ಹೊಸದಿಲ್ಲಿ: ಭಾರತ ಕ್ರಿಕೆಟ್‌ ಆಯ್ಕೆ ಸಮಿತಿಯ 2 ಸ್ಥಾನಕ್ಕೆ ಮಾಜಿ ಕ್ರಿಕೆಟಿಗರಲ್ಲಿ ಅನೇಕರು ಅರ್ಜಿ ಸಲ್ಲಿಸಿದ್ದಾರೆ. ಆಯ್ಕೆ ಸಮಿತಿ ಅಂದ್ರೆ ಸಾಮಾನ್ಯ ವಿಷಯವಲ್ಲ. ವಿಶ್ವ ಮಟ್ಟದಲ್ಲಿ ಟೀಂ ಇಂಡಿಯಾದಲ್ಲಿ ಗೆಲ್ಲುವ ಸಮರ್ಥ ಆಟಗಾರರನ್ನು ಆಯ್ಕೆ ಮಾಡಲು ಸಮರ್ಥ ಶಕ್ತಿ ಸಾಮರ್ಥ್ಯ ಗಳಿರಬೇಕು. ಇದೀಗ ಕಳೆದ ಬಾರಿಯ ಆಯ್ಕೆ ಸಮಿತಿಯ ಅವಧಿ ಮುಗಿದಿದ್ದು ಈಗಾಗಲೇ ತಿಂಗಳುಗಳೇ ಕಳೆದಿವೆ. ಇನ್ನು ಹೊಸ ಸಮಿತಿಯನ್ನು ಸ್ಥಾಪಿಸದ ಕಾರಣಕ್ಕೆ ಅದೇ ಸಮಿತಿಯನ್ನು ಮುಂದುವರೆಸಲಾಗಿತ್ತು. ಇದೀಗ ಹೊಸ ಆಯ್ಕೆ ಸಮಿತಿಯ ರಚನೆಗೆ ಬಿಸಿಸಿಐ ಮುಂದಾಗಿದ್ದು, ಯಾರಾಗ್ತಾರೆ ಬಿಸಿಸಿಐ ನ ಮುಂದಿನ ಆಯ್ಕೆ ಸಮಿತಿಯ ಅಧ್ಯಕ್ಷರು ಎಂಬುದು ಕುತೂಹಲ ಕೆರಳಿಸಿದೆ. 
 
ಬಿಸಿಸಿಐನ ಆಯ್ಕೆ ಸಮಿತಿಯ ಪಟ್ಟಿಯಲ್ಲಿ ಹಲವು ಪ್ರಮುಖರ ಹೆಸರು ಕೇಳಿ ಬಂದಿದ್ದು, ಈ ಪಟ್ಟಿಗೆ ಅಜಿತ್‌ ಅಗರ್ಕರ್‌ ಹೆಸರು ಕೂಡ ಸೇರ್ಪಡೆಗೊಂಡಿದೆ. ಅಗರ್ಕರ್‌ ಹೆಸರೀಗ ಮುಂಚೂಣಿಯಲ್ಲಿದ್ದು, ಒಂದು ವೇಳೆ ಅವರು ಆಯ್ಕೆಯಾದರೆ ಅಧ್ಯಕ್ಷ ಸ್ಥಾನವೂ ಅವರಿಗೆ ಸಿಗುವುದು ಖಚಿತ ಎನ್ನಲಾಗಿದೆ. ಕರ್ನಾಟಕದ ವೆಂಕಟೇಶ್‌ ಪ್ರಸಾದ್‌ ಕೂಡ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅವರು ಕಿರಿಯರ ಆಯ್ಕೆ ಸಮಿತಿ ಮುಖ್ಯಸ್ಥರಾಗಿದ್ದಾರೆ. ಒಂದೂವರೆ ವರ್ಷದ ಅಧಿಕಾರದ ಅವಧಿ ಬಾಕಿ ಇರುವುದು ಪ್ರಸಾದ್‌ಗೆ ಅಡ್ಡಗಾಲಾಗುವ ಸಾಧ್ಯತೆ ಇದೆ.
 
ಇದು ಅಗರ್ಕರ್‌ ಹಾದಿಯನ್ನು ಸುಗಮಗೊಳಿಸಿದೆ. ಆಗ ಮುಂಬಯಿಯವರಾದ ಅವರು ಆಯ್ಕೆ ಸಮಿತಿಯಲ್ಲಿ ಪಶ್ಚಿಮ ವಲಯವನ್ನು ಪ್ರತಿನಿಧಿಸಲಿದ್ದಾರೆ. ಏಕದಿನದಲ್ಲಿ ಬರೀ 23 ಪಂದ್ಯಗಳಿಂದ 50 ವಿಕೆಟ್‌ ಉರುಳಿಸಿ ದಾಖಲೆ ನಿರ್ಮಿಸಿರುವ ಅಗರ್ಕರ್‌ ಒಟ್ಟು 26 ಟೆಸ್ಟ್‌, 191 ಏಕದಿನ, 3 ಟಿ20 ಪಂದ್ಯಗಳನ್ನು ಆಡಿ 349 ವಿಕೆಟ್‌ ಪಡೆದಿದ್ದಾರೆ. ಏಕದಿನದಲ್ಲಿ ಭಾರತದ 3ನೇ ಗರಿಷ್ಠ ವಿಕೆಟ್‌ ಸಾಧಕನಾಗಿದ್ದಾರೆ (288).
 
ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳು: ಅಜಿತ್‌ ಅಗರ್ಕರ್‌ (ಮುಂಬಯಿ), ವೆಂಕಟೇಶ ಪ್ರಸಾದ್‌ (ಕರ್ನಾಟಕ), ಚೇತನ್‌ ಶರ್ಮ (ಹರ್ಯಾಣ), ನಯನ್‌ ಮೊಂಗಿಯ (ಬರೋಡ), ಎಲ್‌. ಶಿವರಾಮಕೃಷ್ಣನ್‌ (ತಮಿಳುನಾಡು), ರಾಜೇಶ್‌ ಚೌಹಾಣ್‌ (ಮಧ್ಯಪ್ರದೇಶ), ಅಮಯ್‌ ಖುರಾಶಿಯ (ಮಧ್ಯಪ್ರದೇಶ), ಗ್ಯಾನೇಂದ್ರ ಪಾಂಡೆ (ಉತ್ತರಪ್ರದೇಶ), ಪ್ರೀತಮ್‌ ಗಂಧೆ (ವಿದರ್ಭ).

Find out more: