ಪುಣೆ:  ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಶ್ರೀಲಂಕಾ ನಡುವಣ ಟಿ20 ಕ್ರಿಕೆಟ್‌ ಸರಣಿಯ ಕ್ಲೈಮ್ಯಾಕ್ಸ್‌ ಕದನದಲ್ಲಿ 78 ರನ್‌ಗಳ ಭರ್ಜರಿ ಜಯ ದಾಖಲಿಸಿದ ಟೀಮ್‌ ಇಂಡಿಯಾ 2-0 ಅಂತರದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
 
ಬ್ಯಾಟಿಂಗ್‌, ಬೌಲಿಂಗ್‌, ಫೀಲ್ಡಿಂಗ್ ನಲ್ಲೂ ಭರ್ಜರಿ ಪ್ರದರ್ಶನ ನೀಡಿದ ಟೀಂ ಇಂಡಿಯಾ, ಪ್ರವಾಸಿ ಶ್ರೀಲಂಕಾ ತಂಡವನ್ನು 78 ರನ್‌ ಗಳಿಂದ ಬಗ್ಗುಬಡಿಯುವ ಮೂಲಕ 3 ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯಲ್ಲಿ 2-0 ಅಂತರದಿಂದ ಸರಣಿಯನ್ನು ವಶಪಡಿಸಿಕೊಂಡಿತು. ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಟೀಮ್‌ ಇಂಡಿಯಾ ತನ್ನ ಪಾಲಿನ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 201 ರನ್‌ಗಳ ಶಿಖರವನ್ನು ನಿರ್ಮಿಸಿತು. ಬಳಿಕ ಗುರಿ ಬೆನ್ನತ್ತಿದ ಲಂಕಾ ಪಡೆಯನ್ನು 15.5 ಓವರ್‌ಗಳಲ್ಲಿ 123 ರನ್‌ಗಳಿಗೆ ಆಲ್‌ ಔಟ್‌ ಮಾಡಿತು.
 
ಮಿಂಚಿನ ಬೌಲಿಂಗ್‌ ದಾಳಿ ಸಂಘಟಿಸಿದ ನವದೀಪ್‌ ಸೈನಿ ಮತ್ತೊಮ್ಮೆ ತಮ್ಮ ಅದ್ಭುತ ವೇಗದೊಂದಿಗೆ ಲಂಕಾ ಪಡೆಯ ಬ್ಯಾಟ್ಸ್‌ಮನ್‌ಗಳನ್ನು ಬೇಟೆಯಾಡಿ, 3.5 ಓವರ್‌ಗಳಲ್ಲಿ 28ಕ್ಕೆ 3 ವಿಕೆಟ್‌ ಪಡೆದರು. ಅವರಿಗೆ ಉತ್ತಮ ಸಾಥ್‌ ನೀಡಿದ ಶಾರ್ದೂಲ್‌ ಠಾಕೂರ್‌ (19ಕ್ಕೆ 2) ಮತ್ತು ವಾಷಿಂಗ್ಟನ್‌ ಸುಂದರ್‌ (37ಕ್ಕೆ 2) ತಲಾ 2 ವಿಕೆಟ್‌ ಪಡೆದರು. ಜಸ್‌ಪ್ರೀತ್‌ ಬುಮ್ರಾ ಕೂಡ 5ಕ್ಕೆ 1 ವಿಕೆಟ್‌ ಪಡೆದು ಮಿಂಚಿದರು. 
 
ಸಂಕ್ಷಿಪ್ತ ಸ್ಕೋರ್‌:- 
 
ಭಾರತ: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 201  (ಕೆಎಲ್‌ ರಾಹುಲ್‌ 54, ಶಿಖರ್‌ ಧವನ್‌ 52, ಮನೀಶ್‌ ಪಾಂಡೆ ಅಜೇಯ 31, ವಿರಾಟ್‌ ಕೊಹ್ಲಿ 26, ಶಾರ್ದೂಲ್‌ ಠಾಕೂರ್‌ ಅಜೇಯ 22; ಲಕ್ಷಣ್‌ ಸಂದಕನ್‌ 35ಕ್ಕೆ 3, ವಾನಿಂದು ಹಸರಂಗ 27ಕ್ಕೆ 1).
 
ಶ್ರೀಲಂಕಾ: 15.5 ಓವರ್‌ಗಳಲ್ಲಿ 123ಕ್ಕೆ ಆಲ್‌ಔಟ್‌ (ಏಂಜಲೊ ಮ್ಯಾಥ್ಯೂಸ್‌ 31, ಧನಂಜಯ ಡಿ'ಸಿಲ್ವಾ 57; ನವದೀಪ್‌ ಸೈನಿ 28ಕ್ಕೆ 3, ಶಾರ್ದೂಲ್‌ ಠಾಕೂರ್‌ 19ಕ್ಕೆ 2, ವಾಷಿಂಗ್ಟನ್‌ ಸುಂದರ್‌ 37ಕ್ಕೆ 2).
 
 

Find out more: