ಲಂಡನ್: ಟೀಂ ಇಂಡಿಯಾ, ಕ್ರಿಕೆಟ್ ನಲ್ಲಿ ತನ್ನದೇ ಆದ ಸ್ಥಾನಮಾನಗಳನ್ನು ಹೊಂದಿರುವ ತಂಡ. ಸರಣಿಗಳನ್ನೇ  ಲೀಲಾಜಾಲವಾಗಿ ಗೆಲ್ಲುವ ಟೀಂ ಇಂಡಿಯಾ ಇದೀಗ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ  9 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಅರೇ ಏನಪ್ಪಾ ಇದು, ಮೊನ್ನೆಯಷ್ಟೇ ವಿಂಡೀಸ್ ವಿರುದ್ದ ಗೆದ್ದು ಶ್ರೀಲಂಕಾ ವಿರುದ್ಧ ಆಡಲು ಕಣಕ್ಕಿಳಿಯಬೇಕಾದ ಟೀಂ ಇಂಡಿಯಾ ದಕ್ಷಿಣ ಆಪ್ರಿಕಾ ವಿರುದ್ದ ಏಕೆ ಆಡಿದೆ ಎಂದು ಗೊಂದಲ ಪಡಬೇಡಿ. ದಕ್ಷಿಣ ಆಫ್ರಿಕಾ ವಿರುದ್ದ ಗೆದ್ದಿರುವುದು ಅಂಡರ್ 19 ಟೀಂ ಇಂಡಿಯಾ ತಂಡ. 
 
 ಬಫೆಲ್ಲೋ ಪಾರ್ಕ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ದೊಡ್ಡ ಮೊತ್ತ ಕಲೆ ಹಾಕುವಲ್ಲಿ ವಿಫಲವಾಯಿತು. 48.3 ಓವರ್ ನಲ್ಲಿ ಕೇವಲ 187 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಭಾರತದ ಹುಡುಗರು ಈ ಮೊತ್ತವನ್ನು ಕೇವಲ ಒಂದು ವಿಕೆಟ್ ನಷ್ಟದಲ್ಲಿ ಕಲೆಹಾಕಿ ಜಯದ ನಗು ಬೀರಿದರು. ಟಾಸ್ ಗೆದ್ದು ಬ್ಯಾಟ್ ಮಾಡಿದ ಹರಿಣಗಳ ಹುಡುಗರು ವಿಫಲರಾದರು. ಲ್ಯೂಕ್ ಬ್ಯೂಫರ್ಟ್ 64 ರನ್ ಗಳಿಸಿದ್ದು ಬಿಟ್ಟರೆ ಬೇರಾವ ಆಟಗಾರನೂ ತಂಡಕ್ಕೆ ನೆರವಾಗಲಿಲ್ಲ. ಭಾರತದ ಪರ ರವಿ ಬಿಷ್ನೋಯ್ ಮೂರು ವಿಕೆಟ್ ಪಡೆದರೆ, ಕಾರ್ತಿಕ್ ತ್ಯಾಗಿ, ಶುಭಾಂಗ್ ಹೆಗ್ಡೆ ಮತ್ತು ಅಥರ್ವ ಅಂಕೋಲೇಕರ್ ತಲಾ ಎರಡು ವಿಕೆಟ್ ಕಬಳಿಸಿದರು. ಸುಲಭ ಗುರಿ ಬೆನ್ನತ್ತಿದ ಟೀಂ ಇಂಡಿಯಾಗೆ ಆರಂಭಿಕರಿಬ್ಬರು ಭದ್ರ ಬುನಾದಿ ಹಾಕಿದರು. ಇದೇ ಅಂಶ ಟೀಂ ಇಂಡಿಯಾ ಗೆಲುವಿಗೆ ಕಾರಣವಾಗಿದೆ ಎಂಬುದು ಅನೇಕರ ವಿಶ್ಲೇಷಣೆ ಯಾಗಿದೆ. 
 
ದಿವ್ಯಾಂಶ್ ಸಕ್ಸೇನಾ ಮತ್ತು ತಿಲಕ್ ವರ್ಮಾ 127 ರನ್ ಜೊತೆಯಾಟವಾಡಿದರು. ತಿಲಕ್ ವರ್ಮಾ 59 ರನ್ ಗಳಿಸಿ ಔಟಾದರೆ, ದಿವ್ಯಾಂಶ್ 86 ರನ್ ಗಳಿಸಿ ಅಜೇಯರಾಗುಳಿದರು. ಅಂತಿಮವಾಗಿ 7.3 ಓವರ್ ಬಾಕಿ ಉಳಿದಂತೆ 190 ರನ್ ಗಳಸಿ ವಿಜಯಿಯಾಯಿತು. ಶನಿವಾರ ಸರಣಿಯ ದ್ವಿತೀಯ ಪಂದ್ಯ ನಡೆಯಲಿದ್ದು, ಅಂಡರ್ 19 ಟೀಂ ಇಂಡಿಯಾ ಭರ್ಜರಿ ಪೂರ್ವತಯಾರಿ ನಡೆಸಿದೆ.
 
 

Find out more: