ಹ್ಯಾಮಿಲ್ಟನ್: ಸೂಪರ್ ಓವರಿನ ಕೊನೆಯ ಎರಡು ಎಸೆತದಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ ಎರಡು ಸಿಕ್ಸರ್ ಸಿಡಿಸಿ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದಾರೆ. ಈ ಮೂಲಕ ಭಾರತ ಮೂರನೇ ಟಿ20 ಪಂದ್ಯದೊಂದಿಗೆ ಸರಣಿ ಗೆದ್ದು ನ್ಯೂಜಿಲೆಂಡಿನಲ್ಲಿ ಇತಿಹಾಸ ನಿರ್ಮಿಸಿದೆ. ಹೌದು, ಕಿವೀಸ್ ನೆಲದಲ್ಲಿ ಕಿವೀಸ್ ತಂಡದ ಕಿವಿ ಇಂಡಿದೆ ಟೀಂ ಇಂಡಿಯಾ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ರೋಹಿತ್ ಶರ್ಮಾರ ಅರ್ಧಶತಕದ ನೆರವಿನಿಂದ 179 ರನ್ ಕಲೆಹಾಕಿತು. ನ್ಯೂಜಿಲೆಂಡ್ ನಿಗದಿತ 20 ಓವರ್ ಗಳಲ್ಲಿ 179 ರನ್ ಗಳಿಸಿದ ಪರಿಣಾಮ ಪಂದ್ಯ ಟೈ ಆಯ್ತು. ಹೀಗಾಗಿ ಪಂದ್ಯದ ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಯ್ತು. ಸೂಪರ್ ಒವರ್ ನಲ್ಲಿ ಟೀಂ ಇಂಡಿಯಾ ಹಿಟ್ ಮ್ಯಾನ್ ರೋಹಿತ್ ಆರ್ಭಟದಿಂದ ಗೆದ್ದು ಬೀಗಿತು.
ಟೀಂ ಇಂಡಿಯಾ ನೀಡಿದ್ದ 180 ರನ್‍ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ಆರಂಭದಲ್ಲೇ ಆಘಾತಕ್ಕೆ ಒಳಗಾಯಿತು. ಭಾರತದ ಯುವ ವೇಗದ ಬೌಲರ್ ಶಾರ್ದೂಲ್ ಠಾಕೂರ್ ಭರ್ಜರಿ ಬ್ಯಾಟಿಂಗ್ ನಡೆಸಿದ್ದ ಗಪ್ಟಿಲ್ ವಿಕೆಟ್ ಕಿತ್ತರು. ಈ ಮೂಲಕ ಮೊದಲ ವಿಕೆಟ್‍ಗೆ 47ರನ್‍ಗಳ ಜೊತೆಯಾಟ ಕಟ್ಟಿದ್ದ ಗಪ್ಟಿಲ್ ಹಾಗೂ ಮನ್ರೊ ಜೋಡಿಯನ್ನು ಶಾರ್ದೂಲ್ ಮುರಿದರು. ಈ ಬೆನ್ನಲ್ಲೇ 14ರನ್ ಗಳಿಸಿದ್ದ ಮನ್ರೋ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು.ಆದರೆ ಮಿಚೆಲ್ ಸ್ಯಾಂಟ್ನರ್ 9 ರನ್ ಹಾಗೂ ಕಾಲಿನ್ ಡಿ ಗ್ರ್ಯಾಂಡ್‍ಹೋಮ್ 5ರನ್ ಗೆ ವಿಕೆಟ್ ಒಪ್ಪಿಸಿದರು. ವಿಲಿಯಮ್ಸನ್ 95ರನ್(48ಎಸೆತ, 8ಬೌಂಡರಿ, 6ಸಿಕ್ಸರ್) ಹೊಡೆದು ಕೊನೆಯ ಓವರಿನಲ್ಲಿ ಔಟಾಗಿದ್ದು ನ್ಯೂಜಿಲೆಂಡ್ ಸೋಲಿಗೆ ಪ್ರಮುಖ ಕಾರಣವಾಯ್ತು.
ಧೋನಿಯ ದಾಖಲೆ ಮುರಿದ ಕೊಹ್ಲಿ:
ಪಂದ್ಯದಲ್ಲಿ 25ರನ್ ಗಳಿಸಿದ ನಂತರ ಕೊಹ್ಲಿ ನಾಯಕನಾಗಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಹಿಂದೆ ಇದ್ದ ಮಹೇಂದ್ರ ಸಿಂಗ್ ಧೋನಿ ಅವರ ದಾಖಲೆಯನ್ನು ಕೊಹ್ಲಿ ಮುರಿದರು. ಧೋನಿ 72 ಪಂದ್ಯಗಳಲ್ಲಿ 37.06 ಸರಾಸರಿಯಲ್ಲಿ 1,112 ರನ್ ಗಳಿಸಿದ್ದಾರೆ. ಕೊಹ್ಲಿ 36ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಮೂರನೇ ಸ್ಥಾನದಲ್ಲಿ ರೋಹಿತ್ ಶರ್ಮಾ ಇದ್ದಾರೆ.