ಕೋಲ್ಕತಾ: ಇತಿಹಾಸದ ಮೊಟ್ಟಮೊದಲ ಡೇ ಅಂಡ್ ನೈಟ್ ಪಿಂಕ್ ಬಾಲ್ ಟೆಸ್ಟ್ ಪಂದ್ಯ ಇದೀಗ ಭಾರತದ ವಶವಾಗಿದೆ. ಇನ್ನಿಂಗ್ಸ್ ಪ್ಲಸ್ ಸ್ಕೋರ್ ನಿಂದ ಟೀಂ ಇಂಡಿಯಾ ಗೆದ್ದಿದ್ದು ಮತ್ತೇ ಟೆಸ್ಟ್ ರಾಂಕಿಂಗ್  ನಲ್ಲಿ ಮೊದಲನೇ ಸ್ಥಾನಕ್ಕೇರಿದೆ. ಐತಿಹಾಸಿಕ ಪಿಂಕ್ ಬಾಲ್‍ನಲ್ಲಿ ನಡೆದ ದ್ವಿತೀಯ ಟೆಸ್ಟ್‍ನಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರತ ತಂಡ ಇನ್ನಿಂಗ್ಸ್ ಹಾಗೂ 46 ರನ್‍ಗಳ ಮೂಲಕ ಗೆಲುವು ಸಾಧಿಸಿ ಸರಣಿಯನ್ನು ಕ್ಲೀನ್‍ಸ್ವೀಪ್ ಮಾಡಿದೆ.
 
ಮೂರನೇ ದಿನದ ಆಟವಾದ ಭಾನುವಾರ ಆರಂಭದಲ್ಲೇ ಬಾಂಗ್ಲಾದೇಶ 2ನೇ ಇನ್ನಿಂಗ್ಸ್‍ನಲ್ಲಿ 195 ರನ್‍ಗಳಿಗೆ ತನ್ನೆಲ್ಲ ವಿಕೆಟ್‍ಗಳನ್ನು ಕಳೆದುಕೊಂಡು ಹೀನಾಯ ಸೋಲು ಅನುಭವಿಸಿದೆ. ಇಲ್ಲಿಯ ಹಿಡನ್‍ಗಾರ್ಡನ್‍ನಲ್ಲಿ ತುಂಬಿ ತುಳುಕುತ್ತಿದ್ದ ಪ್ರೇಕ್ಷಕರ ನಡುವೆ ಭಾರತದ ಈ ಗೆಲುವಿನಿಂದಾಗಿ ಟೆಸ್ಟ್ ರ್ಯಾಂಕಿಂಗ್‍ನಲ್ಲೀಗ ಭಾರತ ನಂ.1 ಸ್ಥಾನಕ್ಕೆ ಬಡ್ತಿ ಪಡೆದಂತಾಗಿದೆ. ವಿರಾಟ್ ದಾಖಲೆಗಳ ಜೊತೆ ಟೀಂ ಇಂಡಿಯಾ ಹಲವು ದಾಖಲೆಗಳನ್ನು ನಿರ್ಮಿಸಿತು. 
 
ಡೆಡ್ಲಿ ಬೌನ್ಸರ್ ಇಶಾಂತ್ ಶರ್ಮಾ ಅವರ ಮಾರಕ ಬೌಲಿಂಗ್ ದಾಳಿಗೆ ಸಾಥ್ ನೀಡಿದ ವೇಗಿ ಉಮೇಶ್ ಯಾದವ್ ಕೂಡ ಬಾಂಗ್ಲಾ ಬೌಲರ್‍ಗಳನ್ನು ಬಹುಬೇಗನೆ ಕಟ್ಟಿ ಹಾಕುವ ಮೂಲಕ ಭಾರತಕ್ಕೆ ಭರ್ಜರಿ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು. ಈ ಇಬ್ಬರು ವೇಗಿಗಳೇ ಪ್ರಮುಖ 8 ವಿಕೆಟ್‍ಗಳನ್ನು ಉರುಳಿಸುವ ಮೂಲಕ ಬಾಂಗ್ಲಾದೇಶವನ್ನು ಇಕ್ಕಟ್ಟಿಗೆ ಸಿಲುಕಿದ್ದರು. ಭಾರತದಲ್ಲಿ ಇದೇ ಮೊದಲ ಬಾರಿಗೆ ಗುಲಾಬಿ ಬಣ್ಣದ ಚೆಂಡನ್ನು ಬಳಸಿ ಟೆಸ್ಟ್ ಸರಣಿ ನಡೆಸಲಾಗಿತ್ತು. ಇದೀಗ ಅದರಲ್ಲಿ ಗೆಲುವಿನ ನಗೆ ಬೀರಿದ ಟೀಂ ಇಂಡಿಯಾದಲ್ಲಿ ಇವರ ಪಾಲೇ  ಹೆಚ್ಚಾಗಿದೆ. ಎರಡೂ ಪಂದ್ಯಗಳಲ್ಲಿ ಭಾರತದ ಕರಾರುವಕ್ಕು ಬೌಲಿಂಗ್‍ಗೆ ಬಾಂಗ್ಲಾ ದೇಶ ನಿರುತ್ತರ ನೀಡುವ ಮೂಲಕ ಎರಡೂ ಪಂದ್ಯಗಳಲ್ಲೂ 3 ದಿನಕ್ಕೇ ಪಂದ್ಯ ಮುಗಿದಿದ್ದು, ವಿಶೇಷವಾಗಿದೆ. 
 
ಸಂಕ್ಷಿಪ್ತ ಸ್ಕೋರ್: ಭಾರತ: ಮೊದಲ ಇನ್ನಿಂಗ್ಸ್-347/9 ಡಿಕ್ಲೇರ್, ಬಾಂಗ್ಲಾದೇಶ: ಪ್ರಥಮ ಇನ್ನಿಂಗ್ಸ್-106, ದ್ವಿತೀಯ ಇನ್ನಿಂಗ್ 195/9
ಫಲಿತಾಂಶ: ಭಾರತಕ್ಕೆ ಇನ್ನಿಂಗ್ಸ್ ಹಾಗೂ 46 ರನ್‍ಗಳ ಜಯ. 
ಪಂದ್ಯಶ್ರೇಷ್ಠ ಪ್ರಶಸ್ತಿ: ಇಶಾಂತ್ ಶರ್ಮ.
 
 
 
 
 

Find out more: