ಹ್ಯಾಮಿಲ್ಟನ್: 2-0 ಅಂತರದಲ್ಲಿ ಗೆದ್ದು ಬೀಗುತ್ತಿರುವ ಟೀಂ ಇಂಡಿಯಾ ಇದೀಗ ಕಿವೀಸ್ ನೆಲದಲ್ಲಿ ಸರಣಿ ಗೆದ್ದು ಬೀಗುವ ಮೂಲಕ ದಾಖಲೆ ಬರೆಯಲು ಸಜ್ಜಾಗಿದೆ. ಈ ದಾಖಲೆ ಬರೆಯಲು ಈ ಪಂದ್ಯ ಗೆದ್ದರೆ ಸಾಕು. ಆ ದಾಖಲೆ ಬರೆಯೋದು ಫಿಕ್ಸ್.
 
ಭಾರತೀಯ ಕ್ರಿಕೆಟ್ ತಂಡವು ನ್ಯೂಜಿಲೆಂಡ್ ನೆಲದಲ್ಲಿ ಚೊಚ್ಚಲ ಟ್ವೆಂಟಿ-20 ಸರಣಿ ಗೆಲುವಿನ ಹುಡುಕಾಟದಲ್ಲಿದೆ. ಈ ಮೈಲುಗಲ್ಲು ಬರೆಯಲು ಇನ್ನೊಂದು ಗೆಲುವಿನ ಅಗತ್ಯವಿದೆ. ಇದರೊಂದಿಗೆ ವಿರಾಟ್ ಕೊಹ್ಲಿ ಪಡೆ ಕಿವೀಸ್ ನಾಡಲ್ಲಿ ನೂತನ ಇತಿಹಾಸ ಬರೆಯಲಿದೆ. ನ್ಯೂಜಿಲೆಂಡ್ ವಿರುದ್ಧ ಸಾಗುತ್ತಿರುವ ಐದು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಮೊದಲೆರಡು ಪಂದ್ಯಗಳಲ್ಲಿ ಅಧಿಕಾರಯುತ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ, 2-0 ಅಂತರದ ಮಹತ್ವದ ಮುನ್ನಡೆ ದಾಖಲಿಸಿದೆ. ಇದೀಗ ಸರಣಿ ವಶಪಡಿಸಿಕೊಳ್ಳಲು ಇನ್ನೊಂದು ಪಂದ್ಯ ಗೆಲ್ಲಬೇಕಿದೆ.
 
ಆಕ್ಲೆಂಡ್‌ನಲ್ಲಿ ನಡೆದ ಮೊದಲೆರಡು ಪಂದ್ಯಗಳಲ್ಲಿ ಅನುಕ್ರಮವಾಗಿ ಆರು ಹಾಗೂ ಏಳು ವಿಕೆಟ್ ಅಂತರದ ಗೆಲುವು ಬಾರಿಸಿರುವ ಟೀಮ್ ಇಂಡಿಯಾ ಅಬ್ಬರಿಸಿದೆ. ಇದೀಗ ಹ್ಯಾಮಿಲ್ಟನ್‌ನಲ್ಲಿ ಬುಧವಾರ ಸಬ್ಬನ್ ಪಾರ್ಕ್‌ನಲ್ಲಿ ನಡೆಯಲಿರುವ ಪಂದ್ಯದಲ್ಲೂ ಗೆಲುವು ದಾಖಲಿಸುವ ಇರಾದೆಯಲ್ಲಿದೆ. ಈ ಹಿಂದೆ ಎರಡು ಬಾರಿ ಕಿವೀಸ್ ಪ್ರವಾಸ ಕೈಗೊಂಡಾಗ ಭಾರತ ಟಿ20 ಸರಣಿಯಲ್ಲಿ ಸೋಲನುಭವಿಸಿತ್ತು. 2009ರಲ್ಲಿ 0-2 ಹಾಗೂ 2019ರಲ್ಲಿ 1-2ರ ಅಂತರದ ಸರಣಿ ಸೋಲಿಗೆ ಗುರಿಯಾಗಿತ್ತು.ಮೊದಲ ಪಂದ್ಯವು ಹೈ ಸ್ಕೋರಿಂಗ್ ಆಗಿದ್ದರೆ ದ್ವಿತೀಯ ಪಂದ್ಯದಲ್ಲಿ ಸ್ಕೋರಿಂಗ್ ಪೈಪೋಟಿ ಏರ್ಪಟ್ಟಿತ್ತು. ಬ್ಯಾಟಿಂಗ್ ವಿಭಾಗದಲ್ಲಿ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಅಮೋಘ ಫಾರ್ಮ್‌ನಲ್ಲಿದ್ದಾರೆ. ಈ ಪೈಕಿ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಕರ್ನಾಟಕದ ರಾಹುಲ್, ಬ್ಯಾಕ್ ಟು ಬ್ಯಾಕ್ ಫಿಫ್ಟಿ ಮೂಲಕ ಗಮನ ಸೆಳೆದಿದ್ದಾರೆ
 
ಇನ್ನೊಂದೆಡೆ ಆಗಲೇ ಗಾಯದ ಸಮಸ್ಯೆಯಿಂದ ಹಿನ್ನೆಡೆ ಎದುರಿಸಿರುವ ನ್ಯೂಜಿಲೆಂಡ್ ತಂಡವು ಸತತ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಟ್ರೆಂಟ್ ಬೌಲ್ಟ್ ಹಾಗೂ ಲೂಕಿ ಫೆರ್ಗ್ಯೂಸನ್ ಗಾಯದಿಂದಾಗಿ ಅಲಭ್ಯವಾಗಿದ್ದಾರೆ. ಇದು ಸಹ ಟೀಂ ಇಂಡಿಯಾ ಗೆಲುವಿಗೆ ವರದಾನವಾಗಲಿದೆ.

Find out more: