ಆಕ್ಲೆಂಡ್: ಟೀಂ ಇಂಡಿಯಾದ ಉಪನಾಯಕ ರೋಹಿತ್ ಶರ್ಮಾ ಹಿಟ್‍ ಮ್ಯಾನ್ ಎಂದೇ ಖ್ಯಾತಿ ಪಡೆದಿದ್ದಾರೆ. ತಾವು ಅತ್ಯುತ್ತಮ ಬ್ಯಾಟ್ಸ್ ಮನ್ ಮಾತ್ರವಲ್ಲ, ಉತ್ತಮ ಫೀಲ್ಡರ್ ಎಂದು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಸಾಬೀತು ಪಡಿಸಿದ್ದಾರೆ.ಹೌದು, ಹಿಟ್ ಮ್ಯಾನ್ ಸೂಪರ್ ಮ್ಯಾನ್ ಆಗಿ ಕ್ಯಾಚ್ ಹಿಡಿದಿರುವುದು ಇದೀಗ ಅಭಿಮಾನಿಗಳನ್ನು ಕ್ಲೀನ್ ಬೋಲ್ಡ್ ಮಾಡಿದೆ. ಅಷ್ಟಕ್ಕೂ ಹಿಟ್ ಮ್ಯಾನ್ ಆ ಕ್ಯಾಚ್ ಹಿಡಿದಿದ್ದಾದರೂ ಹೇಗೆ ಗೊತ್ತಾ! 
 
ಕಿವೀಸ್ ವಿರುದ್ಧದ ಟ20 ಸರಣಿಯ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ಅದ್ಭುತ ಕ್ಯಾಚ್ ಪಡೆದು ಅಭಿಮಾನಿಗಳನ್ನು ಬೆರಗುಗೊಳಿಸಿದ್ದಾರೆ. ಶಿವಂ ದುಬೆ ಬೌಲ್ ಮಾಡಿದ ಇನ್ನಿಂಗ್ಸ್ 8ನೇ ಓವರಿನ 5 ಎಸೆತದಲ್ಲಿ ಘಟನೆ ನಡೆದಿದ್ದು, ಮಾರ್ಟಿನ್ ಗಪ್ಟಿಲ್ ಸಿಡಿಸಿದ ಭರ್ಜರಿ ಶಾಟ್‍ ಗೆ ಚೆಂಡು ಬೌಂಡರಿ ಗೆರೆ ದಾಡುವ ಸನಿಹದಲ್ಲಿತ್ತು. ಈ ಹಂತದಲ್ಲಿ ಬೌಂಡರಿ ಗೆರೆ ಬಳಿ ಇದ್ದ ರೋಹಿತ್ ಶರ್ಮಾ ಜಂಪ್ ಮಾಡಿ ಕ್ಯಾಚ್ ಪಡೆದಿದ್ದರು. ರೋಹಿತ್ ಶರ್ಮಾರ ಈ ಪ್ರಯತ್ನಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಬೌಂಡರಿ ಗೆರೆಗೆ ತಾಗದಂತೆ ರೋಹಿತ್ ಕ್ಯಾಚ್ ಪೂರ್ಣಗೊಳಿಸಿದ್ದು ಹೈಲೈಟ್ ಅಂಶವಾಗಿದೆ. ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಇನ್ನಿಂಗ್ಸ್ ಆರಂಭಿಸಿದ ಕಿವೀಸ್ ಮನ್ರೊ 59ರನ್, ಕೇನ್ ವಿಲಿಯಮ್ಸ್‌ನ್ 51 ರನ್, ರಾಸ್ ಟೇಲರ್ ಅವರ ಅಜೇಯ 54ರನ್ ಗಳ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 203 ರನ್ ಗಳಿಸಿತು.
 
204ರನ್‍ ಗಳ ಬೃಹತ್ ರನ್ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ ಕೆ.ಎಲ್.ರಾಹುಲ್ 56ರನ್ ಹಾಗೂ ಶ್ರೇಯಸ್ ಅಯ್ಯರ್ ಔಟಾಗದೆ 58 ರನ್ ಗಳ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದಿಂದ 6 ಎಸೆತ ಬಾಕಿ ಇರುವಂತೆಯೇ ಗುರಿ ಮುಟ್ಟಿತು. ಇದರೊಂದಿಗೆ ಟೀಂ ಇಂಡಿಯಾ ಟಿ20 ಮಾದರಿಯಲ್ಲಿ ವಿದೇಶಿ ನೆಲದಲ್ಲಿ ಅತ್ಯಧಿಕ ಸ್ಕೋರ್ ಚೇಸ್ ಮಾಡಿ ಗೆದ್ದ ಸಾಧನೆಯನ್ನು ಮಾಡಿದೆ. ಮುಂದಿನ ಪಂದ್ಯ ಜ.26 ಭಾನುವಾರ ನಡೆಯಲಿದೆ.

Find out more: