ದೇಶದಲ್ಲಿ ಕೊರೋನಾ ವೈರಸ್ ದಿನದಿಂದ ದಿನಕ್ಕೆ ತನ್ನ ಘಾಡತೆಯನ್ನು ಹೆಚ್ಚಿಸುತ್ತಾ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಾ ಮುಂದೆ ಸಾಗುತ್ತಿದೆ. ಇತ್ತೀ ಚಿನ ದಿನಗಳಲ್ಲಿ ಕೊರೋನಾ ವೈರಸ್ ಒಂದು ದಿನಕ್ಕೆ 50 ಸಾವಿರದ ಗಡಿಯನ್ನು ತಲುಪುತ್ತಿದೆ, ಇದರಂತೆ ಸಾವಿನ ಪ್ರಮಾಣವೂ ಕೂಡ ಹೆಚ್ಚಾಗುತ್ತಿದೆ.
ಹೌದು ದೇಶದಲ್ಲಿ ಡೆಡ್ಲಿ ಕೊರೊನಾ ಸೋಂಕಿನ ಮಹಾಸೋಟದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಒಂದೇ ದಿನ 67,000 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಮಹಾಮಾರಿ ರೌದ್ರಾವತಾರ ಮತ್ತೆ ತೀವ್ರಗೊಂಡಿದೆ.
ಸೋಮವಾರ ಮೊದಲ ಬಾರಿಗೆ ಪಾಸಿಟಿವ್ ಪ್ರಕರಣದಲ್ಲಿ ಭಾರೀ ಕುಸಿತ ಕಂಡುಬಂದಿತ್ತು. ಆದರೆ ಮೊನ್ನೆಯಿಂದ ಮತ್ತೆ ಕ್ರೂರಿ ಕೊರೊನಾ ಅಬ್ಬರಿಸಿ ಬೊಬ್ಬರಿಯುತ್ತಿದೆ. ನಿನ್ನೆಯಿಂದ ಇಂದು ಬೆಳಗ್ಗೆವರೆಗೆ ಮತ್ತೆ ವೈರಸ್ ಸೋಂಕು ಮತ್ತು ಸಾವಿನ ಪ್ರಮಾಣ ಆತಂಕಕಾರಿ ಮಟ್ಟದಲ್ಲೇ ಮುಂದುವರಿದಿದೆ.
ನಿನ್ನೆ 24 ತಾಸುಗಳ ಅವಯಲ್ಲಿ 67,000ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ದಾಖಲಾಗಿದ್ದು, ಇದೇ ಅವಯಲ್ಲಿ 942 ರೋಗಿಗಳು ಮೃತಪಟ್ಟಿದ್ದಾರೆ.ಮೊನ್ನೆಗೆ ಹೋಲಿಸಿದಲ್ಲಿ ನಿನ್ನೆಯಿಂದ ಇಂದು ಬೆಳಗ್ಗೆವರೆಗೆ ಸೋಂಕು ಪ್ರಕರಣದಲ್ಲಿ ಸುಮಾರು 6,000ರಷ್ಟು ಏರಿಕೆ ಕಂಡುಬಂದಿದೆ.
ಅಗಸ್ಟ್ ಮೂರು ಮತ್ತು ನಾಲ್ಕನೆ ವಾರದಲ್ಲಿ ಕೋವಿಡ್-19 ವೈರಸ್ ಅಟ್ಟಹಾಸ ಮತ್ತಷ್ಟು ಹೆಚ್ಚಾಗಲಿದೆ ಎಂದು ಈಗಾಗಲೇ ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ದೇಶದಲ್ಲಿ ಈಗ ಸೋಂಕಿತರ ಸಂಖ್ಯೆ 24 ಲಕ್ಷ ಸನಿಹದಲ್ಲಿರುವುದು ಮತ್ತು ಮೃತರ ಸಂಖ್ಯೆ 47,000 ದಾಟಿರುವುದು ಆತಂಕಕಾರಿ ಸಂಗತಿಯಾಗಿದೆ. ದೇಶದಲ್ಲಿ ಒಂದೆಡೆ ಚೇತರಿಕೆ ಪ್ರಮಾಣದಲ್ಲಿ ವೃದ್ದಿ ಕಂಡುಬಂದಿದ್ದರೂ, ಮತ್ತೊಂದೆಡೆ ಸಕ್ರಿಯ ಪ್ರಕರಣಗಳ ಹೆಚ್ಚಳ ಆತಂಕಕ್ಕೆ ಕಾರಣವಾಗಿದೆ.
ಇದರ ನಡುವೆಯೂ 16.95 ಲಕ್ಷಕ್ಕೂ ಹೆಚ್ಚು ಮಂದಿ ಹೆಮ್ಮಾರಿಯ ಬಿಗಿಹಿಡಿತದಿಂದ ಪಾರಾಗಿದ್ದು, ಚೇತರಿಕೆ ಪ್ರಮಾಣದಲ್ಲಿ ಶೇ.70.77ರಷ್ಟು ಏರಿಕೆ ಕಂಡುಬಂದಿದೆ. ನಿನ್ನೆಯಿಂದ ಇಂದು ಬೆಳಗ್ಗೆವರೆಗೆ 66,999 ಜನರಿಗೆ ಸಾಂಕ್ರಾಮಿಕ ರೋಗ ತಗುಲಿದೆ. 24 ತಾಸುಗಳಲ್ಲಿ 942 ಮಂದಿ ಮೃತಪಟ್ಟಿದ್ದು, ಒಟ್ಟಾರೆ ಸಾವಿನ ಸಂಖ್ಯೆ 47,033ಕ್ಕೇರಿದೆ. ಈವರೆಗೆ ಭಾರತದಲ್ಲಿ ರೋಗಪೀಡಿತರ ಪ್ರಮಾಣ 23,96,639 ದಾಟಿದೆ. ದೇಶದಲ್ಲಿ ಈಗ 6,53,622 ಆಕ್ಟಿವ್ ಕೇಸ್‍ಗಳಿದ್ದು, 16,95,985 ರೋಗಿಗಳು ಚೇತರಿಸಿಕೊಂಡು ಗುಣಮುಖರಾಗಿದ್ದಾರೆ. ಚೇತರಿಕೆ ಪ್ರಮಾಣ ಶೇ.70.77ರಷ್ಟು ಏರಿಕೆ ಮತ್ತು ಸಾವಿನ ಪ್ರಮಾಣ ಶೇ.1.99ರಷ್ಟು ಇಳಿದಿದೆ.
ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಇಂದು ಬೆಳಗ್ಗೆಯಿಂದಲೂ ದೇಶದ ಬಹುತೇಕ ರಾಜ್ಯಗಳಲ್ಲಿ ಹೊಸ ಸೋಂಕು ಮತ್ತು ಸಾವಿನ ಪ್ರಕರಣಗಳು ವರದಿಯಾಗುತ್ತಲೇ ಇವೆ.
ದೇಶದ ವಿವಿಧ ರಾಜ್ಯಗಳಲ್ಲಿ ನಿನ್ನೆ ಒಂದೇ ದಿನ ದಾಖಲೆ ಪ್ರಮಾಣದಲ್ಲಿ ಅಂದರೆ 8,30,391 ಜನರ ಸ್ಯಾಂಪಲ್‍ಗಳನ್ನು ಪರೀಕ್ಷಿಸಲಾಗಿದ್ದು, ಈವರೆಗೆ 2,68,45,688 ಜನರ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ತಿಳಿಸಿದೆ.