ಮುಂಬೈ: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಹೀನಾಯ ಸೋಲನುಭವಿಸಿರುವ ಟೀಂ ಇಂಡಿಯಾ 0-1ರ ಅಂತರದ ಹಿನ್ನೆಡೆಗೊಳಗಾಗಿದೆ. ಅಲ್ಲದೆ ಸರಣಿ ಗೆಲ್ಲಲು ಮುಂದಿನ ಎರಡು ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. 10 ವಿಕೆಟ್‌ಗಳ ಅಂತರದ ಸೋಲು ಭಾರತ ಕಳೆದ 15 ವರ್ಷಗಳಲ್ಲಿ ಎದುರಿಸಿದ ಹೀನಾಯ ಸೋಲಾಗಿದೆ. ಈ ಮಧ್ಯೆ ಎಚ್ಚೆತ್ತುಕೊಂಡಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮೂರನೇ ಕ್ರಮಾಂಕಕ್ಕೆ ಹಿಂತಿರುಗುವ ಸೂಚನೆ ನೀಡಿದ್ದಾರೆ.
ಪಂದ್ಯದ ಬಳಿಕ ನಾಲ್ಕನೇ ಕ್ರಮಾಂಕದಲ್ಲಿ ಆಡಿರುವುದರ ಬಗ್ಗೆ ಕೇಳಿದಾಗ, "ಈ ಹಿಂದೆಯೂ ಹಲವು ಬಾರಿ ಚರ್ಚಿಸಲಾಗಿದೆ. ಬ್ಯಾಟಿಂಗ್ ಕ್ರಮಾಂಕದಲ್ಲಿ ಕೆಎಲ್ ರಾಹುಲ್‌ರನ್ನು ಸೇರಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಬದಲಾವಣೆ ತಂದಿದ್ದೆವು. ಆದರೆ ನಮ್ಮ ರಣತಂತ್ರವು ಫಲಿಸಲಿಲ್ಲ. ನಾನು ನಾಲ್ಕನೇ ಕ್ರಮಾಂಕದಲ್ಲಿ ಆಡಿದಾಗೆಲ್ಲ ಫಲಿತಾಂಶ ಉತ್ತಮವಾಗಿರಲಿಲ್ಲ. ನಾವಿದನ್ನು ಮರು ಆಲೋಚನೆ ಮಾಡಲಿದ್ದೇವೆ" ಎಂದು ಕೊಹ್ಲಿ ತಿಳಿಸಿದರು.
ಶಿಖರ್ ಧವನ್ ಹಾಗೂ ಕೆಎಲ್ ರಾಹುಲ್ ದ್ವಿತೀಯ ವಿಕೆಟ್‌ಗೆ 121 ರನ್‌ಗಳ ಜತೆಯಾಟ ನೀಡಿದ್ದರು. ಇವರಿಬ್ಬರು ಅನುಕ್ರಮವಾಗಿ 74 ಹಾಗೂ 47 ರನ್ ಗಳಿಸಿದ್ದರು. ಆದರೆ ಆಸೀಸ್ ಬೌಲರ್‌ಗಳಿಗೆ ಹೆಚ್ಚು ಗೌರವ ಕೊಟ್ಟು ಬ್ಯಾಟಿಂಗ್ ಮಾಡಿರುವುದು ಹಿನ್ನೆಡೆಗೆ ಕಾರಣವಾಯಿತು. "ಇದು ಕೆಲವು ಆಟಗಾರರಿಗೆ ಅವಕಾಶ ನೀಡುವ ವಿಚಾರವಾಗಿದೆ. ಆಗೊಮ್ಮೆ ಹೀಗೊಮ್ಮೆ ಬ್ಯಾಟ್ಸ್‌ಮನ್‌ಗಳಿಗೆ ಬಡ್ತಿ ನೀಡುವ ಮೂಲಕ ಪ್ರಯೋಗ ಮಾಡುತ್ತಿದ್ದೇವೆ. ಒಂದು ಪಂದ್ಯದಿಂದ ಅಭಿಮಾನಿಗಳು ಗಾಬರಿಗೊಳ್ಳದೆ ರಿಲ್ಯಾಕ್ಸ್ ಆಗಿರಬೇಕು. ನನಗೆ ಪ್ರಯೋಗ ಮಾಡುವ ಅನುಮತಿಯಿದೆ. ಆದರೆ ಕೆಲವೊಮ್ಮೆ ವೈಫಲ್ಯ ಅನುಭವಿಸುತ್ತೇವೆ. ಇಂದು ನಮ್ಮ ಯೋಜನೆಗಳು ಫಲಿಸಲಿಲ್ಲ" ಎಂದು ವಿರಾಟ್ ಎಂದರು.
ಏಕದಿನದಲ್ಲಿ ಟೀಂ ಇಂಡಿಯಾ ಹಾಗೂ ವಿರಾಟ್ ಕೊಹ್ಲಿಗೆ ಅತಿ ಹೆಚ್ಚು ಯಶಸ್ಸನ್ನು ತಂದುಕೊಟ್ಟಿರುವ ಮೂರನೇ ಕ್ರಮಾಂಕವನ್ನು ಬಿಟ್ಟು ನಾಲ್ಕನೇ ಕ್ರಮಾಂಕದಲ್ಲಿ ಆಡಿರುವುದಕ್ಕೆ ಭಾರತದ ಬಹುತೇಕ ಮಾಜಿ ಆಟಗಾರರು ಅಸಂತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆ. ವಿವಿಎಸ್ ಲಕ್ಷ್ಮಣ್, ಹರ್ಭಜನ್ ಸಿಂಗ್ ಎಲ್ಲರೂ ವಿರಾಟ್ ಕೊಹ್ಲಿ ನಿರ್ಧಾರವು ತಪ್ಪಾಗಿದ್ದು, ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಪ್ರಯೋಗಕ್ಕೆ ಮುಂದಾಗಬಾರದಿತ್ತು ಎಂದಿದ್ದಾರೆ. ಆದ್ದರಿಂದ ವಿರಾಟ್ ಮತ್ತೇ 3ನೇ ಕ್ರಮಾಂಕದಲ್ಲಿ ಆಡುವ ಮುನ್ಸೂಚನೆಗಳು ಸಿಕ್ಕಿವೆ.