ಬೆಂಗಳೂರು: ಐಪಿಎಲ್ ನಲ್ಲಿ ಬಿಟ್ಟು ಬಿಡದೆ ಕಾಡುತ್ತಿದ್ದ ಫಿಕ್ಸಿಂಗ್ ಭೂತ ಇದೀಗ ಕೆಪಿಎಲ್ ಗೂ ತಟ್ಟಿದ್ದು, ಭಾರೀ ಸುದ್ದಿಯಾಗಿತ್ತು. ಇದೀಗ ಕೆಪಿಎಲ್‌ ಮ್ಯಾಚ್‌ ಫಿಕ್ಸಿಂಗ್‌ ಹಾಗೂ ಬೆಟ್ಟಿಂಗ್‌ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬೆಳಗಾವಿ ಪ್ಯಾಂಥರ್ಸ್‌ ತಂಡ ತರಬೇತುದಾರ ಹಾಗೂ ಕೆಎಸ್‌ಸಿಎ ಆಡಳಿತ ಸಮಿತಿ ಸದಸ್ಯ ಸುಧೀಂದ್ರ ಶಿಂಧೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು ಶಿಂಧೆ ಯಾಕಾದರೂ ತಪ್ಪು ಮಾಡಿದೆನೋ ಎಂಬಂತಹ ಸ್ಥಿತಿಗೆ ಬಂದು ತಲುಪಿದ್ದಾರೆ. 
 
ಈ ಪ್ರಕರಣ ಕಳೆದ ಹತ್ತು ದಿನಗಳಿಂದ ಭಾರೀ ಸುದ್ದಿಯಾಗಿತ್ತು. ಪ್ರಕರಣ ಸಂಬಂಧ ಶಿಂಧೆ ಮನೆ ಮೇಲೆ ಡಿ.2 ರಂದು ದಾಳಿ ನಡೆಸಿದ್ದ ಸಿಸಿಬಿ ತಂಡ, ಆತನ ಮನೆಯಲ್ಲಿ ಪತ್ತೆಯಾದ ದಾಖಲೆಗಳನ್ನು ಆಧರಿಸಿ ಆರೋಪಿಯನ್ನು ಡಿ.3ರಂದು ಬಂಧಿಸಿ ಹೆಚ್ಚಿನ ವಿಚಾರಣೆಗೆ ಐದು ದಿನಗಳ ಕಾಲ ವಶಕ್ಕೆ ಪಡೆದುಕೊಂಡಿತ್ತು. ಇದೀಗ ಕಸ್ಟಡಿ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ಶನಿವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 
 
ಶಿಂಧೆ ಮಾತ್ರ ವಿಚಾರಕ್ಕೂ ನನಗೂ ಸಂಬಂಧವೇ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ತನಿಖಾಧಿಕಾರಿ ಎದುರು ಹೇಳಿಕೆ ದಾಖಲಿಸುವಾಗ ಆರೋಪಿ ಸುಧೀಂದ್ರ ಶಿಂಧೆ, ಕಣ್ಣಿರು ಸುರಿಸುತ್ತ, ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ತಂಡದ ಮಾಲೀಕ ಅಶ್ಫಾಕ್‌ ಅಲಿ ತಹ್ರಾ ಸೂಚನೆಯಂತೆ ನಡೆದುಕೊಳ್ಳುತ್ತಿದೆ. ಅದರಂತೆ ಆಟಗಾರರಿಗೂ ಸಲಹೆ ನೀಡುತ್ತಿದ್ದೆ ಎಂದು ಹೇಳಿಕೆ ದಾಖಲಿಸಿದ್ದಾನೆ. ಅಲ್ಲದೆ, ಕೋರ್ಟ್‌ಗೆ ಹಾಜರು ಪಡಿಸಿದಾಗಲೂ ಆರೋಪಿ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
 
ಇದು ಕೇವಲ ಫಿಕ್ಸಿಂಗ್ ಮಾತ್ರವಷ್ಟೇ ಅಲ್ಲ. ಇದರ ಹಿಂದೆ ಹನಿಟ್ರ್ಯಾಪ್ ಇದೆ ಎಂದು ಮಾಹಿತಿ ಲಭ್ಯವಾಗಿತ್ತು.ಹನಿಟ್ರ್ಯಾಪ್‌ ಮೂಲಕವೇ ಕೆಲ ಆಟಗಾರರನ್ನು ಫಿಕ್ಸಿಂಗ್‌ ಹಾಗೂ ಬೆಟ್ಟಿಂಗ್‌ ದಂಧೆಗೆ ದೂಡುತ್ತಿದ್ದರು.ಮ್ಯಾಚ್‌ ಆರಂಭ ಹಾಗೂ ಮುಗಿದ ಬಳಿಕ ಅವರ ಚಟುವಟಿಕೆಗಳೇನು ಎಂಬಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ. ಈ ಪೈಕಿ ಕೆಲ ನಟಿಯರು ಆರೋಪಿಗಳ ಸೂಚನೆ ಮೇರೆಗೆ ಆಟಗಾರರನ್ನು ಹನಿಟ್ರ್ಯಾಪ್‌ಗೆ ಕೆಡವುತ್ತಿದ್ದರು ಎಂದು ಹೇಳಲಾಗಿದೆ. ಅಂತಹ ನಟಿಯರನ್ನು ಪತ್ತೆ ಹಚ್ಚಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಜಾರಿ ಮಾಡಲಾಗುವುದು ಎಂದು ಸಿಸಿಬಿ ತಿಳಿಸಿವೆ

Find out more: