ಭಾರತ ಮತ್ತು ಚೀನಾ ನಡುವಿನ ಗಡಿ ಬಿಕ್ಕಟ್ಟನ್ನು ಶಮನಗೊಳಿಸುವ ಸಂಬಂಧ ಭಾರತೀಯ ವಿದೇಶಾಂಗ ವ್ಯವಹಾರ ಸಚಿವ ಎಸ್.ಜೈಶಂಕರ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಎರಡೂ ದೇಶಗಳು ನಡೆಸಿರುವ ಸುದೀರ್ಘ ಚರ್ಚೆಯ ನಂತರ ಸಂಧಾನಕ್ಕೆ ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ. ಒಟ್ಟು ಐದು ಅಂಶಗಳ ಒಪ್ಪಂದವು ಉಭಯ ದೇಶಗಳ ನಡುವೆ ನಡೆದಿದ್ದು, ಗಡಿಯಲ್ಲಿನ ಬಿಕ್ಕಟ್ಟು ಶಮನಗೊಳ್ಳುವ ನಿರೀಕ್ಷೆ ಇದೆ.
ಮೊನ್ನೆಯಷ್ಟೇ ಪೂರ್ವ ಲಡಾಖ್ನಲ್ಲಿ ಭಾರತ ಮತ್ತು ಚೀನಾ ಗಡಿಯಲ್ಲಿ ಗುಂಡಿನ ಚಕಮಕಿ ಶುರುವಾಗಿದ್ದು, ಆತಂಕ ಸೃಷ್ಟಿಯಾಗಿ ಕದನದ ಮುನ್ಸೂಚನೆಯಂತೆ ತೋರಿತ್ತು.
ಪ್ಯಾನ್‍ಗಾಂಗ್ ಸರೋವರ ಪ್ರದೇಶದಲ್ಲಿ ಉಭಯ ದೇಶಗಳ ನಡುವೆ ಗುಂಡಿನ ಸದ್ದು ಕೇಳಿಬಂದಿದ್ದವು. ಪೂರ್ವ ಲಡಾಖ್‍ನ ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್‍ಎಸಿ) ಭಾರತೀಯ ಸೇನೆ ಮತ್ತು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್‍ಎ) ನಡುವೆ ಚಕಮಕಿ ಶುರುವಾಗಿತ್ತು. 1975ರ ಬಳಿಕ ಮೊದಲ ವಾರ್ನಿಂಗ್ ಶಾಟ್ ಅಥವಾ ಗುಂಡಿನ ಚಕಮಕಿ ಇದಾಗಿತ್ತು.
ಇದರ ಬೆನ್ನಲ್ಲೇ ಎರಡೂ ದೇಶಗಳೀಗ ಶಾಂತಿಯ ಮಾತುಕತೆ ನಡೆಸಿವೆ. ಯುದ್ಧಾತಂಕವನ್ನು ನಿವಾಳಿಸುವಂತೆ ಎರಡೂ ರಾಷ್ಟ್ರಗಳು ಸಂಧಾನದ ಕಡೆಗೆ ಒಲವು ತೋರಿಸಿದೆ.
ಒಪ್ಪಂದದ ಐದು ಅಂಶಗಳು:
1 ಉಭಯ ದೇಶಗಳು ಶೀಘ್ರದಲ್ಲಿ ಸೇನೆಯ ಮುಖಾಮುಖಿಯನ್ನು ಬೇರ್ಪಡಿಸಬೇಕು, ಎರಡೂ ಸೇನೆಗಳ ಸರಿಯಾದ ಅಂತರವನ್ನು ಕಾಯ್ದುಕೊಳ್ಳಬೇಕು ಮತ್ತು ಉದ್ವಿಗ್ನತೆಯನ್ನು ಕಡಿಮೆಗೊಳಿಸಬೇಕು.
2. ಭಾರತ-ಚೀನಾ ಗಡಿ ಪ್ರಶ್ನೆಯ ಕುರಿತು ವಿಶೇಷ ಪ್ರತಿನಿಧಿ ಕಾರ್ಯವಿಧಾನದ ಮೂಲಕ ಮಾತುಕತೆ ಮತ್ತು ಸಂವಹನವನ್ನು ಮುಂದುವರೆಸಲು ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ. ಭಾರತ-ಚೀನಾ ಗಡಿ ವ್ಯವಹಾರಗಳ ಕುರಿತು ಸಮಾಲೋಚನೆ ಮತ್ತು ಸಮನ್ವಯಕ್ಕಾಗಿ ವರ್ಕಿಂಗ್ ಮೆಕ್ಯಾನಿಸಮ್ (Working Mechanism for Consultation and Coordination ಸಹ ತನ್ನ ಸಭೆಗಳನ್ನು ಮುಂದುವರೆಸಬೇಕು.
3. ಭಿನ್ನಾಭಿಪ್ರಾಯಗಳು ವಾಗ್ವಾದವಾಗಲು ಅವಕಾಶ ನೀಡದಿರುವುದು ಸೇರಿದಂತೆ ಎರಡೂ ದೇಶಗಳ ಸಂಬಂಧಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಎರಡೂ ಕಡೆಯವರು ಮಾರ್ಗದರ್ಶನ ಪಡೆಯಬೇಕು.
4. ಪರಿಸ್ಥಿತಿ ಸರಾಗವಾಗುತ್ತಿದ್ದಂತೆ, ಗಡಿ ಪ್ರದೇಶಗಳಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು ಮತ್ತು ಹೊಸ ನಂಬಿಕೆಯನ್ನು ಹೆಚ್ಚಿಸುವ ಕ್ರಮಗಳನ್ನು ತೀರ್ಮಾನಿಸಲು ಚೀನಾ ಮತ್ತು ಭಾರತ ಕಾರ್ಯವನ್ನು ತ್ವರಿತಗೊಳಿಸಬೇಕು.
5. . ಉಭಯ ದೇಶಗಳ ಗಡಿ ವ್ಯವಹಾರಗಳ ಬಗ್ಗೆ ಅಸ್ತಿತ್ವದಲ್ಲಿರುವ ಎಲ್ಲಾ ಒಪ್ಪಂದಗಳು ಮತ್ತು ನಿಯಮಾವಳಿಗಳನ್ನು ಎರಡೂ ಕಡೆಯವರು ಪಾಲಿಸಬೇಕು, ಗಡಿ ಪ್ರದೇಶಗಳಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಬೇಕು ಮತ್ತು ಪರಿಸ್ಥಿತಿಯನ್ನು ಉಲ್ಬಣಗೊಳಿಸುವ ಯಾವುದೇ ಕ್ರಮವನ್ನು ತಪ್ಪಿಸಬೇಕು.