ದುಬೈ: ಕನ್ನಡಿಗ ಮಾಯಾಂಕ್ ಅಗರವಾಲ್ ಇದೀಗ ಟೀಂ ಇಂಡಿಯಾದಲ್ಲಿ ದ್ವೀಶತಕಗಳ ಸರದಾರನಾಗಿ ಮಿಂಚುತ್ತಿದ್ದಾರೆ. ಅದರ ಜೊತೆಗೆ ಡೆಡ್ಲಿ ಬೌನ್ಸರ್ ಮೊಹಮ್ಮದ್ ಶಮಿ ಸಹ. ಇದೀಗ ಇಬ್ಬರು ಜೀವನಶ್ರೇಷ್ಠ ಸಾಧನೆ ಮಾಡಿದ್ದು ಚೇಸಿಂಗ್ ಕಿಂಗ್ ವಿರಾಟ್ ಮಾತ್ರ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. ಏನಪ್ಪಾ ಇದು ಅಂತ ಕನ್ಫ್ಯೂಸ್ ಆಗಬೇಡಿ. ಇಲ್ಲಿದೆ ನೋಡಿ ಉತ್ತರ.
ಇತ್ತೀಚೆಗಷ್ಟೇ ನಡೆದ ಇಂದೋರ್ ಟೆಸ್ಟ್ ಗೆಲುವಿನಲ್ಲಿ ಮಹತ್ವ ಪಾತ್ರ ನಿರ್ವಹಿಸಿದ ಆರಂಭಿಕ ಮಯಾಂಕ್ ಅಗರ್ವಾಲ್ ಮತ್ತು ವೇಗದ ಬೌಲರ್ ಮೊಹಮದ್ ಶಮಿ ಐಸಿಸಿ ಟೆಸ್ಟ್ ರ್ಯಾಂಕಿಂಗ್ನಲ್ಲಿ ಜೀವನಶ್ರೇಷ್ಠ ಸ್ಥಾನ ಸಂಪಾದಿಸಿದ್ದಾರೆ.ಪಂದ್ಯದಲ್ಲಿ ಜೀವನಶ್ರೇಷ್ಠ 243 ರನ್ ಸಿಡಿಸಿದ ಕನ್ನಡಿಗ ಮಯಾಂಕ್ 7 ಸ್ಥಾನ ಬಡ್ತಿ ಪಡೆದು 11ನೇ ಸ್ಥಾನಕ್ಕೇರುವ ಮೂಲಕ ಅಗ್ರ 10ಕ್ಕೆ ಸನಿಹವಾಗಿದ್ದಾರೆ. 28 ವರ್ಷದ ಅವರು ಆಡಿದ ಮೊದಲ 8 ಟೆಸ್ಟ್ಗಳಲ್ಲಿ 858 ರನ್ ಸಿಡಿಸಿ 691 ರೇಟಿಂಗ್ ಪಾಯಿಂಟ್ ಕಲೆಹಾಕಿದ್ದಾರೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೆ ಬ್ಯಾಟ್ಸ್ ಮನ್ಗಳು ಮಾತ್ರ ಮೊದಲ 8 ಟೆಸ್ಟ್ಗಳಲ್ಲಿ ಮಯಾಂಕ್ಗಿಂತ ಹೆಚ್ಚಿನ ರನ್ ಬಾರಿಸಿದ್ದಾರೆ.
ಅವರೆಂದರೆ ಡಾನ್ ಬ್ರಾಡ್ಮನ್ (1210), ಎವರ್ಟನ್ ವೀಕ್ಸ್ (968), ಸುನೀಲ್ ಗಾವಸ್ಕರ್ (938), ಮಾರ್ಕ್ ಟೇಲರ್ (906), ಜಾರ್ಜ್ ಹೆಡ್ಲಿ (904), ಫ್ರಾಂಕ್ ವೋರೆಲ್ (890) ಮತ್ತು ಹೆರ್ಬರ್ಟ್ ಸಟ್ಕ್ಲಿಫ್ (872). ಪಂದ್ಯದ 2 ಇನಿಂಗ್ಸ್ಗಳಿಂದ ಒಟ್ಟು 7 ವಿಕೆಟ್ (27ಕ್ಕೆ 3 ಮತ್ತು 31ಕ್ಕೆ 4) ಕಬಳಿಸಿದ ಶಮಿ ಬೌಲಿಂಗ್ ರ್ಯಾಂಕಿಂಗ್ನಲ್ಲಿ 8 ಸ್ಥಾನ ಮೇಲೇರಿ 7ನೇ ಸ್ಥಾನ ಪಡೆದಿದ್ದಾರೆ. ಕಪಿಲ್ ದೇವ್ (877) ಮತ್ತು ಜಸ್ಪ್ರೀತ್ ಬುಮ್ರಾ (832) ಬಳಿಕ ಗರಿಷ್ಠ ರೇಟಿಂಗ್ ಅಂಕ (790) ಕಲೆ ಹಾಕಿರುವ ಮೊಹಮ್ಮದ್ ಶಮಿ ಭರ್ಜರಿ ಸಾಧನೆ ಮಾಡಿದ್ದಾರೆ. ಆದರೆ ಚೇಸಿಂಗ್ ಕಿಂಗ್ ವಿರಾಟ್ ಕೊಹ್ಲಿ ಮಾತ್ರ ೨ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. ಚೇತೇಶ್ವರ ಪೂಜಾರ 4, ಅಜಿಂಕ್ಯ ರಹಾನೆ 5 ಮತ್ತು ರೋಹಿತ್ ಶರ್ಮ 10ನೇ ಸ್ಥಾನ ಕಾಯ್ದುಕೊಂಡಿದ್ದಾರೆ.