
ಕೊರೋನಾದಿಂದಾಗಿ ಈ ಬಾರಿ ಅದೆಷ್ಟೋ ಸರ್ಕಾರಿ ಕಾರ್ಯಕ್ರಮಗಳಿಗೆ ಪ್ರಧಾನಿಗಳು ಆನ್ ಲೈನ್ ಮೂಲಕವೇ ಚಾಲನೆಯನ್ನು ನೀಡಿದರು ಅದೇ ರೀತಿ ಕೊರೋನಾ ಸಂಕಷ್ಟದಲ್ಲಿ ಅನೇಕ ಚರ್ಚೆಗಳೂ ಕೂಡ ಆನ್ ಲೈನ್ ಮೂಲಕವೇ ಯಶಸ್ವಿಯಾಗಿ ನಡೆಯಿತು, ಹೀಗೆ ಅನೇಕ ಕಾರ್ಯಕ್ರಮಗಳು ಈ ಬಾರಿ ಆನ್ ಲೈನ್(ಇಂಟರ್ನೆಟ್) ಮೇಲೆ ಅವಲಂಭಿತವಾಗಿದ್ದವು. ಅದೇ ರೀತಿ ಅನ್ ಲೈನ್ ಮೂಲಕವೇ ಹಲವು ದಿನಗಳಿಂದ ನ್ಯಾಯಾಲಯಗಳಲ್ಲಿ ಇತ್ಯರ್ಥವಾಗದೇ ಇದ್ದ ಪ್ರಕರಣಗಳೂ ಕೂಡ ಬಗೆಹರಿದಿದೆ..
ಹೌದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಸ್‌ಎಲ್‌ಎಸ್‌ಎ) ವತಿಯಿಂದ ಶನಿವಾರ ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲೂಕು ನ್ಯಾಯಾಲಯಗಳಲ್ಲಿ ಆಯೋಜಿಸಲಾಗಿದ್ದ ಮೆಗಾ ಇ-ಲೋಕ್ ಅದಾಲತ್‌ನಲ್ಲಿ 1 ಲಕ್ಷಕ್ಕೂ ಅಧಿಕ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ.
ನ್ಯಾಯಾಲಯಗಳಲ್ಲಿ ಬಾಕಿ ಇದ್ದ 1,07,337 ಪ್ರಕರಣಗಳು, 6,015 ವ್ಯಾಜ್ಯಪೂರ್ವ ಪ್ರಕರಣಗಳು ಹಾಗೂ ಹೈಕೋರ್ಟ್‌ನಲ್ಲಿ ಬಾಕಿ ಇದ್ದ 925 ಪ್ರಕರಣಗಳು ಸೇರಿ ಒಟ್ಟು 1,14,277 ಸಿವಿಲ್ ಹಾಗೂ ರಾಜಿಯಾಗಬಹುದಾದ ಕ್ರಿಮಿನಲ್ ಪ್ರಕಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ. ಇ-ಲೋಕ್ ಅದಾಲತ್‌ನಲ್ಲಿ ಕಕ್ಷಿದಾರರಿಗೆ 353 ಕೋಟಿಗೂ ಅಧಿಕ ಮೊತ್ತದ ಅಂತಿಮ ಪರಿಹಾರ ಕೊಡಸಲಾಗಿದೆ ಎಂದು ಕೆಎಸ್‌ಎಲ್‌ಎಸ್‌ಎ ಸದಸ್ಯ ಕಾರ್ಯದರ್ಶಿ ಎಚ್. ಶಶಿಧರ ಶೆಟ್ಟಿ ತಿಳಿಸಿದ್ದಾರೆ.
ಶನಿವಾರ ಬೆಳಗ್ಗೆ ಮೆಗಾ ಇ-ಲೋಕ್ ಅದಾಲತ್‌ನ ಇ-ಉದ್ಘಾಟನೆ ನೆರವೇರಿಸಿ ಮಾತನಾಡಿದ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆದ ಸುಪ್ರೀಂಕೋರ್ಟ್ ಹಿರಿಯ ನ್ಯಾಯಮೂರ್ತಿ ಎನ್.ವಿ. ರಮಣ, ಕೋವಿಡ್-19 ಹಿನ್ನೆಲೆಯಲ್ಲಿ ಸೀಮಿತ ಅವಧಿಯ ಕೋರ್ಟ್ ಕಲಾಪ ನಡೆಸಲಾಗುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ನ್ಯಾಯದಾನ ಪ್ರಕ್ರಿಯೆಯನ್ನು ನಿರಂತರವಾಗಿಸಲು ಇ-ಲೋಕ್ ಅದಾಲತ್ ಪರಿಣಾಮಕಾರಿ ವ್ಯವಸ್ಥೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಮಾತನಾಡಿ, ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವರ್ಚುಯಲ್ ಕಲಾಪಗಳನ್ನು ನಡೆಸಲಾಗುತ್ತಿದೆ. ಇದು ಪರಿಣಾಮಕಾರಿ ಮತ್ತು ಯಶಸ್ಸು ಕಂಡ ಹಿನ್ನೆಲೆಯಲ್ಲಿ ಯಾರೊಬ್ಬರೂ ನ್ಯಾಯದಾನದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಲೋಕ್ ಅದಾಲತ್‌ಗೂ ವಿಡಿಯೋ ಕಾನ್ಫರೆನ್ಸ್ ವಿಧಾನ ಅಳವಡಿಸಲು ನಿರ್ಧರಿಸಲಾಯಿತು ಎಂದು ತಿಳಿಸಿದರು.