ಭಾರತಕ್ಕೆ ಆಧುನಿಕ ಶಿಕ್ಷಣ ನೀತಿಗಳು ಆರಂಭವಾದದ್ದು ಬ್ರಿಟೀಷ್ ಆಡಳಿತದಲ್ಲಿ. ಈ ಕಾಲದಲ್ಲಿ ನಮ್ಮ ಭಾರತೀಯರ ಗುರುಕುಲ ಶಿಕ್ಷಣವನ್ನು ಮೂಲೆಗೆ ತಳ್ಳಿ  ಲಾರ್ಡ್ ಮೆಕಾಲೆ ಹಾಕಿಕೊಟ್ಟ ನೀತಿಯ ಮೇಲೆ ಭಾರತದಲ್ಲಿ ಆಧುನಿಕ ಶಿಕ್ಷಣ ಆರಂಭವಾಯಿತು. ಇದಾದ ನಂತರ ಸಾಕಷ್ಟು ಬಾರಿ ಈ ಶಿಕ್ಷಣ ನೀತಿಯ ಮೇಲೆ ಕೆಲವು ಬಾರಿ ತಿದ್ದುಪಡಿಗಳನ್ನು ಕೂಡ ಮಾಡಲಾಗಿತ್ತು. ಇಂತ ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ಬದಲಾಯಿಸಿ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಮುಂದಾಗಿದೆ. ಈ ಹೊಸ ಶಿಕ್ಷಣ ನೀತಿಯ ಕುರಿತು ಶಿಕ್ಷಣ ಸಚಿವರು ಏನು ಹೇಳಿದ್ದಾರೆ ಗೊತ್ತಾ..? .

 


ಲಾರ್ಡ್ ಮೆಕಾಲೆ ತಳಹದಿಯ ಶಿಕ್ಷಣ ವ್ಯವಸ್ಥೆಗೆ ಇಂದು ನಾವು ವಿದಾಯ ಹೇಳುವ ಕ್ಷಣ ಸನ್ನಿಹಿತವಾಗಿದೆ  ರಾಷ್ಟ್ರೀಯ ಶಿಕ್ಷಣ ನೀತಿಯು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕವಾದ ಬದಲಾವಣೆಗೆ ನಾಂದಿ ಹಾಡಿದ್ದು, ಈ ನೀತಿ ಪ್ರೇರಿತವಾದ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳ ಜ್ಞಾನಾರ್ಜನೆ, ತರ್ಕಬದ್ಧ ಆಲೋಚನೆ ಮತ್ತು ಸಾಮಾಜಿಕವಾದ ನೈಪುಣ್ಯತೆಯನ್ನು ಪ್ರೇರೇಪಿಸುವಲ್ಲಿ ಹೊಸ ದಿಕ್ಕನ್ನು ಸೃಷ್ಟಿಸಲಿದೆ ಎಂದು ಬೆಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ನಡೆದ ಹೊಸ ಶಿಕ್ಷಣ ನೀತಿಯ ಕುರಿತಾದ ಸಂವಾದದಲ್ಲಿ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.




ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಪಠ್ಯಕ್ರಮ ಹಾಗೂ ಬೋಧನಾ ಕ್ರಮಗಳ ಕುರಿತಂತೆ ನೂತನ ಶಿಕ್ಷಣ ನೀತಿಯು ಪ್ರತಿಪಾದಿಸುವ ಅಂಶಗಳನ್ನು ಪ್ರಸ್ತಾಪಿಸಿದ ಸಚಿವರು, ಶಿಕ್ಷಣ ನೀತಿಯನ್ನು ಕರ್ನಾಟಕ ರಾಜ್ಯದ ಸಾಂಸ್ಕೃತಿಕ ಅವಶ್ಯಕತೆಗಳಿಗೆ ಅನುಗುಣವಾಗಿ ಅಳವಡಿಸಿಕೊಳ್ಳುವ ಪ್ರಯತ್ನಕ್ಕೆ ಈಗಾಗಲೇ ಚಾಲನೆ ನೀಡಲಾಗಿದ್ದು, ಇಡೀ ರಾಷ್ಟ್ರದಲ್ಲಿ ಹೊಸ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸುವ ಮೊದಲ ರಾಜ್ಯಗಳಲ್ಲಿ ಕರ್ನಾಟಕವು ಒಂದಾಗಲಿದೆ ಎಂದರು.



ಈ ಕುರಿತಂತೆ ರಾಜ್ಯಕ್ಕೆ ಸಂಬಂಧಿಸಿದಂತೆ ಕರಡು ನೀತಿಯನ್ನು ಈಗಾಗಲೇ ರೂಪಿಸಲಾಗಿದ್ದು, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆಗಳು ಜಂಟಿಯಾಗಿ ಹೊಸ ನೀತಿಯ ಅನುಷ್ಠಾನಕ್ಕೆ ಮುಂದಾಗಲಿವೆ ಎಂದು ಸುರೇಶ್ ಕುಮಾರ್ ಹೇಳಿದರು.




ಕೇಂದ್ರದ ಹೊಸ ಶಿಕ್ಷಣ ನೀತಿಯ ಹಲವು ಸಕಾರಾತ್ಮಕ ಅಂಶಗಳ ಬಗ್ಗೆ ಪ್ರಸ್ತಾಪಿಸಿದ ಅವರು, ಕ್ರೀಡಾ ಸಂಯೋಜಿತ ಶಿಕ್ಷಣ, ಕಥಾ ನಿರೂಪಣಾ ಕಲಿಕೆಯಂತಹ ವಿಶಿಷ್ಟ ಕಲಿಕಾ ಉಪಕ್ರಮಗಳಂತಹ ಅನುಭವ ಜನ್ಯವಾದ ಕಲಿಕೆಯನ್ನು ಪ್ರತಿಪಾದಿಸುವ ನೂತನ ಶಿಕ್ಷಣ ನೀತಿಗೆ ಸಂವಾದಿಯಾಗಿ ಕರ್ನಾಟಕ ಸರ್ಕಾರವು ಈಗಾಗಲೇ ಈ ನಿಟ್ಟಿನಲ್ಲಿ ಕೆಲವು ಪ್ರಯೋಗಗಳನ್ನು ಈಗಾಗಲೇ ಮಾಡಿದ್ದು, ನಮ್ಮಲ್ಲಿ ಅನುಷ್ಠಾನಗೊಂಡಿವೆ ಎಂದರು.

Find out more: