ಬೆಂಗಳೂರು: ಇಂದು ನಡೆಯಲಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 3ನೇ ಹಾಗೂ ಅಂತಿಮ ಏಕದಿನ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು ಈ ಪಂದ್ಯ ವೀಕ್ಷಿಸಲು ಆಗಮಿಸುವ ಅಭಿಮಾನಿಗಳು ಕ್ರೀಡಾಂಗಣಕ್ಕೆ ಈ ವಸ್ತುಗಳನ್ನು ತರುವುದನ್ನು ನಿಷೇಧಿಸಲಾಗಿದೆ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯ ಮಾಡು ಇಲ್ಲವೇ ಮಡಿ ಎನ್ನುವ ಹಂತಕ್ಕೆ ಬಂದು ತಲುಪಿದೆ. ಮೊದಲನೇ ಪಂದ್ಯದಲ್ಲಿ ಸೋತಿದ್ದ ಭಾರತ ರಾಜ್ ಕೋಟ್ ನಲ್ಲಿ ನಡೆದ 2ನೇ ಪಂದ್ಯದಲ್ಲಿ 36 ರನ್ ಗೆಲುವು ಸಾಧಿಸಿತು. ಈ ಮೂಲಕ ಸರಣಿ 1-1 ಅಂತರದಲ್ಲಿ ಸಮಬಲ ಸಾಧಿಸಿದೆ. ಇದೀಗ ಜನವರಿ 19ರಂದು ಬೆಂಗಳೂರಲ್ಲಿ ನಡೆಯಲಿರುವ 3ನೇ ಹಾಗೂ ಅಂತಿಮ ಏಕದಿನ ಪಂದ್ಯದ ಫಲಿತಾಂಶ ಕಪ್ ಯಾರಿಗೆ ಎಂಬುದನ್ನು ನಿರ್ಧರಿಸಲಿದೆ.
ಭಾರತ ಹಾಗೂ ಆಸ್ಟೇಲಿಯಾ 3ನೇ ಏಕದಿನ ಪಂದ್ಯ ವೀಕ್ಷಿಸಲು ಆಗಮಿಸುವ ಅಭಿಮಾನಿಗಳಲ್ಲಿ ಕರ್ನಾಟಕ ಕ್ರಿಕೆಟ್ ಸಂಸ್ಥೆ ಮನವಿ ಮಾಡಿದೆ. ಬ್ಯಾನರ್, ಪ್ಲೇ ಕಾರ್ಡ್, ಪೇಪರ್, ಬಟ್ಟೆ, ಮಾರ್ಕ್ ಪೆನ್, ರಾಜಕೀಯ ಪ್ರೇರಿತ ಘೋಷ ವಾಕ್ಯ ಮುಂತಾದ ವಸ್ತುಗಳ ಜೊತೆ ಕ್ರೀಡಾಂಗಣ ಪ್ರವೇಶಿಸಲು ನಿರಾಕರಿಸಲಾಗಿದೆ ಎಂದು ಕೆಎಸ್ಸಿಎ ಕಾರ್ಯದರ್ಶಿ ಸಂತೋಶ್ ಮೆನನ್ ಹೇಳಿದ್ದಾರೆ.
ಕ್ರೀಡಾಂಗಣದೊಳಗೆ ಈ ವಸ್ತುಗಳು ನಿಷೇಧ:
ಸ್ಫೋಟಕ ವಸ್ತುಗಳು, ಲೈಟರ್, ಬೆಂಕಿ ಕಡ್ಡಿ, ಸಿಗರೇಟ್, ಬೀಡಿ, ವಾಟರ್ ಕ್ಯಾನ್, ವಾಟರ್ ಬಾಟಲ್, ಟೊಯ್ ಗನ್, ಚಾಕು, ಚೂರಿ, ಕತ್ತರಿ, ಉಗುರು ಕತ್ತರಿ, ಯಾವುದೇ ಹರಿತ ವಸ್ತುಗಳು, ಪಟಾಕಿ, ಸ್ಮೋಕ್ ಬಾಂಬ್, ಪೆಟ್ರೋಲ್, ಡೀಸೆಲ್, ಬ್ಯಾಗ್, ಸೇರಿದಂತೆ ಕೆಲ ವಸ್ತುಗಳನ್ನು ನಿಷೇಧಿಸಲಾಗಿದೆ. ವಿಡಿಯೋ ಹಾಗೂ ಸ್ಟಿಲ್ ಕ್ಯಾಮರ, ಬೈನಾಕ್ಯುಲರ್, ಹ್ಯಾಂಡಿಕ್ಯಾಮ್, ಲ್ಯಾಪ್ಟಾಪ್, ಟ್ಯಾಬ್ಲೆಟ್, ಐಪಾಡ್, ಪೆನ್ ಡ್ರೈವ್, ಪವರ್ ಬ್ಯಾಂಕ್, ಎಲೆಕ್ಟ್ರಾನಿಕ್ ಗ್ಯಾಜೆಟ್ಸ್, ಹೆಡ್ಫೋನ್, ಇಯರ್ ಫೋನ್ ನಿಷೇಧಿಸಲಾಗಿದೆ.ಲಿಕ್ಕರ್, ಪರ್ಫ್ಯುಮ್ಸ್, ಜೆಲ್ ಹಾಗೂ ಕಾಸ್ಮೆಟಿಕ್ಸ್ ಕೂಡ ನಿಷೇಧಿಸಲಾಗಿದೆ. ಬಾವುಟದ ಕೋಲು, ಕೊಡೆ, ಬ್ಯಾಕ್ಪ್ಯಾಕ್, ಥರ್ಮೋ ಫ್ಲಾಸ್ಕ್, ಬ್ರೀಫ್ ಕೇಸ್, ಹೆಲ್ಮೆಟ್, ಗುಟ್ಕಾ, ಸುಪಾರಿ ಹಾಗೂ ಸಾಕು ಪ್ರಾಣಿಗಳ ಜೊತೆಗೆ ಕ್ರೀಡಾಂಗಣ ಪ್ರವೇಶಿಸಲು ಸಂಪೂರ್ಣವಾಗಿ ನಿಷೇಧಿಸಲಾಗಿದೆ.