳನ್ನು ತೆಗೆದುಕೊಳ್ಳಿ. ನಿಮ್ಮ ಕರ್ತವ್ಯಗಳನ್ನು ಚಾಚೂ ತಪ್ಪದೆ ಪಾಲಿಸಿ' ಎಂದು ನರೇಂದ್ರ ಮೋದಿ ಕರೆ ನೀಡಿದ್ದಾರೆ.

'ಕೊರೋನಾ ಸಾಂಕ್ರಾಮಿಕ ರೋಗದಿಂದ ದೇಶ ಹೆಚ್ಚು ಹಾನಿಗೊಳಗಾಗಿದೆ. ಆದರೆ, ಇದರ ನಡುವೆಯೂ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆಯೂ ಅಧಿಕವಾಗಿದೆ. ನಮ್ಮ ದೇಶದಲ್ಲಿ COVID-19 ಚೇತರಿಕೆ ಪ್ರಮಾಣ ಇತರ ದೇಶಗಳಿಗಿಂತ ಉತ್ತಮವಾಗಿದೆ. ಸಂಕಷ್ಟದ ನಡುವೆಯೂ ನಾವು ಲಕ್ಷಾಂತರ ಜನರ ಪ್ರಾಣವನ್ನು ಉಳಿಸಲು ಸಾಧ್ಯವಾಗಿದೆ.

ಆದರೆ, ಕೊರೋನವೈರಸ್ ಬೆದರಿಕೆ ಇನ್ನೂ ಮುಗಿದಿಲ್ಲ. ಈ ವೈರಸ್ ಆರಂಭಕ್ಕಿಂತಲೂ ಈಗ ಹೆಚ್ಚು ಅಪಾಯಕಾರಿಯಾಗುತ್ತಿದೆ. ಹೀಗಾಗಿ ನಾವು ಸಾಕಷ್ಟು ಜಾಗರೂಕರಾಗಿರಬೇಕು. ಜನ COVID-19 ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕಾದ ಅಗತ್ಯತೆ ಇದೆ' ಎಂದು ಪ್ರಧಾನಿ ನರೇಂದ್ರ ಮೋದಿ ಕಿವಿಮಾತು ಹೇಳಿದ್ದಾರೆ.


Find out more: