ಕೊರೋನಾ ವೈರಸ್ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ , ಪ್ರತಿನಿತ್ಯ ಸಾವಿರಾರು ಕೊರೋನಾ ಕೇಸ್ ಗಳು ದಾಖಲಾಗುತ್ತಿದೆ, ಇದರ ಕುರಿತು ಬೆಂಗಳೂರು ಮಹಾನಗರ ಪಾಲಿಕೆ ಎಷ್ಟೇ ಎಚ್ಚರಿಕೆಯನ್ನು ವಹಿಸಿದರೂ ಕೂಡ ಯಾವುದೇ ಪ್ರಯೋಜನವಾಗದೆ ವ್ಯಾಪ್ತಿಯನ್ನು ಮೀರಿ ಬೆಳೆಯುತ್ತಿದೆ. ಈ ಕುರಿತು ಸ್ವತಹ ಪ್ರಧಾನಮಂತ್ರಿಯವರೇ  ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಕೊರೋನಾ ಕುರಿತಾಗಿ ಕೆಲವೊಂದು  ಸೂಚನೆಯನ್ನು ನೀಡಿದ್ದಾರೆ.






ಹೌದು ಬೆಂಗಳೂರು ನಗರದಲ್ಲಿರುವ ಕೊರೊನಾ ಸೋಂಕಿತರ ಪ್ರಮಾಣವನ್ನು ಶೇ. 5ರಷ್ಟಕ್ಕೆ ಇಳಿಸುವಂತೆ ಪ್ರಧಾನಮಂತ್ರಿ ನರೇಂದ್ರಮೋದಿಯವರು ಸೂಚನೆ ನೀಡಿದ್ದು ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ  ಕೊರೊನಾ ಸೋಂಕಿತರ ತಪಾಸಣೆಯನ್ನು ದ್ವಿಗುಣಗೊಳಿಸುವ ಮೂಲಕ ಸೋಂಕಿತರ ಸಂಖ್ಯೆಯನ್ನು ಕಡಿಮೆ ಮಾಡಲು ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದು ಸುದ್ದಿಗಾರರೊಂದಿಗೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್‍ಪ್ರಸಾದ್ ತಿಳಿಸಿದರು.






ಪ್ರಸ್ತುತ ನಗರದಲ್ಲಿ ಸೋಂಕಿತರ ಪ್ರಮಾಣ ಶೇ.13.48ರಷ್ಟಿದೆ. ಇದನ್ನು 5ಕ್ಕೆ ಇಳಿಸಬೇಕಾಗಿದೆ. ಈಗ ಪ್ರತಿನಿತ್ಯ 20 ಸಾವಿರ ಮಂದಿಗೆ ತಪಾಸಣೆ ನಡೆಸಲಾಗುತ್ತಿದೆ. ಅದನ್ನು 40 ಸಾವಿರಕ್ಕೆ ಹೆಚ್ಚಳ ಮಾಡಲು ತೀರ್ಮಾನಿಸಿದ್ದೇವೆ ಎಂದು ಮಂಜುನಾಥ್ ಪ್ರಸಾದ್ ಹೇಳಿದರು. ಸೋಂಕಿತರ ಜತೆ ಪ್ರಾಥಮಿಕ ಸಂಪರ್ಕ ಹೊಂದಿರುವವರನ್ನು ಕೂಡ ತಪಾಸಣೆಗೊಳಪಡಿಸಲಾಗುವುದು ಐಎಲ್‍ಐ ಮತ್ತು ಸಾರಿ ರೋಗ ಲಕ್ಷಣ ಇರುವವರು, ಇತರೆ ಕಾಯಿಲೆ ಇರುವವರನ್ನು ಕೂಡಾ ತಪಾಸಣೆ ನಡೆಸಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.




ತಪಾಸಣೆ ತೀವ್ರಗೊಳಿಸಲು ಅಗತ್ಯ ಸಿಬ್ಬಂದಿ, ಕಿಟ್‍ಗಳ ಹೆಚ್ಚಳ ಮತ್ತು ಸಂಪನ್ಮೂಲ ಕ್ರೂಢೀಕರಣದತ್ತ ಗಮನ ಹರಿಸಿದ್ದೇವೆ ಎಂದು ಹೇಳಿದರು. ಕಂಟೈನ್‍ಮೆಂಟ್ ಝೋನ್‍ಗಳಲ್ಲಿ ಪ್ರತಿಯೊಬ್ಬರನ್ನೂ ತಪಾಸಣೆ ಮಾಡುತ್ತೇವೆ. ಒಂದು ಮನೆಯಲ್ಲಿ ಒಬ್ಬ ಸೋಂಕಿತರಿದ್ದರೆ ಆ ಮನೆಯ ಎಲ್ಲಾ ಸದಸ್ಯರನ್ನು ತಪಾಸಣೆ ಮಾಡಲಾಗುವುದು. ಹಿರಿಯರನ್ನು ತಪಾಸಣೆ ಮಾಡಲಾಗುವುದು ಯಾರಿಗಾದರೂ ಸೋಂಕು ಲಕ್ಷಣ ಕಂಡು ಬಂದಲ್ಲಿ ತಕ್ಷಣ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ ಸೋಂಕಿತರ ಪ್ರಮಾಣ ಕಡಿಮೆ ಮಾಡುತ್ತೇವೆ ಎಂದರು.







ಪ್ರಧಾನಿ ಕೊರೊನಾ ಸೋಂಕಿನಿಂದ ಸಾವನ್ನಪ್ಪುವರ ಸಂಖ್ಯೆ ಶೇ.1ಕ್ಕೆ ಇಳಿಸುವಂತೆ ಸೂಚಿಸಿದ್ದಾರೆ. ಪ್ರಸ್ತುತ ನಗರದಲ್ಲಿ ಸೋಂಕಿನಿಂದ ಸಾಯುವವರ ಸಂಖ್ಯೆ ಶೇ.1.4ರಷ್ಟಿದೆ. ಮೈಕ್ರೋ ಮತ್ತು ಮ್ಯಾಕ್ರೋ ಕಂಟೈನ್‍ಮೆಂಟ್ ಝೋನ್‍ಗಳಲ್ಲೂ ಗಮನಹರಿಸಿದ್ದೇವೆ, ಇಲ್ಲೂ ಕೂಡ ಅಗತ್ಯ ಬಿದ್ದರೆ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲಾಗುವುದು ಯಾವುದೇ ಕಾರಣಕ್ಕೂ ನಗರದಲ್ಲಿ ಸೀಲ್‍ಡೌನ್ ಮಾಡುವುದಿಲ್ಲ ಮತ್ತು ಸೋಂಕಿತರ ಮನೆಗೆ ನೋಟಿಸ್ ಅಂಟಿಸುವ ಕೆಲಸ ಮಾಡುವುದಿಲ್ಲ ಎಂದು ಮಂಜುನಾಥ್ ಪ್ರಸಾದ್ ಸ್ಪಷ್ಪಪಡಿಸಿದರು.







ಹೋಮ್‍ಐಸೋಲೇಷನ್‍ನಲ್ಲಿರುವವರಿಗೂ ಪುನಃ ತಪಾಸಣೆ ನಡೆಸಿ ಸೋಂಕು ಕಂಡು ಬಂದರೆ ಅಂತಹವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುವುದು. ಒಟ್ಟಾರೆ ನಗರದಲ್ಲಿ ಸೋಂಕಿತರ ಸಂಖ್ಯೆ ಕಡಿಮೆ ಮಾಡುವುದೇ ನಮ್ಮ ಉದ್ದೇಶ ಎಂದು ತಿಳಿಸಿದರು.






ನಿರ್ಲಕ್ಷ್ಯ ವಹಿಸುವ ಆಸ್ಪತ್ರೆಗಳ ವಿರುದ್ಧ ಎಫ್‍ಐಆರ್: ಕೊರೊನಾ ಸೋಂಕಿತರಿಗೆ ಮೀಸಲಿಟ್ಟಿರುವ ಬೆಡ್‍ಗಳನ್ನು ಕೊಡಲು ನಿರಾಕರಿಸಿರುವ ಹಾಗೂ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿರುವ ಸುಮಾರು 7 ಖಾಸಗಿ ಆಸ್ಪತ್ರೆಗಳ ವಿರುದ್ಧ ಎನ್‍ಡಿಆರ್‍ಎಫ್ ಕಾಯ್ದೆಯಡಿ ಎಫ್‍ಐಆರ್ ದಾಖಲಿಸಲಾಗುವುದು ಎಂದು ಆಯುಕ್ತರು ಇದೇ ಸಂದರ್ಭದಲ್ಲಿ ತಿಳಿಸಿದರು.





ಮಾರ್ಗಸೂಚಿ ಉಲ್ಲಂಘಿಸಿದ 36 ಆಸ್ಪತ್ರೆಗಳಿಗೆ ನೋಟಿಸ್ ನೀಡಲಾಗಿದೆ, ಅದರಲ್ಲಿ 7 ಆಸ್ಪತ್ರೆಗಳ ವಿರುದ್ಧ ಎಫ್‍ಐಆರ್ ದಾಖಲಿಸಲಾಗುವುದು ಎಂದು ಮಂಜುನಾಥ್‍ಪ್ರಸಾದ್ ಹೇಳಿದರು.

Find out more: