ಪುಣೆ: ಟೀಂ ಇಂಡಿಯಾ ಸಿಂಹಳೀಯರ ವಿರುದ್ಧ ನಡೆದ ಅಂತಿಮ ಪಂದ್ಯದಲ್ಲಿ ಭಾರತ ಗೆದ್ದು ಬೀಗಿತು. ಪಂದ್ಯದಲ್ಲಿ ಎದುರಿಸಿದ ಮೊದಲ ಎಸೆತದಲ್ಲೇ ಅದ್ಭುತ ಸಿಕ್ಸರ್‌ ಸಿಡಿಸಿ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದ ಸಂಜು ಸ್ಯಾಮ್ಸನ್‌, ಟೀಮ್‌ ಇಂಡಿಯಾಗೆ ಕಮ್‌ಬ್ಯಾಕ್‌ ಮಾಡಿದ ಭರ್ಜರಿ ಸಂದೇಶ ಸಾರಿ ಮರು ಎಸೆತದಲ್ಲೇ ಔಟ್‌ ಆಗಿ ನಿರಾಸೆ ಅನುಭವಿಸಿದರು. ಆದರೂ ವಿಶೇಷ ದಾಖಲೆಯೊಂದು ಅವರ ಹೆಸರಿಗೆ ಸೇರ್ಪಡೆಯಾಗಿದೆ. ಏನದು ಗೊತ್ತಾ!? 
 
ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಕಾಣಿಸಿಕೊಂಡ ಸ್ಯಾಮ್ಸನ್‌, ವಿರಾಟ್‌ ಕೊಹ್ಲಿ ಸ್ಥಾನದಲ್ಲಿ 3ನೇ ಬ್ಯಾಟ್ಸ್‌ಮನ್‌ ಆಗಿ ಕಣಕ್ಕಿಳಿದು ಮೊದಲ ಎಸೆತದಲ್ಲೇ ಸಿಕ್ಸರ್‌ ಬಾರಿಸಿದ್ದರು. ಅಬ್ಬರಿಸಿ ಪೊಬ್ಬಿರಿಯುವ ಮುನ್ಸೂಚನೆ ನೀಡಿದರು. ಆದರೆ ಮರು ಎಸೆತದಲ್ಲಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಟಿ20 ಮಾದರಿಯಲ್ಲಿ 3000 ಸಾವಿರಕ್ಕೂ ಅಧಿಕ ರನ್‌ ಗಳಿಸಿರುವ ಸ್ಯಾಮ್ಸನ್‌, ಭಾರತ ತಂಡದ ಪರ ಶುಕ್ರವಾರದ ಪಂದ್ಯಕ್ಕೂ ಮುನ್ನ ಕೇವಲ ಒಂದು ಪಂದ್ಯವನ್ನಷ್ಟೇ ಆಡಿದ್ದರು.
 
ಅದು 2015ರಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ. ಆ ಪಂದ್ಯದ ಬಳಿಕ ಭಾರತ ತಂಡ ಈವರೆಗೆ ಒಟ್ಟು 73 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, ಇಷ್ಟು ಸುದೀರ್ಘಾವಧಿಯ ಬಳಿಕ 2ನೇ ಪಂದ್ಯವನ್ನಾಡುವ ಅವಕಾಶ ಪಡೆದ ಸ್ಯಾಮ್ಸನ್‌, ಭಾರತದ ಪರ ಮರಳಿ ಟಿ20 ಪಂದ್ಯವನ್ನಾಡಲು ಅತಿ ಹೆಚ್ಚು ಪಂದ್ಯಗಳ ವಿರಾಮ ಪಡೆದುಕೊಂಡ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ವೇಗದ ಬೌಲರ್‌ ಉಮೇಶ್‌ ಯಾದವ್‌ ಅವರ ಹೆಸರಲ್ಲಿತ್ತು. ಉಮೇಶ್‌ 2012ರಿಂದ 2015ರವರೆಗೆ ಮರಳಿ ಟಿ20 ಪಂದ್ಯವನ್ನಾಡಲು 65 ಪಂದ್ಯಗಳನ್ನು ಕಾಯುವಂತಾಗಿತ್ತು.
 
ಇನ್ನು ಶುಕ್ರವಾರದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಟೀಮ್‌ ಇಂಡಿಯಾ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 201 ರನ್‌ಗಳ ಬೃಹತ್‌ ಮೊತ್ತ ಪೇರಿಸಿತು. ಭಾರತದ ಪರ ಶಿಖರ್‌ ಧವನ್‌ (52) ಮತ್ತು ಕೆಎಲ್‌ ರಾಹುಲ್‌ (54) ಸ್ಫೋಟಕ ಅರ್ಧಶತಕಗಳನ್ನು ಸಿಡಿಸಿದರು. ಒಟ್ಟಾರೆ ಸಿಂಹಳೀಯರಿಗೆ ಸೊಲಿನ ಪಾಠ ಕಲಿಸಿದರು. 

Find out more: