ಹಾರ್ದಿಕ್ ಪಾಂಡ್ಯ, ಟೀಂ ಇಂಡಿಯಾದ ಹೊಡಿ ಬಡಿ ಆಟಗಾರ. ಕ್ರೀಸ್ ಗೆ ಬಂದ ಮೊದಲ ಬಾಲನ್ನೇ ಸಿಕ್ಸರ್ ಸಿಡಿಸಿ ಅಬ್ಬರಿಸಿದ ಆಟಗಾರ, ಬೆನ್ನು ನೋವಿನ ಸಮಸ್ಯೆಗೆ ಲಂಡನ್‌ನಲ್ಲಿ ಶಸ್ತ್ರಚಿಕಿತ್ಸೆ ಪಡೆದುಕೊಂಡಿರುವ ಪಾಂಡ್ಯ, ಇದೀಗ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ರನ್ನಿಂಗ್ ಮತ್ತು ವಿವಿಧ ವ್ಯಾಯಾಮಗಳನ್ನು ಆರಂಭಿಸಿರುವ ವಿಡಿಯೋ ಪ್ರಕಟಿಸಿದ್ದು, ಅತೀ ಶೀಘ್ರದಲ್ಲೇ ಭಾರತ ತಂಡಕ್ಕೆ ಮರಳುವ ಸೂಚನೆ ನೀಡಿದ್ದಾರೆ.
ಇದೇ ವರ್ಷದ ಅಕ್ಟೋಬರ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಟ್ಟ ಬಳಿಕ ನಡೆಯಲು ಕೂಡ ಕಷ್ಟಪಡುತ್ತಿದ್ದ ಹಾಗೂ ಬೇರೆಯವರ ಸಹಾಯ ಪಡೆದು ನಿಧಾನವಾಗಿ ನಡೆಯಲು ಪ್ರಯತ್ನಿಸುತ್ತಿದ್ದ ವಿಡಿಯೊ ಒಂದನ್ನು ಪಾಂಡ್ಯ ಈ ಹಿಂದೆ ಹಂಚಿಕೊಂಡಿದ್ದರು. ಆದರೀಗ ಸಂಪೂರ್ಣ ಚೇತರಿಸಿದಂತಿದ್ದು, ಉತ್ತಮ ರೀತಿಯಲ್ಲಿ ಓಡಾಡುತ್ತಿರುವುದು ನೂತನ ವೀಡಿಯೋದಲ್ಲಿ ಸ್ಪಷ್ಟವಾಗಿದೆ.
ಮೈದಾನಕ್ಕೆ ಇಳಿದು ಬಹಳ ಸಮಯವೇ ಕಳೆದಿದೆ. ಅಂಗಣಕ್ಕೆ ಮರಳಿರುವುದು ಉತ್ತಮ ಅನುಭವ ತಂದುಕೊಟ್ಟಿದೆ ಎಂದು ಹಾರ್ದಿಕ್ ತಮ್ಮ ವಿಡಿಯೋ ಜೊತೆಗೆ ಸಂದೇಶವೊಂದನ್ನು ಅಭಿಮಾನಿಗಳಿಗೆ ರವಾನಿಸಿದ್ದಾರೆ. ಇದಕ್ಕೆ ಮುಂಬೈ ಇಂಡಿಯನ್ಸ್ ಕೂಡ ಟ್ವೀಟ್ ಮಾಡಿದ್ದು, ಪಾಂಡ್ಯ ಫೋಟೊ ಪ್ರಕಟಿಸಿ, "ಸಂಪೂರ್ಣ ಫಿಟ್ನೆಸ್‌ಗೆ ಮರಳುತ್ತಿದ್ದಾರೆ," ಎಂದು ಪೋಸ್ಟ್ ಮಾಡಿದೆ.
ಕಳೆದ ಐಪಿಎಲ್ ಮತ್ತು ವಿಶ್ವಕಪ್ ಟೂರ್ನಿ ವೇಳೆ ಬೆನ್ನು ನೋವಿನ ಸಮಸ್ಯೆ ಎದುರಿಸಿದ್ದ ಪಾಂಡ್ಯ, ವಿಶ್ವಕಪ್ ಬಳಿಕ 2 ತಿಂಗಳ ಸುದೀರ್ಘಾವಧಿಯ ವಿಶ್ರಾಂತಿ ಪಡೆದು ಚಿಕಿತ್ಸೆ ಪಡೆದಿದ್ದರು. ಬಳಿಕ ಕಠಿಣ ಅಭ್ಯಾಸ ಮತ್ತು ಪುನರ್ ವಸತೀ ಶಿಬಿರದ ಯೋಜನೆಯಲ್ಲಿ ಪಾಲ್ಗೊಂಡು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಕ್ರಿಕೆಟ್ ಸರಣಿ ಹೊತ್ತಿಗೆ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದರು. ಆದರೆ, ಮತ್ತದೇ ಸಮಸ್ಯೆ ಕಾಡಿದ ಹಿನ್ನೆಲೆಯಲ್ಲಿ ವೈದ್ಯರ ಸಲಹೆಮೇರೆಗೆ ಶಸ್ತ್ರ ಚಿಕಿತ್ಸೆಗೆ ಒಳಪಟ್ಟರು
ಟೀಮ್ ಇಂಡಿಯಾ ಇದೀಗ ಡಿ.6ರಂದು ಆರಂಭವಾಗಲಿರುವ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ತಲಾ 3ಪಂದ್ಯಗಳ ಟಿ20ಮತ್ತು ಏಕದಿನ ಕ್ರಿಕೆಟ್ ಸರಣಿಯನ್ನಾಡಲಿದೆ. ಈ ಸರಣಿಗಳಿಗೆ ಈಗಾಗಲೇ ಭಾರತ ತಂಡಗಳನ್ನು ಪ್ರಕಟಿಸಲಾಗಿದೆ. ಇದಾದ ಬಳಿಕ ಭಾರತ ತಂಡ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಆಸರಣಿ ಹೊತ್ತಿಗೆ ಪಾಂಡ್ಯ ತಂಡಕ್ಕೆ ಮರಳುವ ಸಾಧ್ಯತೆಹೆಚ್ಚಿದೆ.