ಸರ್ಕಾರಗಳು ಜಾರಿಗೆ ತಂದಿರುವ ಭೂ ಸುಧಾರಣೆ ಮತ್ತು ಎಪಿಎಂಸಿ ಕಾಯ್ದೆಗಳನ್ನು ವಿರೋಧಿಸಿ ನಾಡಿನಾಧ್ಯಂತ ಸಾಕಷ್ಟು ಹೋರಾಟಗಳು ನಡೆಯುತ್ತಲೇ ಇರುವುದರಿಂದ ರಾಜ್ಯಸರ್ಕಾರ ಈ ಕಾಯ್ದೆಗಳಿಗೆ ವಿಧಾನ ಪರಿಷತ್ ನಲ್ಲಿ ಬಹುಮತ ಸಾಬೀತು ಮಾಡುವಂತಹ ಸಂದರ್ಭದಲ್ಲಿ ಬಹುಮತ ಸಿಗದೆ ಈ ಕಾಯ್ದೆಗಳು ಬಿದ್ದು ಹೋದವು. ಆದರೆ ರಾಜ್ಯ ಸರ್ಕಾರ ಮತ್ತೊಂದು ವಿಧಾನದ ಮೂಲಕ ಈ ಕಾಯ್ದೆಯನ್ನು ಜಾರಿಗೆ ತರಲಾಗಿದೆ.
ಹೌದು ವಿಪಕ್ಷಗಳು ಮತ್ತು ರೈತರ ವಿರೋಧದ ನಡುವೆಯೂ ರಾಜ್ಯ ಸರಕಾರ ಭೂ ಸುಧಾರಣೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ಹಾಗೂ ಕೈಗಾರಿಕಾ ವ್ಯಾಜ್ಯಗಳ (ಕಾರ್ಮಿಕ ಕಾಯ್ದೆ) ತಿದ್ದುಪಡಿ ಕಾಯ್ದೆಯ ಮಸೂದೆಗಳಿಗೆ ವಿಧಾನಸಭೆಯಲ್ಲಿ ಒಪ್ಪಿಗೆ ಪಡೆದುಕೊಂಡಿತ್ತು. ಆದರೆ ಪರಿಷತ್‌ನಲ್ಲಿ ಬಹುಮತವಿಲ್ಲದ ಕಾರಣ ಈ ಮಸೂದೆಗಳು ಬಿದ್ದು ಹೋಗಿದ್ದವು. ಹೀಗಾಗಿ ಮತ್ತೆ ರಾಜ್ಯ ಸರಕಾರ ಅಧ್ಯಾದೇಶ ಮೂಲಕ ಈ ತಿದ್ದುಪಡಿ ಮಸೂದೆಗಳನ್ನು ಜಾರಿಗೆ ತಂದಿದೆ. ಗುರುವಾರ ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ.
ಬಿದ್ದು ಹೋಗಿದ್ದೇಕೆ?
ಅಧಿವೇಶನದ ಕೊನೆಯ ದಿನ ವಿಧಾನ ಪರಿಷತ್ತಿನಲ್ಲಿ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯ ಬಗ್ಗೆ ಚರ್ಚೆಯಾಗಿದ್ದರೂ ಸಭಾಪತಿಗಳು ಕಲಾಪವನ್ನು ಅನಿರ್ದಿ ಷ್ಟಾವಧಿಗೆ ಮುಂದೂಡಿದ್ದರಿಂದ ತಿದ್ದುಪಡಿ ಮಸೂದೆ ಅಂಗೀಕಾರವಾಗದೆ ಬಾಕಿ ಉಳಿದುಕೊಂಡಿತ್ತು. ಎಪಿಎಂಸಿ ಮಸೂದೆಯನ್ನು ಪರಿಷತ್ತಿನಲ್ಲಿ ಮಂಡನೆ ಮಾಡಲು ಸರಕಾರಕ್ಕೆ ಸಮಯದ ಅಭಾವವಿತ್ತು. ಇನ್ನು ಕೈಗಾರಿಕಾ ವ್ಯಾಜ್ಯಗಳ ತಿದ್ದುಪಡಿ ಮಸೂದೆ ಪರಿಷತ್ತಿನಲ್ಲಿ ಮಂಡನೆಯಾಗಿ ಚರ್ಚೆಯಾಗಿದ್ದರೂ ಆಡಳಿತ ಪಕ್ಷದ ಸದಸ್ಯರ ಸಂಖ್ಯಾಬಲದ ಕೊರತೆಯಿಂದ ಮಸೂದೆ ತಿದ್ದುಪಡಿ ವಿಫಲವಾಗಿತ್ತು.
ರಾಜ್ಯ ಸರಕಾರ ಮೂರು ಮಸೂದೆಗಳನ್ನು ಮತ್ತೆ ಅಧ್ಯಾದೇಶದ ಮೂಲಕ ಜಾರಿಗೆ ತರಲು ನಿರ್ಧರಿಸಿ ಅಧ್ಯಾದೇಶ ಹೊರಡಿಸಲು ಸಂಪುಟದಲ್ಲಿ ನಿರ್ಧರಿಸಿದೆ. ಈಗಾಗಲೇ ಹೊರಡಿಸಿರುವ ಅಧ್ಯಾದೇಶದ ಅವಧಿ ರದ್ದುಪಡಿಸಿ ಮಸೂದೆ ಮಂಡಿಸಿದ್ದರಿಂದ ಹೊಸದಾಗಿ ಅಧ್ಯಾದೇಶ ಹೊರಡಿಸಿ ಮತ್ತೆ ಆರು ತಿಂಗಳಲ್ಲಿ ವಿಧಾನ ಮಂಡಲದಲ್ಲಿ ಪಾಸ್ ಮಾಡಿಕೊಳ್ಳಲು ಸರಕಾರ ನಿರ್ಧಾರ ಮಾಡಿದೆ ಎಂದು ತಿಳಿದು ಬಂದಿದೆ.
ಗುರುವಾರದ ಸಚಿವ ಸಂಪುಟ ಸಭೆಗೆ ಹಲವು ಸಚಿವರು ಗೈರಾಗಿದ್ದರು. ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಜೆ.ಸಿ. ಮಾಧುಸ್ವಾಮಿ, ಶಶಿಕಲಾ ಜೊಲ್ಲೆ, ಕೆ. ಗೋಪಾಲಯ್ಯ, ಪ್ರಭು ಚೌವ್ಹಾಣ್‌ಗೆ ಕೊರೊನಾ ಪಾಸಿಟಿವ್ ಇರುವ ಕಾರಣ ಸಂಪುಟ ಸಭೆಗೆ ಬಂದಿರಲಿಲ್ಲ. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಬಸವರಾಜ ಬೊಮ್ಮಾಯಿ, ಆನಂದ್ ಸಿಂಗ್, ಆರ್. ಅಶೋಕ್, ಶ್ರೀಮಂತ ಪಾಟೀಲ್, ಸಿ.ಸಿ. ಪಾಟೀಲ್ ಕೂಡ ಗೈರು ಹಾಜರಾಗಿದ್ದರು.