ಭಾರತದಗಡಿಯಲ್ಲಿ ಚೀನಾ ಮಾಡಿದ ದಾಳಿಯಿಂದಾಗಿ ಭಾರತ ಚೀನಾದ ಸಾಕಷ್ಟು ಆಫ್ ಗಳನ್ನು ನಿಷೇದವನ್ನು ಮಾಡಿತ್ತು, ಅದರಂತೆ ಚೀನಾದ ವಸ್ತುಗಳನ್ನು ನಿಷೇಧಿಸುವ ಉದ್ದೇಶದಿಂದ ಭಾರತದ ವ್ಯಾಪಾರಿಗಳು ಚೀನಾ ಉತ್ಪನ್ನಗಳ ಮಾರಾಟವನ್ನು ನಿಲ್ಲಿಸಿದ್ದಾರೆ. ಇಂತಹ ವ್ಯಾಪಾರಿಗಳು ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಅವರು ಈ ಒಂದು ಕಂಪನಿಯೊಂದಿಗೆ ಮಾಡಿಕೊಂಡ ಒಪ್ಪಂದಕ್ಕೆ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. 



 

 

ಹೌದು ಕ್ರಿಕೆಟ್‌ನಿಂದ ನಿವೃತ್ತಿಯಾದ ನಂತರವೂ ವಿವಿಧ ಕಂಪನಿಗಳಿಗೆ ಪ್ರಚಾರ ರಾಯಭಾರಿಯಾಗಿ ಮುಂದುವರಿದಿರುವ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರ ಹೊಸ ಒಪ್ಪಂದವೊಂದು ವಿವಾದಕ್ಕೀಡಾಗಿದೆ. ಚೀನಾ ಹೂಡಿಕೆ ಇರುವ ಪೇಟಿಎಂ ಕಂಪನಿಯ 'ಪೇಟಿಎಂ ಫಸ್ಟ್ ಗೇಮ್ಸ್'ಗೆ ಪ್ರಚಾರ ರಾಯಭಾರಿಯಾಗಿ ಸಚಿನ್ ತೆಂಡುಲ್ಕರ್ ಇತ್ತೀಚೆಗೆ ಮಾಡಿಕೊಂಡಿರುವ ಒಪ್ಪಂದದ ಬಗ್ಗೆ ಅಖಿಲ ಭಾರತ ಟ್ರೇಡರ್ಸ್‌ ಕಾನ್ಫೆಡರೇಷನ್ (ಸಿಎಐಟಿ) ಆಕ್ರೋಶ ವ್ಯಕ್ತಪಡಿಸಿದೆ.






ಚೀನಾ ಜತೆಗಿನ ಭಾರತದ ಹಾಲಿ ಸಂಘರ್ಷದ ನಡುವೆ ಜನರ ಭಾವನೆಗಳಿಗೆ ಬೆಲೆ ನೀಡಿ ತಮ್ಮ ನಿರ್ಧಾರವನ್ನು ಮರುಪರಿಶೀಲಿಸಿ ಮತ್ತು ಈ ಒಪ್ಪಂದವನ್ನು ತಿರಸ್ಕರಿಸಿ ಎಂದು ಸಿಎಐಟಿ ಮನವಿ ಸಲ್ಲಿಸಿದೆ. 'ದೇಶವನ್ನು ಅತಿಯಾಗಿ ಪ್ರೀತಿಸುವ ನಿಮ್ಮಂಥ ಈ ಮಣ್ಣಿನ ಮಗ ಮತ್ತು ಅಪಾರವಾದ ದೇಶಭಕ್ತಿ ಹೊಂದಿರುವ ನೀವು, ಚೀನಾದ ಹೂಡಿಕೆ ಇರುವ ಕಂಪನಿ ಜತೆಗೆ ಪ್ರಚಾರ ರಾಯಭಾರಿಯಾಗಿ ಒಪ್ಪಂದವನ್ನು ಒಪ್ಪಿಕೊಂಡಿರುವ ಆಘಾತ ಮತ್ತು ಅಸಹ್ಯ ತಂದಿದೆ. ನೀವು ಇಂಥ ಒಪ್ಪಂದವನ್ನು ಒಪ್ಪಿಕೊಳ್ಳುವ ವೇಳೆ ಹಣದ ವಿಚಾರ ಪರಿಗಣನೆಗೆ ಬಂದಿರದು ಎಂದು ಭಾವಿಸುತ್ತೇವೆ. ಹಾಗಾದರೆ ದೇಶದ ಜನರ ಭಾವನೆಗಳ ವಿರುದ್ಧ ಹೋಗಲು ನಿಮ್ಮನ್ನು ಪ್ರೇರೇಪಿಸಿರುವುದು ಯಾವುದು? ನಾವಿದನ್ನು ಅರ್ಥ ಮಾಡಿಕೊಳ್ಳಲು ವಿಲರಾಗಿದ್ದೇವೆ' ಎಂದು ಸಚಿನ್ ಬರೆದಿರುವ ಪತ್ರದಲ್ಲಿ ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೆಲ್‌ವಾಲ್ ಹೇಳಿದ್ದಾರೆ.




 

ಪೇಟಿಎಂ ಕಂಪನಿಯಲ್ಲಿ ಚೀನಾ ಮೂಲದ ಅಲಿಬಾಬಾ ಕಂಪನಿಯ ಭಾರಿ ಹೂಡಿಕೆ ಇದ್ದು, ಇತ್ತೀಚೆಗೆ ಪೇಟಿಎಂ ಫಸ್ಟ್ ಗೇಮ್ಸ್ ಹೆಸರಿನಲ್ಲಿ ಹೊಸ ಗೇಮಿಂಗ್ ಆಯಪ್ ಆರಂಭಿಸಲಾಗಿದೆ. ಈ ಒಪ್ಪಂದವನ್ನು ತಿರಸ್ಕರಿಸುವ ಮೂಲಕ ಚೀನಾಗೆ ಕಟುವಾದ ಸಂದೇಶವನ್ನು ರವಾನಿಸಲು ದೇಶಕ್ಕೆ ನೆರವಾಗಿ ಎಂದೂ ಸಿಎಐಟಿ ಮನವಿ ಸಲ್ಲಿಸಿದೆ. ಲಡಾಖ್ ಗಡಿಯ ಗಲ್ವಾನ್ ಕಣಿವೆಯಲ್ಲಿ ಭಾರತದ 20 ಯೋಧರು ಹುತಾತ್ಮರಾದ ಬಳಿಕ ಸಿಎಐಟಿ, ಚೀನಾ ವಿರುದ್ಧ ದೊಡ್ಡ ಅಭಿಯಾನವನ್ನೇ ನಡೆಸುತ್ತಿದ್ದು, ಕಳೆದ ಜೂನ್‌ನಲ್ಲಿ ಚೀನಾದ ಸುಮಾರು 450 ಬಗೆಯ ಉತ್ಪನ್ನಗಳನ್ನು ಬಹಿಷ್ಕರಿಸಲು ಕರೆ ನೀಡಿತ್ತು. ಜತೆಗೆ ಸೆಲೆಬ್ರಿಟಿಗಳು ಚೀನಾ ಉತ್ಪನ್ನಗಳನ್ನು ಪ್ರಚಾರ ಮಾಡುವುದನ್ನು ನಿಲ್ಲಿಸಬೇಕು ಎಂದೂ ಮನವಿ ಮಾಡಿಕೊಂಡಿತ್ತು.

Find out more: