ಕೊರೋನಾ ವೈರಸ್ ಇಂದಾಗಿ ಶಾಲಾ ಕಾಲೇಜುಗಳನ್ನು ಆರಂಭಿಸಲು ತಡವಾಗುವುದರಿಂದ ಪ್ರಸ್ತುತ ಪಠ್ಯ ಪುಸ್ತಕದಲ್ಲಿ ಇರುವ ಎಲ್ಲಾ ಪಠ್ಯಯಗಳನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡಲು ಕಷ್ಟವಾಗುತ್ತದೆ. ಹಾಗಾಗಿ ಪಠ್ಯದಲ್ಲಿರುವ ಕೆಲವು ಪಠ್ಯಗಳನ್ನು ಕೈಬಿಟ್ಟು ಅವಶ್ಯಕತೆ ಇರುವಂತಹ ಪಠ್ಯವನ್ನು ಮಾತ್ರ ಅಳವಡಿಸಿ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲ ಮಾಡಿಕೊಡುವುದು ಶಿಕ್ಷಣ ಇಲಾಖೆಯ ಉದ್ದೇಶವಾಗಿದೆ, ಆದರೆ ಪಠ್ಯಗಳನ್ನು ಕಡಿತಗೊಳಿಸುವಾಗ ಯೇಸು ಹಾಗೂ ಟಿಪ್ಪುವಿನ ಪಠ್ಯಗಗಳನ್ನು ಕೂಡ ಕೈಬಿಡಲಾಗಿದೆ. ಇದಕ್ಕೆ ರಾಜ್ಯದಲ್ಲಿ ಸಾಕಷ್ಟು ಪರವಿರೋಧಗಳು ಕೇಳಿ ಬರುತ್ತಿದೆ. ಹಾಗೂ ಸರ್ಕಾರದ ಈ ಒಂದು ಕ್ರಮಕ್ಕೆ ಮಾಜಿ ಪ್ರಧಾನಿಗಳೂ ಕೂಡ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಹೌದು ಕ್ರೈಸ್ತ ಧರ್ಮದ ಸಂಸ್ಥಾಪಕ ಏಸುಕ್ರಿಸ್ತ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರನ್ನು ಪಠ್ಯ ಪುಸ್ತಕದಿಂದ ಬಿಜೆಪಿ ಸರ್ಕಾರ ಹೊರಗಿಡಲು ಹೊರಟಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಒಟ್ಟಾಗಿ ಬಾಳಬೇಕೆಂದು ಬೋಧಿಸಿದ ಶಾಂತಿಧೂತ, ಬೇರೆಯವರನ್ನು ರಕ್ಷಿಸಲು ತಾನೇ ಶಿಲುಬೆಗೇರಿದ ಏಸುಕ್ರಿಸ್ತನ ಚರಿತ್ರೆ ಮತ್ತು ಬೋಧನೆಗಳನ್ನು ಪಠ್ಯ ಪುಸ್ತಕದಿಂದ ತೆಗೆದುಹಾಕಲು ಹೊರಟಿರುವ ಬಿಜೆಪಿ ಅಧರ್ಮಿ ಪಕ್ಷ ಎಂದು ಗೌಡರು ವಾಗ್ದಾಳಿ ನಡೆಸಿದರು.
ವಿದೇಶಿಗರ ವಿರುದ್ಧ ಹೋರಾಟ ನಡೆಸಿದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರು ಮದ್ಯಪಾನದ ಕಡು ವಿರೋಧಿಯಾಗಿದ್ದರಲ್ಲದೆ ಧರ್ಮ ಸಹಿಷ್ಣುವಾಗಿದ್ದರು ಎಂಬುದಕ್ಕೆ ಶೃಂಗೇರಿ ಪೀಠದಲ್ಲಿ ದೇವಿಯ ಮರುಪ್ರತಿಷ್ಠಾಪನೆಗೆ ನೆರವು, ಮೇಲುಕೋಟೆಯ ಚಲುವನಾರಾಯಣಸ್ವಾಮಿಗೆ ಆಭರಣ ಅರ್ಪಣೆ, ಮೈಸೂರಿನ ಚಾಮುಂಡೇಶ್ವರಿ ಮತ್ತು ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಗಳಿಗೆ ಸಾಮಗ್ರಿಗಳನ್ನು ನೀಡಿರುವುದೇ ಉದಾಹರಣೆಯಾಗಿದೆ ಎಂದರು.
ಪ್ರಥಮ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ್ದ ಜಾಫರ್ ಷಾ ಅವರನ್ನು ಮರೆತಲ್ಲಿ ಅದರಲ್ಲಿ ಭಾಗಿಯಾದ ಝಾನ್ಸಿರಾಣಿ ಲಕ್ಷ್ಮೀಭಾಯಿ, ತಾತ್ಯಾಟೋಪಿ ಮೊದಲಾದವರ ಇತಿಹಾಸಗಳನ್ನು ಪಠ್ಯಪುಸ್ತಕದಿಂದ ಕೈ ಬಿಡುವರೇ ಎಂದು ಗೌಡರು ಪ್ರಶ್ನಿಸಿದರು. ಯಾವುದೇ ದೇಶದ ಧರ್ಮ ಮತ್ತು ಪರಂಪರೆ ಆಚರಣೆ ವಿಚಾರವನ್ನು ಋಷಿಮುನಿಗಳು ಮತ್ತು ಶ್ರದ್ಧಾಧರ್ಮಿಗಳಿಗೆ ಬಿಡಬೇಕು. ದೇಶದ ಇತಿಹಾಸ ರಚನೆಯನ್ನು ಕಲ್ಮಶವಿಲ್ಲದೆ ರಚನೆ ಮಾಡಲು ಇತಿಹಾಸಕಾರರಿಗೆ ಬಿಡಬೇಕು ಎಂದಿದ್ದಾರೆ.
ಕೆಂಪೇಗೌಡ ಮತ್ತು ಬಸವ ಜಯಂತಿ ಮಾದರಿಯಲ್ಲೇ ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಜಯಂತಿ ಆಚರಿಸುವ ನಾವು ದೇಶಭಕ್ತ ಟಿಪ್ಪು ಜಯಂತಿ ಆಚರಣೆಗೆ ಏಕೆ ಅಡ್ಡಿ ಪಡಿಸಬೇಕು ಎಂಬುದನ್ನು ಬಿಜೆಪಿ ರಾಜ್ಯದ ಜನತೆಗೆ ವಿವರಿಸಬೇಕು ಎಂದು ಅವರು ಒತ್ತಾಯಿಸಿದರು.
ಆಗಸ್ಟ್ 4ರಂದು ಜೆಪಿ ಭವನದಲ್ಲಿ ಶಾಸಕರು, ಪರಾಜಿತ ಅಭ್ಯರ್ಥಿಗಳು ಹಾಗೂ ಜಿಲ್ಲಾಧ್ಯಕ್ಷರ ಸಭೆಯನ್ನು ಕರೆಯಲಾಗಿದೆ. 200ಕ್ಕೂ ಹೆಚ್ಚು ಮಂದಿ ಭಾಗವಹಿಸುವಂತಿಲ್ಲ. ಹೀಗಾಗಿ ತಾಲ್ಲೂಕು ಘಟಕಗಳ ಅಧ್ಯಕ್ಷರ ಸಭೆಯನ್ನು ಪ್ರತ್ಯೇಕವಾಗಿ ಕರೆಯಲಾಗುವುದು ಎಂದು ಅವರು ಹೇಳಿದರು.