ದೆಹಲಿ: ಅಂತರಾಷ್ಟ್ರೀಯ ರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಟೀಂ ಇಂಡಿಯಾದ ಪ್ರಮುಖ ಆಟಗಾರರು ರಾಜ್ಯ ಮಟ್ಟದಲ್ಲಿ ನಡೆಯುವ ರಣಜಿ ಪಂದ್ಯಗಳನ್ನು ಆಡುವುದೇ ಕಡಿಮೆಯಾಗಿದೆ. ಯಾಕೆ, ಏನು ಎಂಬ ಕಂಪ್ಲೀಟ್ ಡಿಟೆಲ್ಸ್ ಇಲ್ಲಿದೆ ನೋಡಿ. 
 
 ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಈಗಾಗಲೇ ಹಲವು ರೋಚಕ ಪಂದ್ಯಗಳ ಮೂಡಿಬಂದಿವೆ. ಬಲಿಷ್ಠ ಮುಂಬೈ ತಂಡಕ್ಕೆ ರೈಲ್ವೇಸ್‌ ಆಘಾತ ನೀಡಿದ್ದು ಈ ಬಾರಿಯ ಪಂದ್ಯಗಳಲ್ಲಿ ಒಂದು. ಇನ್ನು ಭಾರತ ತಂಡ ಯಾವುದೇ ಅಂತಾರಾಷ್ಟ್ರೀಯ ಪಂದ್ಯವನ್ನು ಆಡದೇ ಬಿಡುವಿನ ಸಮಯವಿದ್ದರೂ ಟೀಮ್‌ ಇಂಡಿಯಾ ಆಟಗಾರರು ರಣಜಿ ಟ್ರೋಫಿ ಟೂರ್ನಿಯಲ್ಲಿ ಪಾಲ್ಗೊಂಡಿಲ್ಲ. ತಮ್ಮ ತಮ್ಮ ರಾಜ್ಯ ತಂಡಗಳಲ್ಲಿ ಅವರ ಹೆಸರಿದ್ದರೂ, ರಣಜಿಯಲ್ಲಿ ಆಡುತ್ತಿಲ್ಲವೇಕೆ? ಎಂದು ಭಾರಿ ಚರ್ಚೆಯಾಗುತ್ತದೆ.
 
ಅಂದಹಾಗೆ ಟೀಮ್‌ ಇಂಡಿಯಾದ ಯುವ ಆಟಗಾರರಾದ ಮಯಾಂಕ್‌ ಅಗರ್ವಾಲ್‌, ಶ್ರೇಯಸ್‌ ಅಯ್ಯರ್‌ ಮತ್ತು ಶಿವಂ ದುಬೇ  ಅವರನ್ನು ರಣಜಿಯಲ್ಲಿ ಆಡದೇ ಇರುವಂತೆ ಬಿಸಿಸಿಐ ಸೂಚನೆ ನೀಡಿದೆ. ಆಟಗಾರರ ಮೇಲಿನ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಬಿಸಿಸಿಐನ ವೈದ್ಯಕೀಯ ತಂಡ ಟೀಮ್‌ ಇಂಡಿಯಾ ಆಟಗಾರರಿಗೆ ರಣಜಿಯಲ್ಲಿ ಪಾಲ್ಗೊಳ್ಳದೇ ಇರುವಂತೆ ಸೂಚಿಸಿದೆ. ಇನ್ನು ಭಾರತ ಟೆಸ್ಟ್‌ ತಂಡದಲ್ಲಿ ಮಾತ್ರ ಸ್ಥಾನ ಪಡೆದಿರುವ ಮಯಾಂಕ್‌ ಅಗರ್ವಾಲ್‌, ಕರ್ನಾಟಕ ತಂಡದ ಪರ ಈಗಾಗಲೇ 2 ರಣಜಿ ಪಂದ್ಯಗಳನ್ನು ಆಡಿದ್ದಾರಾದರೂ, ಬಿಸಿಸಿಐ ನಿರ್ದೇಶನದಂತೆ ಶುಕ್ರವಾರ ಆರಂಭವಾಗಲಿರುವ ಮುಂಬೈ ವಿರುದ್ಧದ ಪ್ರಮುಖ ಪಂದ್ಯದಿಂದ ಹೊರಗುಳಿಯಲಿದ್ದಾರೆ.
 
ಅಯ್ಯರ್‌ ಮತ್ತು ದುಬೇಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಮಯಾಂಕ್‌, ಈಗಾಗಲೇ ಎರಡು ರಣಜಿ ಪಂದ್ಯಗಳನ್ನು ಆಡಿದ್ದಾರೆ. ಆದರೆ ಅವರಿಗೆ ವಿಶ್ರಾಂತಿಯ ಅಗತ್ಯವಿದೆ. ಏಕೆಂದರೆ ಭಾರತ 'ಎ' ತಂಡದ ಜೊತೆಗೆ ಅವರು ಜ.10ರಂದು ನ್ಯೂಜಿಲೆಂಡ್‌ ಪ್ರವಾಸ ಕೈಗೊಳ್ಳಬೇಕಿದೆ. ದೇಶಿ ಟೂರ್ನಿಗಳಲ್ಲಿ ಆಡದೇ ಇರುವಂತೆ ಆಟಗಾರರಿಗೆ ಸೂಚಿಸಿದ ಸಂದರ್ಭದಲ್ಲಿ ಈ ಕುರಿತಾಗಿ ನಾಯಕ ವಿರಾಟ್‌ ಕೊಹ್ಲಿ, ಕೋಚ್‌ ರವಿ ಶಾಸ್ತ್ರಿ ಮತ್ತು ಚೀಫ್‌ ಸೆಲೆಕ್ಟರ್‌ ಎಂಎಸ್‌ಕೆ ಪ್ರಸಾದ್‌ಗೆ ಸೂಚನೆ ನೀಡಲಾಗಿರುತ್ತದೆ ಎಂದು ತಿಳಿದುಬಂದಿದೆ.

Find out more: