ಪ್ರತಿಪಕ್ಷಗಳ ತೀವ್ರ ವಿರೋಧ ಮತ್ತು ಗದ್ದಲದ ನಡುವೆ ಕೃಷಿ ಸಂಬಂಧಿತ ಮೂರು ಮಸೂದೆಗಳ ಪೈಕಿ ಎರಡು ಮಸೂದೆಗಳನ್ನು ರಾಜ್ಯಸಭೆಯಲ್ಲಿ ಧ್ವನಿ ಮತದ ಮೂಲಕ ಭಾನುವಾರ ಅಂಗೀಕರಿಸಲಾಯಿತು. ಕೇಂದ್ರ ಸರ್ಕಾರವು ರಾಜ್ಯಸಭೆಯಲ್ಲಿ ಕೃಷಿ ಸಂಬಂಧಿತ ಮಸೂದೆ ಅಂಗೀಕರಿಸುವಷ್ಟೇ ಸಂಖ್ಯಾಬಲವನ್ನು ಹೊಂದಿಲ್ಲ. ಹೀಗಿದ್ದರೂ ಎಲ್ಲ ನಿಯಮಗಳನ್ನು ಉಲ್ಲಂಘಿಸುವ ಮೂಲಕ ಮಸೂದೆಗಳನ್ನು ಅಂಗೀಕರಿಸಲಾಗಿದೆ ಎಂದು ವಿರೋಧ ಪಕ್ಷಗಳು ದೂಷಿಸುತ್ತಿವೆ.







"ಇದು ಇಲ್ಲಿಗೆ ಅಂತ್ಯವಾಗುವುದಿಲ್ಲ, ಕೇಂದ್ರ ಸರ್ಕಾರವು ಪ್ರಜಾಪ್ರಭುತ್ವದ ಕಗ್ಗೊಲೆ" ಮಾಡಿದೆ ಎಂದು ತೃಣಮೂಲ ಕಾಂಗ್ರೆಸ್ ಸಂಸದ ದೆರೆಕ್ ಒಬ್ರಿಯನ್ ಕಿಡಿ ಕಾರಿದ್ದಾರೆ. ಇದರ ಬೆನ್ನಲ್ಲೇ ರಾಜ್ಯಸಭೆಯಲ್ಲಿ ಸಂಸದರು ಎದ್ದು ನಿಂತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುವ ಮೂಲದ ಪ್ರತಿಭಟನೆ ನಡೆಸಿದವು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ರಾಜ್ಯಸಭಾ ಕಲಾಪವನ್ನು ಸೋಮವಾರ ಮಧ್ಯಾಹ್ನ 3 ಗಂಟೆಗೆ ಮುಂದೂಡಿಕೆ ಮಾಡಲಾಯಿತು.






 



"ಅವರು ತೀವ್ರ ವಂಚನೆ ಮಾಡಿದ್ದು, ಸಂಸತ್ತಿನ ಎಲ್ಲ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಇದೊಂದು ಕೆಟ್ಟ ಇತಿಹಾಸವೇ ಆಗಲಿದೆ. ರಾಜ್ಯಸಭಾ ಟಿವಿಯಲ್ಲಿನ ದೃಶ್ಯಾವಳಿಗಳಿಗೆ ಕತ್ತರಿ ಹಾಕಲಾಗಿದ್ದು, ಸರ್ಕಾರದ ಪರವಾಗಿರುವ ದೃಶ್ಯವನ್ನಷ್ಟೇ ಪ್ರಸಾರ ಮಾಡಲಾಗಿದೆ. ತಮ್ಮ ಪ್ರಚಾರಕ್ಕೆ ರಾಜ್ಯಸಭಾ ಟಿವಿಯನ್ನು ಬಳಸಿಕೊಳ್ಳುವುದು ಬೇಕಾಗಿಲ್ಲ, ನಮಗೆ ಸಾಕ್ಷ್ಯ ಬೇಕು" ಎಂದು ಟಿಎಂಸಿ ರಾಜ್ಯಸಭಾ ಸದಸ್ಯ ದೆರೆಕ್ ಒಬ್ರಿಯನ್ ಆಗ್ರಹಿಸಿದ್ದಾರೆ







ಕೃಷಿ ಸಂಬಂಧಿತ ಮಸೂದೆಗಳನ್ನು ಜಾರಿಗೊಳಿಸುವಲ್ಲಿ ಕೇಂದ್ರ ಸರ್ಕಾರವು ಏಕಪಕ್ಷೀಯ ತೀರ್ಮಾನವನ್ನು ತೆಗೆದುಕೊಳ್ಳುತ್ತಿದೆ. ಬಹುಮತ ಇಲ್ಲದೇ ಅಂಗೀಕರಿಸಿದ ಮಸೂದೆಗಳನ್ನು ಜಾರಿಗೊಳಿಸಬಾರದು. ಬದಲಿಗೆ ಮಸೂದೆ ಜಾರಿಗೂ ಮೊದಲು ಆಯ್ಕೆ ಸಮಿತಿಯೊಂದರನ್ನು ರಚಿಸಬೇಕು. ತದನಂತರ ಆಯ್ಕೆ ಸಮಿತಿ ಶಿಫಾರಸ್ಸಿನ ಮೇಲೆ ಮತ್ತೊಂದು ಸುತ್ತಿನ ಚರ್ಚೆ ನಡೆಸುವುದಕ್ಕೆ ಅವಕಾಶ ಕಲ್ಪಿಸಿ ಕೊಡಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸುತ್ತಿವೆ.







ರಾಜ್ಯಸಭೆಯಲ್ಲಿ ಮೊದಲು ಕೃಷಿ ಸಂಬಂಧಿತ ಮಸೂದೆಗಳನ್ನು ಧ್ವನಿ ಮತದ ಮೂಲಕ ಮಂಡಿಸಲು ಉಪಾಧ್ಯಕ್ಷರು ಹೇಳಿದ್ದರಿಂದ ಸಮಸ್ಯೆ ಉಲ್ಬಣವಾಯಿತು. ವಿರೋಧ ಪಕ್ಷದ ನಾಯಕರು ಕಲಾಪದಲ್ಲಿ ಹಾಜರಾಗಿದ್ದ ಹಿನ್ನೆಲೆ ಭೌತಿಕ ಮತದಾನ ನಡೆಸುವಂತೆ ಪಟ್ಟು ಹಿಡಿದರು. ಈ ಮನವಿ ತಿರಸ್ಕರಿಸುತ್ತಿದ್ದಂತೆ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಸದನದ ಬಾವಿಗಿಳಿದು ಸಂಸದರು ಪ್ರತಿಭಟನೆ ನಡೆಸಿದ್ದು, ಕೆಲವರು ಉಪಾಧ್ಯಕ್ಷರ ಮುಂದಿದ್ದ ಪುಸ್ತಕವನ್ನು ಹರಿದು, ಮೈಕ್ರೋಫೋನ್ ಕಳೆದುಕೊಳ್ಳುವುದಕ್ಕೆ ಪ್ರಯತ್ನಿಸಿದರು.







ಕೃಷಿ ಸಂಬಂಧಿತ ಮಸೂದೆ ಅಂಗೀಕಾರಗೊಳ್ಳುತ್ತಿದ್ದಂತೆ ರಾಜ್ಯಸಭೆಗೆ ರಾಜ್ಯಸಭೆಯೇ ರಣರಂಗವಾಯಿತು. ಕೆಲವು ಸಂಸದರು ತಮ್ಮ ಮೊಬೈಲ್ ಗಳಲ್ಲಿ ಇದನ್ನು ಸೆರೆ ಹಿಡಿಯುವುದರಲ್ಲೇ ಬ್ಯುಸಿ ಆಗಿದ್ದರು. ಸಂಸತ್ತಿನಲ್ಲಿ ಮಹಾಭಾರತ ಭುಗಿಲೆದ್ದಿತು ಎಂದು ಕಾಂಗ್ರೆಸ್ ಹಿರಿಯ ಸಂಸದ ಗುಲಾಮ್ ನಬಿ ಆಜಾದ್ ಕಿಡಿ ಕಾರಿದ್ದಾರೆ..

Find out more: